ಯಲ್ಲಾಪುರ: ಪತ್ರಿಕಾ ವಿತರಕರು ಮಳೆ,ಗಾಳಿ, ಚಳಿಯೆನ್ನದೇ ನಸುಕಿನಲ್ಲಿಯೇ ಮನೆ ಮನೆಗೆ ಪ್ರತಿದಿನ ಪತ್ರಿಕೆ ಮುಟ್ಟಿಸುತ್ತಿರುವುದರಿಂದ ನಮ್ಮಂತಹ ಹಿರಿಯರಿಗೆ ಹಾಗೂ ಮಕ್ಕಳಿಗೂ ಓದುವ ಅಭಿರುಚಿ ಹೆಚ್ಚಿಸಿ ಅದನ್ನು ಕಾಯ್ದುಕೊಳ್ಳಲು ಸಾಧ್ಯವಾಗಿದೆ. ಶ್ರಮ ಬೇಡುವ ಅವರ ಕಾಯಕಕ್ಕೆ ಯಾವುದೂ ಸರಿಸಾಟಿಯಿಲ್ಲವಾದರೂ ನಮ್ಮಿಂದಾದ ಕೊಡುಗೆ ನೀಡಿ ಗೌರವಿಸುತ್ತಿದ್ದೇವೆ ಎಂದು ಪಟ್ಟಣದ ಶಮಾ ಭಾರತ ಗ್ಯಾಸ ಏಜೆನ್ಸಿ ಮಾಲೀಕ ಎ.ಎ. ಶೇಖ ಹೇಳಿದರು.
ಅವರು ಪಟ್ಟಣದ ಶಮಾ ಭಾರತ ಗ್ಯಾಸ್ ಏಜೆನ್ಸಿಯ ಕೇಂದ್ರ ಕಚೇರಿಯಲ್ಲಿ ಪತ್ರಿಕೆಯ ವಿತರಕರರಿಗೆ ರೇನ್ ಕೋಟ್ ವಿತರಿಸಿ ಮಾತನಾಡಿ, ಪತ್ರಿಕೆ ವಿತರಕರು ರಸ್ತೆಯಲ್ಲಿ ಎಚ್ಚರಿಕೆಯಿಂದ ಸಂಚರಿಸಬೇಕು. ಇತ್ತೀಚೆಗೆ ವಿಪರೀತ ಅಪಘಾತಗಳು ಗಡಿಬಿಡಿಯ ಕಾರಣದಿಂದ ಸಂಭವಿಸುತ್ತಿವೆ. ಹಾಗೆಯೇ ತಮ್ಮ ಆರೋಗ್ಯದ ಕಡೆಗೂ ಗಮನ ನೀಡಬೇಕು ಎಂದರು. ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾಧ್ಯಕ್ಷ ಜಯರಾಜ ಗೋವಿ ಹಾಗೂ ತಾಲೂಕಾಧ್ಯಕ್ಷ ಅನಿಲ ಭಟ್ ವಿತರಕರ ಪರವಾಗಿ ಮಾತನಾಡಿ, ನಮ್ಮ ಕಾಯಕವನ್ನು ಶ್ರದ್ಧೆಯಿಂದ ಮುಂದುವರೆಸಿಕೊಂಡು ಹೋಗಲು ತಮ್ಮಂತಹ ಸಹೃದಯದವರ ಬೆಂಬಲದಿಂದ ಸಾಧ್ಯವಾಗುತ್ತಿದೆ. ಮಳೆಗಾಲದಲ್ಲಿ ಉತ್ತಮ ಗುಣಮಟ್ಟದ ರೇನ್ ಕೋಟ್ ನೀಡಿ ಗೌರವಿಸಿದ್ದಕ್ಕೆ ಚಿರರುಣಿಯಾಗಿದ್ದೇವೆ ಎಂದರು. ಶಮಾ ಭಾರತ ಗ್ಯಾಸ್ ಏಜೆನ್ಸಿ ಪಾಲುದಾರ ಅಬ್ದುಲ್ ಮಜೀಬ್ ಶೇಖ ಇದ್ದರು. ಪ್ರಭಾವತಿ ನಿರ್ವಹಿಸಿದರು. ವಿತರಕರಾದ ವಿನಾಯಕ ವೆರ್ಣೇಕರ, ಅಮೃತ ಹಂದೆ, ರಾಜು ಉಡುಪಿಕರ, ಪ್ರಶಾಂತ ಗೋಖಲೆ, ದೀಪಕ ಕಲಾಲ, ಸಾಗರ, ರಾಕೇಶ, ಅಭಿ ಮತ್ತಿತರರು ಇದ್ದರು.