ಕುಮಟಾ: ಪಟ್ಟಣದ ಬಸ್ಸು ತಂಗುದಾಣಕ್ಕೆ ಹೊಂದಿಕೊಂಡಿರುವ ನೀರು ಹೋಗುವ ಕಾಲುವೆ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ಹತ್ತು ಲಕ್ಷ ರೂಪಾಯಿ ಕೊಡುವುದಾಗಿ ಶಾಸಕ ದಿನಕರ ಶೆಟ್ಟಿ ಹೇಳಿದರು.
ಮಳೆ ಬಂತು ಅಂದರೆ ಕಿರಿದಾದ ಕಾಲುವೆ ತುಂಬಿ ರಸ್ತೆಯ ಮೇಲೆ ನೀರಿನ ಹೊಳೆ ಹರಿಯುವುದರಿಂದ ಸಾರ್ವಜನಿಕರಿಗೆ ನಿತ್ಯದ ಸಮಸ್ಯೆಯಂತಾಗಿತ್ತು. ಈ ಸಮಸ್ಯೆಯ ಶಾಶ್ವತ ಪರಿಹಾರದ ಉದ್ದೇಶದಿಂದ ಸ್ಥಳಕ್ಕೆ ಭೇಟಿ ನೀಡಿ ಶೀಘ್ರದಲ್ಲಿ ಹೊಸ ಕಾಲುವೆ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು. ಕಾಲುವೆ ನಿರ್ಮಾಣಕ್ಕೆ ಅಡ್ಡಿ ಉಂಟಾಗಿದ್ದವಿದ್ಯುತ್ ಕಂಬವನ್ನು ತೆರವುಗೊಳಿಸಿ ಸ್ವಲ್ಪ ಮುಂದಕ್ಕೆ ಹೂಳುವಂತೆ ಹೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.
ಮಣ್ಣು ತೆರವಿಗೆ ಆದೇಶ: ಪಟ್ಟಣದ ಕರ್ಕಿನಾಕಾ, ಬಾಂದೆಗದ್ದೆ, ಸರ್ಪಿ ಸೆಂಟರ್, ನವನಗರ ಕಾಲೋನಿಯ ಸ್ಥಳೀಯ ನಿವಾಸಿಗಳು ಸ್ಥಳೀಯ ವ್ಯಕ್ತಿಯೊಬ್ಬರಿಂದ ಈ ಹಿಂದಿನಿಂದಲು ನೈಸರ್ಗಿಕವಾಗಿ ಹರಿದು ಹೋಗುತ್ತಿದ್ದ ನೀರನ್ನು ಮಣ್ಣು ಹಾಕಿ ತಡೆದಿದ್ದಾರೆ. ಅದನ್ನು ತೆರವು ಗೊಳಿಸಬೇಕೆಂದು ಎಂದು ಮನವಿ ಮಾಡಿಕೊಂಡಿದ್ದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕರು ಮಣ್ಣು ತೆರವುಗೊಳಿಸಿ ಸ್ಥಳೀಯ ವಿವಾಸಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಐ. ಆರ್.ಬಿ ಗೆ ತಾಕೀತು: ಕರ್ಕಿನಾಕಾ ಹತ್ತಿರ ಐ.ಆರ್. ಬಿಯವರು ನಡೆಸುತ್ತಿರುವ ಹೆದ್ದಾರಿ ಕಾಮಗಾರಿಯಿಂದ ನೀರು ರಸ್ತೆಗೆ ಹರಿದು ಬರುತ್ತಿತ್ತು. ರಸ್ತೆಗೆ ನೀರು ಬರದಂತೆ ತಡೆದು ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಐ. ಆರ್, ಬಿ ಅಧಿಕಾರಿಗಳಿಗೆ ಶಾಸಕರು ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಪ.ಪಂ. ಅಧ್ಯಕ್ಷ ಶಿವರಾಜ್ ಮೇಸ್ತ, ಸದಸ್ಯ ವಿಜಯ್ ಕಾಮತ್, ಉಳಿದ ಪ.ಪಂ. ಸದಸ್ಯರು, ಸಿಪಿಐ ಶ್ರೀಧರ್ ಎಸ್.ಆರ್. ಹೆಸ್ಕಾಂ ಅಧಿಕಾರಿಗಳು, ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.