ಅಂಕೋಲಾ: ತಾಲೂಕಿನ ಹೊನ್ನಳ್ಳಿಯಲ್ಲಿನ ಪದ್ಮಶ್ರೀ ತುಳಸಿ ಗೌಡ ಅವರ ನಿವಾಸ ಸಂಪರ್ಕಿಸುವ ಕಿರು ಸೇತುವೆಗೆ 25 ಲಕ್ಷ ರೂ. ಹಾಗೂ ರಸ್ತೆಗೆ 15 ಲಕ್ಷ ರೂ. ಮಂಜೂರಾಗಿದ್ದು, ಮಳೆಗಾಲದ ತರುವಾಯ ಕಾಮಗಾರಿ ಶುರುವಾಗಲಿದೆ. ತುಳಸಿ ಗೌಡ ಅವರ ಸಂಚಾರಕ್ಕಾಗಿ ತಾತ್ಕಾಲಿಕ ಸೇತುವೆಯನ್ನು ವಾರದೊಳಗೆ ನಿರ್ಮಿಸಲಾಗುವುದು ಎಂದು ಶಾಸಕಿ ರೂಪಾಲಿ ಎಸ್.ನಾಯ್ಕ ಭರವಸೆ ನೀಡಿದ್ದಾರೆ.
ತುಳಸಿ ಗೌಡ ಅವರ ನಿವಾಸದ ಬಳಿ ಸೇತುವೆ ಹಾಗೂ ರಸ್ತೆಗಾಗಿ 40 ಲಕ್ಷ ರೂ. ಮಾರ್ಚ 2022ರಲ್ಲೇ ಮಂಜೂರಾಗಿದೆ. ಇದನ್ನು ತಾವು ತುಳಸಿ ಗೌಡ ಅವರ ಗಮನಕ್ಕೂ ತಂದಿದ್ದೆ. ಆದರೆ ವಿಧಾನ ಪರಿಷತ್ ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭವಾಗಿಲ್ಲ. ನಂತರ ಮಳೆ ಬಂದಿದ್ದರಿಂದ ಮತ್ತೆ ವಿಳಂಬವಾಯಿತು. ವೃಕ್ಷಮಾತೆ ತುಳಸಿ ಗೌಡ ಅವರ ಮನವಿ ಹಿನ್ನೆಲೆಯಲ್ಲಿ ಈ ರಸ್ತೆ ಹಾಗೂ ಸೇತುವೆ ಕಾಮಗಾರಿಯನ್ನು ಮಂಜೂರು ಮಾಡಲಾಗಿತ್ತು.
ಎಲ್ಲೆಡೆ ಭಾರಿ ಮಳೆ ಬೀಳುತ್ತಿದೆ. ಪದ್ಮಶ್ರೀ ತುಳಸಿ ಗೌಡ ಅವರ ನಿವಾಸದ ಬಳಿಯೂ ನೀರು ತುಂಬಿರುವುದನ್ನು ಗಮನಿಸಿದ್ದೇನೆ. ಅವರಿಗೆ ಸಂಚಾರಕ್ಕೆ ತೊಂದರೆಯಾಗದಂತೆ ವಾರದೊಳಗೆ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಿಕೊಡಲಾಗುವುದು. ಮಳೆಗಾಲ ಮುಗಿದ ತರುವಾಯ ಶಾಶ್ವತ ಸೇತುವೆ ನಿರ್ಮಾಣ ಕಾರ್ಯ ಆರಂಭವಾಗಲಿದೆ. ವೃಕ್ಷಮಾತೆ ತುಳಸಿ ಗೌಡ ಹಾಗೂ ಹಾಡುಹಕ್ಕಿ ಸುಕ್ರಿ ಗೌಡ ಅವರು ನಮ್ಮ ಕ್ಷೇತ್ರದ ಹೆಮ್ಮೆಯಾಗಿದ್ದು ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ರೂಪಾಲಿ ಎಸ್.ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.