ಕುಮಟಾ: ಇಂದಿನ ವಿದ್ಯಾರ್ಥಿಗಳು ದೇಶಪ್ರೇಮ, ಪ್ರಾಮಾಣಿಕತೆ ಹಾಗೂ ಸತ್ಚಾರಿತ್ರ್ಯ ರೂಢಿಸಿಕೊಂಡು ದೇಶದ ಉತ್ತಮ ನಾಗರಿಕರಾಗಬೇಕು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರವೀಣ ಹೆಗಡೆ ಹೇಳಿದರು.
ತಾಲೂಕಿನ ಮೂರೂರು-ಕಲ್ಲಬ್ಬೆಯ ಶ್ರೀ ವಿದ್ಯಾನೀಕೇತನದ ಪ್ರಗತಿ ವಿದ್ಯಾಲಯದ 2022-23ನೇಯ ಶಾಲಾ ವಿದ್ಯಾರ್ಥಿ ಪರಿಷತ್ ಉದ್ಘಾಟಿಸಿ ಅವರು ಮಾತನಾಡಿದರು. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚೆಚ್ಚು ಪಾಲ್ಗೊಳ್ಳಬೇಕಿದ್ದು, ಶಾಲಾ ಸಂಸತ್ ಮೂಲಕ ವಿವಿಧ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡು ಸಾಧಿಸಿ, ಇತರ ಶಾಲೆಗಳಿಗೆ ಮಾದರಿಯಾಗಬೇಕೆಂದು ಕರೆ ನೀಡಿದರು.
ಇಂದಿನ ರಾಜಕಾರಣದಲ್ಲಿ ಪ್ರಾಮಾಣಿಕತೆ ಕಡಿಮೆಯಾಗುತ್ತಿದೆ ಎಂದರೆ ತಪ್ಪಾಗಲಾರದು. ಬದಲಾದ ಪರಿಸ್ಥಿತಿಯಲ್ಲಿ ವಿಚಾರಧಾರೆಗಳು ಬದಲಾಗುತ್ತದೆ. ಕಾಲ ಕಾಲಕ್ಕೆ ಕಾನೂನುಗಳಿಗೆ ಸಾಣೆ ಹಿಡಿಯುವ ಅವಶ್ಯಕತೆ ಕಂಡಿತ ಇದೆ ಎಂದ ಅವರು, ಭಾರತವನ್ನು ವಿಶ್ವಗುರು ಸ್ಥಾನದಲ್ಲಿ ನೋಡಬೇಕೆಂಬುದು ಪ್ರತಿಯೊಬ್ಬ ಭಾರತೀಯನ ಕನಸಾಗಿದ್ದು, ಆ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಶೀಲರಾಗೋಣ ಎಂದರು.
ಪರಿಷತ್ ಪದಾಧಿಕಾರಿಗಳ ನಾಮಫಲಕ ಅನಾವರಣಗೊಳಿಸಿ ಸಂಸ್ಥೆ ಕಾರ್ಯದರ್ಶಿ ಟಿ.ಎಸ್.ಭಟ್ಟ ಮಾತನಾಡಿ, ಪ್ರತಿ ವಿದ್ಯಾರ್ಥಿಗಳಲ್ಲಿ ಸಾಮರ್ಥ್ಯ ಅಡಗಿರುತ್ತದೆ. ಅದಕ್ಕೆ ಸೂಕ್ತ ವೇದಿಕೆ ಲಭಿಸಿದಾಗ ಅವರಲ್ಲಿರುವ ಸಾಮರ್ಥ್ಯ ಹೊರ ಪ್ರಪಂಚಕ್ಕೆ ತೆರೆದುಕೊಳ್ಳುತ್ತದೆ. ವಿದ್ಯಾರ್ಥಿಗಳು ಪಠ್ಯದ ಜತೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಶಾಲೆಗೆ ಕೀರ್ತಿಯನ್ನು ದೇಶಮಟ್ಟದಲ್ಲಿ ಬೆಳಗಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪ್ರೌಢಶಾಲೆ ಮುಖ್ಯಾಧ್ಯಾಪಕ ವಿ.ಎಸ್.ಗೌಡ ಮಾತನಾಡಿ, ಅಕ್ಷರದ ಜತೆ ಸಂಸ್ಕಾರ ನೀಡುವುದು ನಮ್ಮ ಶಿಕ್ಷಣ ಸಂಸ್ಥೆಯ ಮೂಲ ಉದ್ದೇಶವಾಗಿದ್ದು, ಪ್ರಜಾಪ್ರಭುತ್ವದ ಮಾದರಿಯಲ್ಲಿ ಶಾಲಾ ಸಂಸತ್ ಚುನಾವಣೆ ನಡೆಸಿ, ವಿದ್ಯಾರ್ಥಿಗಳಲ್ಲಿ ಚುನಾವಣೆಯ ಪ್ರಕ್ರಿಯೆಗಳ ಕುರಿತು ಜಾಗೃತಿ ಮೂಡಿಸಲಾಗಿದೆ. ಇದಕ್ಕೆ ಶಾಲೆಯ ಎಲ್ಲ ಶಿಕ್ಷಕರ ಪರಿಶ್ರಮವಿದೆ. ವಿದ್ಯಾರ್ಥಿಗಳು ಅತಿ ಉತ್ಸಾಹದಿಂದ ಚುನಾವಣೆಯಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ ಎಂದರು.
ಸಂಸತ್ ವೃಕ್ಷ ಅನಾವರಣಗೊಳಿಸಿ, ಸಂಸ್ಥೆಯ ಕಾರ್ಯಾಧ್ಯಕ್ಷ ಆರ್.ಜಿ.ಭಟ್ಟ ಮಾತನಾಡಿ, ರಾಜಕಾರಣಿಗಳ ಜತೆ ಪ್ರಜೆಗಳಿಗೂ ಅವರದ್ದೇ ಆದ ಜವಾಬ್ದಾರಿಗಳಿದ್ದು, ಜನಪ್ರತಿನಿಧಿ ತಪ್ಪು ಮಾಡಿದಾಗ ಪ್ರಜೆಗಳು ಎಚ್ಚರಿಸಬೇಕು ಎಂದ ಅವರು, ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಯರ ಪ್ರೇರಣೆಯಂತೆ ಶಾಲೆಯು ಉತ್ತಮವಾಗಿ ನಡೆಯುತ್ತಿದೆ ಎಂದರು.
ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ವಿದ್ಯಾರ್ಥಿನಿ ಸುಷ್ಮಾ ಸ್ವಾಗತಿಸಿದಳು. ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಮನೋಹರ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿನಿಯರಾದ ಪ್ರೇಮಾ, ಪೂಜಾ, ಸುಷ್ಮಾ ನಿರೂಪಿಸಿದರು. ವಿದ್ಯಾರ್ಥಿ ಅರುಣ ವಂದಿಸಿದನು. ಶಿಕ್ಷಣ ವಿಭಾಗದ ಸಂಚಾಲಕ ಟಿ.ಆರ್.ಜೋಶಿ, ಪ್ರಗತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ.ಎಂ.ಭಟ್ಟ, ಪ್ರಾಥಮಿಕ ವಿಭಾಗದ ಮುಖ್ಯಾಧ್ಯಾಪಕಿ ನಾಗವೇಣಿ ವೇದಿಕೆಯಲ್ಲಿ ಇದ್ದರು.