ಮುಂಡಗೋಡ: ರೋಟರಿ ಕ್ಲಬ್ ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು, ಇದು ಆರೋಗ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದೆ. ಇನ್ನು ಮುಂದೆಯೂ ನೀಡುತ್ತದೆ ಎಂದು ಹುಬ್ಬಳ್ಳಿಯ ರೋಟರಿ ಅಧಿಕಾರಿ ವಾಸುಕಿ ಸಾಂಜಿ ಹೇಳಿದರು.
ಅವರು ಇಲ್ಲಿನ ರೋಟರಿ ಕ್ಲಬ್‌ನ 2022- 23ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನೆರವೇರಿಸಿ ಮಾತನಾಡಿ, ಪೊಲಿಯೋ ನಿರ್ಮೂಲನೆಯಿಂದ ಹಿಡಿದು, ಗ್ರಾಮೀಣ ಕ್ಷೇತ್ರಗಳಲ್ಲಿ ಉಚಿತ ಆರೋಗ್ಯ ಶಿಬಿರ ಮಾಡುವುದು, ಸರಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್, ನವಜಾತ ಶಿಶುಗಳ ತೀವ್ರ ನಿಗಾ ಘಟಕ ಸ್ಥಾಪಿಸುವುದು ಇನ್ನೂ ಮುಂತಾದ ಆರೋಗ್ಯ ಕಾರ್ಯಕ್ರಮಗಳನ್ನು ರೋಟರಿಯಿಂದ ಮಾಡಲಾಗುತ್ತಿದೆ ಎಂದರು.
ರೋಟರಿಯ ಉಪ ಪ್ರಾಂತಪಾಲ, ಹುಬ್ಬಳ್ಳಿಯ ಅಶೋಕ ಪಾಟೀಲ ಮಾತನಾಡಿ, ಮುಂಡಗೋಡ ರೋಟರಿ ಕ್ಲಬ್ಬಿನವರು ಈ ವರ್ಷ ನಡೆಸುವ ಎಲ್ಲಾ ಚಟುವಟಿಕೆಗಳಿಗೆ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು.
ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರಾಗಿ ಬೈಜು ವಿ.ಜೆ., ಕಾರ್ಯದರ್ಶಿಯಾಗಿ ಸುರೇಶ ಮಂಜಾಳಕರ, ಖಜಾಂಚಿಯಾಗಿ ಕಲ್ಮೇಶ ಟೋಪೋಜಿ ಅಧಿಕಾರ ಸ್ವೀಕರಿಸಿದರು. ನೂತನ ಅಧ್ಯಕ್ಷ ಬೈಜು ವಿ.ಜೆ. ಮಾತನಾಡಿ, ಈ ವರ್ಷ ಎಲ್ಲರ ಸಹಕಾರ ಪಡೆದು ಮುಂಡಗೋಡ ತಾಲೂಕಿನ ಜನತೆಗೆ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ವಿಶೇಷವಾಗಿ ಹ್ಯಾಪ್ಪಿ ಸ್ಕೂಲ್, ಹ್ಯಾಂಡ್ ವಾಷ್ ಪ್ರೊಜೆಕ್ಟ್, ವಿದ್ಯಾರ್ಥಿಗಳಿಗೆ ಕಿಟ್ ಮುಂತಾದವುಗಳನ್ನು ನೀಡಲು ಯೋಜನೆ ರೂಪಿಸಲಾಗಿದೆ ಎಂದರು.
ಪ್ರಾರಂಭದಲ್ಲಿ ಮಾಜಿ ಅಧ್ಯಕ್ಷ ಶಾಜಿಥೋಮಸ್ ಸ್ವಾಗತಿಸಿದರು. 2021-22ನೇ ಸಾಲಿನಲ್ಲಿ ಕ್ಲಬ್‌ನ ವತಿಯಿಂದ ನಡೆಸಲಾದ ಕಾರ್ಯಕ್ರಮಗಳ ವೀಡಿಯೋ ದೃಶ್ಯವನ್ನು ಎಸ್.ಕೆ.ಬೋರಕರ ನಡೆಸಿಕೊಟ್ಟರು. ಕಾರ್ಯಕ್ರಮದ ನಿರೂಪಣೆಯನ್ನು ವಸಂತ ಕೊಣಸಾಲಿ ಮಾಡಿದರು. ಕಾರ್ಯದರ್ಶಿ ಸುರೇಶ ಮಂಜಾಳಕರ ವಂದಿಸಿದರು.