ಹೊನ್ನಾವರ: ಮೂರು ತಿಂಗಳ ಹಿಂದೆ ನಿರ್ಮಾಣವಾದ ಪಶು ಆಸ್ಪತ್ರೆ ಪ್ರಥಮ ಮಳೆಯಲ್ಲೆ ಸೋರುತ್ತಿದ್ದು, ನಿರ್ಮಾಣವಾದ ತಡೆಗೋಡೆ ಕುಸಿತ ಸಂಭವಿಸಿದ ಘಟನೆ ತಾಲೂಕಿನ ಬಳ್ಕೂರ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಂಭವಿಸಿದೆ.
2021- 22ನೇ ಸಾಲಿನ ಪಶುಪಾಲನೆ ಮತ್ತು ಪಶುಸೇವಾ ಇಲಾಖೆಯ ಐಆರ್ಡಿಎಫ್ ನಬಾರ್ಡ್ ಯೋಜನೆಯಡಿ ಎನ್ಪಿಸಿಸಿಎಲ್ ಕಂಪನಿ ಈ ಕಟ್ಟಡ ನಿರ್ಮಾಣದ ಗುತ್ತಿಗೆ ಪಡೆದಿತ್ತು. ಈ ಕಟ್ಟಡ ನಿರ್ಮಾಣ ಎಷ್ಟು ಕಳಪೆಯಾಗಿದೆ ಎಂದರೆ ಇಲಾಖೆಗೆ ಹಸ್ತಾಂತರಿಸುವ ಮೊದಲು ಕಟ್ಟಡ ಸೋರುತ್ತಿದ್ದು, ಒಂದು ಭಾಗದ ತಡೆಗೋಡೆ ಈಗಾಗಲೇ ಕುಸಿದು ಬಿದ್ದಿದೆ.
ಈ ಕಟ್ಟಡ ನಿರ್ಮಾಣ ಹಂತದಲ್ಲಿ ಸ್ಥಳಿಯರು ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಕಟ್ಟಡಕ್ಕೆ ಸರಿಯಾಗಿ ನೀರು ನೀಡುತ್ತಿಲ್ಲ. ಹೀಗೆ ನಿರ್ಮಾಣವಾದರೆ ಕಟ್ಟಡ ನಿಲ್ಲುತ್ತದೆಯೇ ಎಂದು ಸಾರ್ವಜನಿಕರು ಪ್ರಶ್ನಿಸಿದಾಗ ನಾವು ರಾಜ್ಯದೆಲ್ಲೆಡೆ 300ಕ್ಕೂ ಅಧಿಕ ಕಟ್ಟಡ ನಿರ್ಮಿಸಿದ್ದೇವೆ. ನಿಮ್ಮಿಂದ ಸಲಹೆ ಪಡೆಯುವ ಅಗತ್ಯವಿಲ್ಲ ಎಂದು ಸಾರ್ವಜನಿಕರಿಗೆ ಉಡಾಫೆ ರೀತಿಯಲ್ಲಿ ಉತ್ತರ ನೀಡಿದ್ದರು. ಇದೀಗ ಕಟ್ಟಡ ಸೋರುತ್ತಿದ್ದು, ತಡೆಗೋಡೆ ಕುಸಿತಗೊಂಡ ಬಳಿಕ ಸಾರ್ವಜನಿಕರು ಸರ್ಕಾರಿ ಹಣ ದುಂದುವೆಚ್ಚ ಮಾಡಿದ ಗುತ್ತಿಗೆದಾರ ಹಾಗು ಇಂಜಿನಿಯರ್ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.
‘ಸರ್ಕಾರಿ ಕೆಲಸ ಅಂದರೆ ಕಳಪೆ ಕೆಲಸ ಎನ್ನುವಂತೆ ಈ ಕಟ್ಟಡ ನಿರ್ಮಿಸಿರುದು ಈಗ ಬೆಳಕಿಗೆ ಬಂದಿದ್ದರು,ಈ ಕಳಪೆ ಕಾಮಗಾರಿಗೆ ಸಂಬಂಧಿಸಿ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಈ ಬಗ್ಗೆ ಪ್ರಶ್ನಿಸಿದರೆ ಹಾರಿಕೆ ಉತ್ತರ ನೀಡುವುದು, ಹಾಗೂ ಸಂಬಂಧಿಸಿದ ಅಧಿಕಾರಿಗಳ ಮೇಲೆ ಸ್ವಲ್ಪ ಮಟ್ಟಿಗೆ ರೇಗಾಡುವುದರಲ್ಲೆ ಕಾಲ ಕಳೆಯುತ್ತಿದ್ದಾರೆ. ಸ್ಥಳೀಯ ನಿವಾಸಿಗಳು ಗ್ರಾಮ ಪಂಚಾಯತಿ ಪ್ರತಿನಿಧಿಗಳ ಗಮನಕ್ಕೆ ತಂದು ಸ್ಥಳಕ್ಕೆ ಕರೆ ತಂದು ಮಾಹಿತಿ ನೀಡುವ ಕೆಲಸವನ್ನು ಮಾಡಿದ್ದಾರೆ. ಶಾಸಕ ಸುನೀಲ ನಾಯ್ಕ ಅವರು ಕೂಡ ಸ್ಥಳಕ್ಕೆ ಭೇಟಿ ನೀಡಿ ಇದನ್ನು ಸರಿಪಡಿಸಿ, ಇಲ್ಲವಾದರೆ ಸದನದಲ್ಲಿ ವಿಷಯ ಪ್ರಸ್ತಾಪಿಸುವುದಾಗಿ ಅಧಿಕಾರಿಗಳು ಮತ್ತು ಇಂಜನಿಯರ್ಗೆ ಎಚ್ಚರಿಕೆ ನೀಡಿದ್ದಾರೆ.
ಕಟ್ಟಡ ನಿರ್ಮಾಣವಾದ ಪ್ರಥಮ ಮಳೆಗಾಲದ ಆರಂಭದಲ್ಲೆ ಈ ಕಟ್ಟಡದ ಸ್ಥಿತಿ ಹೀಗಾದರೆ ಹೇಗೆ? ಇಂತಹ ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರ ಪರವಾನಗಿ ರದ್ದುಪಡಿಸುವ ಜೊತೆ ಸಂಬಂಧಿಸಿದ ಇಂಜನಿಯರ್ ಮೇಲೂ ಕ್ರಮ ಕೈಗೊಳ್ಳುವ ಮೂಲಕ ತಕ್ಕ ಪಾಠ ಕಲಿಸಬೇಕು ಎನ್ನುವುದು ಸಾರ್ವಜನಿಕರ ಒಕ್ಕೊರಲ ಆಗ್ರಹವಾಗಿದೆ.