ಶಿರಸಿ: ಮಳೆಗಾಲದ ನಂತರದ 8 ತಿಂಗಳು ಸಂಪರ್ಕದ ಕೊರತೆಯಿಂದ ಸೌಕರ್ಯ ವಂಚಿತವಾಗಿರುವ ತಾಲೂಕಿನ, ವಾನಳ್ಳಿ ಗ್ರಾಮ ಪಂಚಾಯಿತಿಯ, ಮುಸ್ಕಿ ಗ್ರಾಮದ, ಹಗುರಮನೆ ಮತ್ತು ಮೇಲಿನಗದ್ದೆ ಗ್ರಾಮಕ್ಕೆ ತಹಶೀಲ್ದಾರ್ ಶ್ರೀಧರ ಮುಂದಲಮನೆ ಅವರು ಭೇಟಿಕೊಟ್ಟು ಪರಿಶೀಲಿಸಿ ಅರಣ್ಯ ಪ್ರದೇಶದಿಂದ ತುರ್ತು ದ್ವಿಚಕ್ರ ವಾಹನ ಸಂಚಾರಕ್ಕೆ ನಿರ್ದೇಶನ ನೀಡಿದ್ದಾರೆ ಎಂದು ಗ್ರಾಮಸ್ಥರ ಯುವಮುಂದಾಳು ರಾಮು ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಾಮಕ್ಕೆ ಸೇತುವೆ, ತುರ್ತು ಸಂಪರ್ಕ ರಸ್ತೆಯಿಲ್ಲದೇ ಗ್ರಾಮಸ್ಥರಿಗೆ ಬದುಕಲು ಕಷ್ಟವಾಗುವುದರಿಂದ ಬದುಕಲು ಅವಕಾಶ ಮಾಡಿಕೋಡಬೇಕೆಂದು ಜು.8 ರಂದು ಗ್ರಾಮಸ್ಥರು ಹಾಸಿಗೆ, ದಿಂಬು, ಕಂಬಳಿ ಜೊತೆಯಲ್ಲಿಯೇ ತಹಶೀಲ್ದಾರ್ ಕಛೇರಿಗೆ ಬಂದು ಧರಣಿ, ಸತ್ಯಾಗ್ರಹ ಜರುಗಿಸಿದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅವರು 24 ಗಂಟೆಯ ಒಳಗೆ ಗ್ರಾಮಕ್ಕೆ ಭೇಟಿಕೋಟ್ಟು ಪರಿಶೀಲಿಸುವುದಾಗಿ ತಿಳಿಸದ ಹಿನ್ನೆಲೆಯಲ್ಲಿ ಇಂದು ಸಿಬ್ಬಂದಿ ಜೊತೆಯಲ್ಲಿ ಭೇಟಿಕೊಟ್ಟು ಮೇಲಿನಂತೆ ನಿರ್ದೇಶನ ನೀಡಿದ್ದಾರೆ.
ಈ ಗ್ರಾಮದಿಂದ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜುಗಳಿಗೆ ಹೋಗುವ ಮಕ್ಕಳುಗಳಿಗೆ ರಸ್ತೆಯ ಸಂಪರ್ಕ, ಕಾಲುಸಂಕವಿಲ್ಲದೇ ಖಾಸಗಿ ಮತ್ತು ಇನ್ನೀತರ ಅತೀಕ್ರಮಣ ಕ್ಷೇತ್ರದಿಂದ ಅರಣ್ಯ ಮತ್ತು ಗಿಡ ಗಂಟಿಗಳ ಮಧ್ಯದಿಂದಲೇ ಓಡಾಡುತ್ತಿರುವ ಸ್ಥಳವನ್ನ ಸುಮಾರು ಮೂರು ತಾಸಿನವರೆಗೆ ಸಂಪೂರ್ಣ ಕಾಲ್ನಡಿಗೆಯಿಂದ ಮಳೆಯಲ್ಲೂ ತಹಶೀಲ್ದಾರ್ ಸಿಬ್ಬಂದಿಯೊಂದಿಗೆ ಸಂಚರಿಸಿರುವುದು ಗ್ರಾಮಸ್ಥರ ಗಮನ ಸೆಳೆಯಿತು. ತುರ್ತು ತಾತ್ಪೂರ್ತಿಕ ದ್ವಿಚಕ್ರ ವಾಹನ ಸಂಚಾರಿ ವ್ಯವಸ್ಥೆಗೆ ಅನುವು ಮಾಡಿಕೊಟ್ಟ ತಹಶೀಲ್ದಾರ್ ಅವರಿಗೆ ಗ್ರಾಮಸ್ಥರು ಅಭಿನಂದಿಸಿದರು.
ಹೋರಾಟ ಮುಂದುವರಿಕೆ : ದಶಕಗಳ ಬೇಡಿಕೆಯಾದ ಗ್ರಾಮ ಸಂಪರ್ಕದ ಶಾಶ್ವತ ರಸ್ತೆ ಮತ್ತು ಸೇತುವೆಗಾಗಿ ಸಾರ್ವಜನಿಕ ಸಂಘ, ಸಂಸ್ಥೆಗಳ ಸಹಕಾರದೊಂದಿಗೆ ಹೋರಾಟ ಮುಂದುವರೆಸಲಾಗುವುದು. ಬದುಕಲು ಅವಕಾಶ ಮಾಡಿಕೊಡಲು ಸರಕಾರದ ಮೇಲೆ ಒತ್ತಡ ತರಲಾಗುವುದೆಂದು ರಾಮಾ ಗೌಡ ಮತ್ತು ಸಾವಿತ್ರಿ ಗೌಡ ಈ ಸಂದರ್ಭದಲ್ಲಿ ತಿಳಿಸಿದರು.