ಶಿರಸಿ: ನಗರಸಭೆ ವ್ಯಾಪ್ತಿಯಲ್ಲಿನ ಮರಾಠಿಕೊಪ್ಪದ ಜೋಡುಕಟ್ಟೆ ಸಮೀಪದಲ್ಲಿ ಭಾನುವಾರ ಮನೆ ಕುಸಿತದ ಪ್ರದೇಶಕ್ಕೆ ಸೋಮವಾರ ಬೆಳ್ಳಂಬೆಳಿಗ್ಗೆ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿ, ಹಣಕಾಸಿನ ಸಹಾಯವನ್ನು ಮಾಡಿದರು.
ಈ ವೇಳೆ ಮಾತನಾಡಿದ ಅವರು, ಇದು ರಾಜ್ಯ ಸರ್ಕಾರದ ನೇರ ಹೊಣೆಗಾರಿಕೆಯಾಗಿದ್ದು, ಇದು ಕೇವಲ ಸರದಕಾರದ ತಪ್ಪಲ್ಲ, ಬದಲಾಗಿ ಉದ್ದೇಶಪೂರ್ವಕವಾಗಿ ಕ್ರೈಂ ಮಾಡಿದಂತಾಗಿದೆ. ಬಡ ಜನರ ವಿಷಯದಲ್ಲಿ ತಾತ್ಸಾರ ಸರ್ವಥಾ ಒಪ್ಪತಕ್ಕದ್ದಲ್ಲ. ಈ ಕೂಡಲೇ ರಾಜ್ಯ ಸರಕಾರ ಜನರಿಗೆ ತುರ್ತು ವ್ಯವಸ್ಥೆ ಮಾಡಬೇಕು. ನಾವ್ಯಾರು ಸರ್ಕಾರದ ಬಳಿ ಭಿಕ್ಷೆ ಕೇಳುತ್ತಿಲ್ಲ, ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ಈ ಕೂಡಲೇ ಸ್ಥಳೀಯ ಶಾಸಕರು, ಆಡಳಿತ ವ್ಯವಸ್ಥೆ ತುರ್ತಾಗಿ ಸ್ಪಂದಿಸಬೇಕಿದೆ ಎಂದು ಅವರು ಆಗ್ರಹಿಸಿದರು. ಸಂತ್ರಸ್ತ ಕುಟುಂಬದ ಜೊತೆಗೆ ಈ ಭಾಗದ ಎಲ್ಲ ಸಾರ್ವಜನಿಕರ ಜೊತೆಗೆ ಸದಾ ಬೆನ್ನಿಗಿರುವುದಾಗಿ ಅವರು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ನಂದನ್ ಸಾಗರ್, ಗಣೇಶ್ ರೇವಣಕರ್, ಅಶೋಕ್ ಶೆಟ್ಟಿ, ಸ್ಥಳೀಯರಾದ ಮಂಜುನಾಥ್ ಶೇಟ್, ಮಧು ನಾಯ್ಕ, ನಾಗರಾಜ ಆಚಾರಿ, ವಿಶ್ವ ನಾಯ್ಕ್, ಆನಂದ ಗೌಳಿ ಇನ್ನಿತರರು ಇದ್ದರು.