ಕಾರವಾರ: ಹಿರಿಯ ನಾಗರಿಕರೊಬ್ಬರು ತಮ್ಮ ನಿವೃತ್ತಿ ಸಮುದಲ್ಲಿ ಸಿಕ್ಕ ಹಣವನ್ನು ಎದುರುದಾರರ ಸೊಸೈಟಿಯಲ್ಲಿ ಠೇವಣಿ ಹಣ ಇರಿಸಿದ್ದು, ಸದರಿ ಠೇವಣಿ ಹಣವು ಪಕ್ವಗೊಂಡ ನಂತರ ದೂರುದಾರರಿಗೆ ನೀಡದೇ ಎದುರುದಾರರ ಸೇವಾ ನ್ಯೂನತೆ ಹಾಗೂ ಅನುಚಿತ ವ್ಯಾಪರ ನೀತಿಯನ್ನು ಅನುಸರಿಸಿದ್ದರಿಂದ ಸೊಸೈಟಿಗೆ ರೂ.4,96,898 ಲಕ್ಷ ಮೊತ್ತಗಳಿಗೆ ಶೇ.9.5 ರ ಬಡ್ಡಿಯೊಂದಿಗೆ ಪಾವತಿಸುವಂತೆ ಇಲ್ಲಿನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಪ್ರಕರಣದ ಹಿನ್ನಲೆ : ಕಾರವಾರದ ಕೋಡಿಬಾಗ ನಿವಾಸಿಯಾದ ದಿನಕರ ನಾಗಪ್ಪ ನಾಯ್ಕರವರು ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದು, ಕಾರವಾರದ ಆಶ್ರಯ ಪತ್ತಿನ ಸಹಕಾರ ಸಂಘದಲ್ಲಿ ತಮ್ಮ ನಿವೃತ್ತಿ ಸಮಯದಲ್ಲಿ ಸಿಕ್ಕ ಹಣವನ್ನು ಒಟ್ಟು 3 ಠೇವಣಿಗಳಲ್ಲಿ ಇರಿಸಿದ್ದು, ಸದರಿ ಠೇವಣಿಗಳು ಪಕ್ವಗೊಂಡರೂ ಠೇವಣಿ ಹಣ ನೀಡದೇ ಸೇವಾ ನ್ಯೂನತೆ ಎಸಗಿದ್ದು ತಮ್ಮ ಠೇವಣಿ ಮೊತ್ತವನ್ನು ಪಾವತಿಸುವಂತೆ ಕೋರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪ್ರಕರಣವನ್ನು ದಾಖಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಪ್ರಭಾರ ಅಧ್ಯಕ್ಷ ಡಾ.ಮಂಜುನಾಥ ಎಂ.ಬಮ್ಮನಕಟ್ಟಿ ಹಾಗೂ ಸದಸ್ಯೆ ನೈನಾ ಕಾಮಟೆ ಇವರು ಆಶ್ರಯ ಪತ್ತಿನ ಸಹಕಾರಿ ಸಂಘವು ಸಕಾಲಕ್ಕೆ ಪಕ್ವಗೊಂಡ ಠೇವಣಿ ಹಣವನ್ನು ನೀಡದೇ, ದೂರುದಾರು ಆರೋಪಿಸಿದಂತೆ ಸೇವಾ ನ್ಯೂನತೆ ಎಸಗಿದ್ದಲ್ಲದೇ ಸಕಾಲಕ್ಕೆ ಹಣ ಪಾವತಿಸದೇ ಅನುಚಿತ ವ್ಯಾಪಾರ ನೀತಿಯನ್ನು ಅನುಸರಿಸಿದ್ದಾರೆ ಎಂದು ಆಯೋಗವು ತೀರ್ಮಾನಿಸದೆ.
ಆದೇಶದಲ್ಲಿ ದೂರುದಾರರು ಇರಿಸಿದ 3 ಠೇವಣಿಗಳ ಮೊತ್ತ ರೂ.4,96,898 ಗಳನ್ನು ಆಯಾ ಮೊತ್ತ ಪಕ್ವಗೊಂಡ ದಿನಾಂಕದಿಂದ ವಾರ್ಷಿಕ ಶೇ.9.5 ರ ಬಡ್ಡಿಯೊಂದಿಗೆ ಪಾವತಿಸುವಂತೆ ಆದೇಶಿಸಲಾಗಿದೆ. ಇದರೊಂದಿಗೆ ರೂ.20,000 ಗಳ ಪರಿಹಾರವನ್ನು ಮತ್ತು ಪ್ರಕರಣದ ಖರ್ಚು ವೆಚ್ಚಕ್ಕಾಗಿ ರೂ.5,000 ಗಳನ್ನು ನೀಡುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ದೂರುದಾರರ ಪರ ನ್ಯಾಯಾವಾದ ಎನ್.ಎಮ್. ಮಡಿವಾಳ ಹಾಜರಾಗಿ ವಾದ ಮಂಡಿಸಿದ್ದರು.