ಕುಮಟಾ:ಕಾರವಾರದಲ್ಲಿ 1939ರ ಜುಲೈ 8ರಂದು ಸ್ಥಾಪನೆಯಾದ ಅಖಿಲ ಭಾರತೀಯ ಕೊಂಕಣಿ ಪರಿಷತ್ತಿನ 84ನೇ ಸಂಸ್ಥಾಪನಾ ದಿನವನ್ನು ಜು.8ರಂದು ಬೆಳಿಗ್ಗೆ 10 ಗಂಟೆಗೆ ಕುಮಟಾದ ರೋಟರಿಯ ನಾದಶ್ರೀ ಕಲಾಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ತಿನ ಅಧ್ಯಕ್ಷ ಅರುಣ ಉಭಯಕರ ತಿಳಿಸಿದ್ದಾರೆ.
ದಿ.ಮಾಧವ ಮಂಜುನಾಥ ಶ್ಯಾನುಭಾಗ ಹೆರವಟ್ಟಾ ಪರಿಷತ್‌ನ ಮೂಲ ಸಂಸ್ಥಾಪಕರಾಗಿದ್ದು, ಕೊಂಕಣಿ ಜನರಲ್ಲಿ ತಮ್ಮ ಮಾತೃಭಾಷೆಯ ಕುರಿತು ಸ್ವಾಭಿಮಾನ ಹಾಗೂ ಜಾಗೃತಿ ಉಂಟು ಮಾಡಲು ಸತತವಾಗಿ ಊರಿಂದೂರಿಗೆ ತಿರುಗಾಡಿ ಪರಿಶ್ರಮಪಟ್ಟ ಫಲವಾಗಿ ಇಂದು ಬೃಹತ್ ಸಂಘಟನೆಯಾಗಿ ಮೈದಳೆದಿದೆ. ಈ ಸಂಸ್ಥೆಯಲ್ಲಿ ಗೋವಾ, ಮಹಾರಾಷ್ಟ್ರ, ಕೇರಳ ಹಾಗೂ ಕರ್ನಾಟಕ ಈ ನಾಲ್ಕು ರಾಜ್ಯಗಳ ಪ್ರತಿನಿಧಿಗಳು ಪ್ರಾತಿನಿಧ್ಯ ಹೊಂದಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ನಂದಗೋಪಾಲ ಶೆಣೈ, ಅಧ್ಯಕ್ಷರು ಕೊಂಕಣಿ ಭಾಷೆ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಇವರು ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಗೋವಾದ ಕೊಂಕಣಿ ಚಳುವಳಿಗಾರ ಹಾಗೂ ಸಾಹಿತಿ ಅರವಿಂದ ಭಾಟಿಕರ ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಿಷತ್ತಿನ ಅಧ್ಯಕ್ಷರಾದ ಅರುಣ ಉಭಯಕರ ವಹಿಸಲಿದ್ದಾರೆ. 11 ಗಂಟೆಯಿಂದ ಮಾತೃಭಾಷೆ ಹಾಗೂ ಕೊಂಕಣಿ ಪರಿಷತ್ತಿನ ಕುರಿತು ಹಿರಿಯ ಚಿಂತಕ ತ್ರಿವಿಕ್ರಮ ಬಾಬಾ ಪೈ ಅವರ ಅಧ್ಯಕ್ಷತೆಯಲ್ಲಿ ವಿಚಾರ ಸಂಕಿರಣ ನಡೆಯಲಿದೆ.
11.30ಕ್ಕೆ ಗೋವಾದ ಕವಿ ಗೌರೀಶ್ ವೆರ್ಣೇಕರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಕವಿಗಳಾದ ನಾಗೇಶ್ ಅಣ್ವೇಕರ ಕಾರವಾರ, ವಾಸುದೇವ ಶಾನಭಾಗ ಶಿರಸಿ, ವನಿತಾ ನಾಯಕ ಕುಮಟಾ ಭಾಗವಹಿಸಲಿದ್ದಾರೆ. 12.30ರಿಂದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕೊಂಕಣಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಪ್ರೋತ್ಸಾಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಸಂಘಟಕರು ಕೋರಿದ್ದಾರೆ.