ಯಲ್ಲಾಪುರ: ನನ್ನನ್ನು ನಾನು ತಿಳಿಯುವುದು, ನನ್ನ ಕೊರತೆ, ದೌರ್ಬಲ್ಯ, ತಪ್ಪುಗಳನ್ನು ಅರಿಯುವುದು; ನಾನು ಹೇಗಿರಬೇಕು ಮತ್ತು ಹೇಗಿರಬಾರದು ಎಂಬುದನ್ನು ತಿಳಿಯುವುದು ಆಧ್ಯಾತ್ಮವಾಗಿದೆ ಎಂದು ಪಟ್ಟಣದ ಶಾರದಾಗಲ್ಲಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಸಹೋದರಿ ವಾಣಿಶ್ರೀ ಹೇಳಿದರು.
ಪತ್ರಿಕಾ ದಿನಾಚರಣೆಯ ಪ್ರಯುಕ್ತ ಗುರುವಾರ ತಮ್ಮ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಧ್ಯಾತ್ಮ, ದೇವರು, ಗುರು ಮತ್ತಿತರ ಸಂಗತಿಗಳ ಕುರಿತು ವರದಿಗಾರರಿಗೆ ಮಾಹಿತಿ ನೀಡಿದರು.
ಕಣ್ಣಿಗೆ ಕಾಣದ ಭಗವಂತ ಎಲ್ಲ ಭಕ್ತರಿಗೂ ನೀಡುವ ಫಲ ಒಂದೇ ಬಗೆಯದು. ಆದರೆ ಅದನ್ನು ಸ್ವೀಕರಿಸುವವರ ಮನಃಸ್ಥಿತಿ ವಿಭಿನ್ನವಾಗಿರುತ್ತದೆ ಎಂದ ಅವರು ಏಕಾಗ್ರತೆ ಎಲ್ಲರಲ್ಲೂ ಇದ್ದರೂ, ಅದನ್ನು ಬಳಸುವ ಕ್ರಮವನ್ನು ಅವಲಂಬಿಸಿ ಅದು ಅನುಭವಕ್ಕೆ ಬರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ತಾಲೂಕಿನ ಪತ್ರಕರ್ತರನ್ನು ಗೌರವಿಸಿದ ಬ್ರಹ್ಮಕುಮಾರಿ ಶಿವಲೀಲಾ ಮಾತನಾಡಿ, ಪತ್ರಕರ್ತರದು ಕಣ್ಣಿಗೆ ಕಾಣದ, ಜವಾಬ್ದಾರಿಯುತ ಕಾರ್ಯವಾಗಿದ್ದು, ಇದು ನಿರಂತರ ಸ್ಪಂದನಶೀಲ. ಸಮಾಜದಲ್ಲಿ ಸ್ಪಂದನೆ ಇರದಿದ್ದರೆ ಯಾವ ಅಭಿವೃದ್ಧಿಯೂ ಅಸಾಧ್ಯ. ಇಂತಹ ಪತ್ರಕರ್ತರು ಸಮಾಜದ ಏಳಿಗೆಗಾಗಿ ಆಹಾರ, ನಿದ್ರೆಗಳನ್ನು ತೊರೆದು ಮಾಡುವ ಶ್ರಮಪೂರ್ವಕ ಕ್ರಿಯೆ ಶ್ಲಾಘನೀಯವಾದುದು ಎಂದರು.
ಅತಿಥಿಗಳಾಗಿದ್ದ ಕರ್ನಾಟಕ ಜರ್ನಲಿಸ್ಟ್ ಅಸೋಸಿಯೇಷನ್ ರಾಜ್ಯ ಸಮಿತಿ ಸದಸ್ಯ ನಾಗರಾಜ ಮದ್ಗುಣಿ ಮಾತನಾಡಿ, ಪತ್ರಕರ್ತರು ಮೊದಲಿಗೆ ತಮ್ಮನ್ನು ತಾವು ತಿಳಿದುಕೊಳ್ಳಬೇಕು. ಕ್ರೌರ್ಯ ಮತ್ತು ಅಸಂಬದ್ಧತೆಯ ಸುದ್ದಿಗಳನ್ನು ಇತ್ತೀಚೆಗೆ ಬಯಸುವ ಓದುಗರ ಸಂಖ್ಯೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಜನರ ಮನೋಭಾವವನ್ನು ಪರಿವರ್ತಿಸುವ ಸಾಧ್ಯತೆಗಳ ವರದಿಗೆ ಆಧ್ಯತೆ ನೀಡುವಂತಾಗಬೇಕು. ವರದಿಗಾರ ತನ್ನೊಳಗಿನ ಅಹಂ ತ್ಯಜಿಸಿದರೆ ಅದು ಸಮಾಜಕ್ಕೆ ಉತ್ತಮ ಸಂದೇಶ ನೀಡಲು ಸಾಧ್ಯ ಎಂದರು.
ಮತ್ತೋರ್ವ ಅತಿಥಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಸಮಿತಿ ಕಾರ್ಯದರ್ಶಿ ನರಸಿಂಹ ಸಾತೊಡ್ಡಿ ಮಾತನಾಡಿ, ಪತ್ರಕರ್ತರಾದವರು ತಮ್ಮನ್ನು ತಾವು ಅರಿತು, ತನ್ಮೂಲಕ ಗೌರವಿಸಿಕೊಳ್ಳಬೇಕು. ಈ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಬಹುಶ್ರುತ ಪ್ರತಿಭೆ ಇರಬೇಕಾದುದು ಅತ್ಯವಶ್ಯ ಎಂದರು.