Slide
Slide
Slide
previous arrow
next arrow

ಅರಣ್ಯ ಇಲಾಖೆ ಅಧಿಕಾರಿಗಳಿಂದ ದೌರ್ಜನ್ಯ: ಕಾನೂನು ಹೋರಾಟಕ್ಕಿಳಿಯಲು ಮುಂದಾದ ರೈತರು

300x250 AD

ಸಿದ್ದಾಪುರ: ತಾಲೂಕಿನ ಕುಣಜಿ ಗ್ರಾಮದಲ್ಲಿನ ನಮ್ಮ ವೈವಾಟಿನಲ್ಲಿರುವ ಬೆಟ್ಟ ಪ್ರದೇಶಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು,ಸಿಬ್ಬಂದಿಗಳು ಯಾವ ನೊಟೀಸ್ ನೀಡದೇ, ಪೂರ್ವ ಸೂಚನೆ ನೀಡದೇ ಅತಿಕ್ರಮ ಪ್ರವೇಶ ಮಾಡಿ ಅಲ್ಲಿ ಕಳೆದ 3-4 ವರ್ಷದಿಂದ ಬೆಳೆಸಿದ ಅಡಕೆ.ತೆಂಗು,ಹಣ್ಣು,ಹಂಪಲುಗಳ ಗಿಡಗಳನ್ನು ಕಡಿದು, ಸಂಪೂರ್ಣ ನಾಶ ಮಾಡಿ, ಲಕ್ಷಾಂತರ ರೂ. ವ್ಯಯಿಸಿದ ಪೈಪ್‌ಲೈನ್‌ಗಳನ್ನು ಹಾಳುಗೆಡವಿದ್ದಾರೆ. ಅರಣ್ಯ ಇಲಾಖೆಯ ಈ ದೌರ್ಜನ್ಯವನ್ನು ಖಂಡಿಸಿ ನ್ಯಾಯಕ್ಕಾಗಿ ಕಾನೂನು ಹೋರಾಟ ನಡೆಸುತ್ತೇವೆ. ಈ ದೌರ್ಜನ್ಯ ನಡೆಸಿದ ಅಧಿಕಾರಿಗಳ ತಲೆದಂಡಕ್ಕೆ ಆಗ್ರಹಿಸುತ್ತೇವೆ ಎಂದು ಕುಣಜಿ ಗ್ರಾಮದ ರೈತರಾದ ತನುಜಾ ಪ್ರಕಾಶ ಗೌಡರ್,ಚನ್ನಬಸಪ್ಪ ಎಂ.ಗೌಡರ್, ಮಲ್ಲಸರ್ಜ ಗುರುನಾಥ ಗೌಡರ್ ಸೇರಿದಂತೆ ವಿವಿಧೆಡೆಯ ಅಸಂಖ್ಯಾತ ರೈತರು ಆಗ್ರಹಿಸಿದ್ದಾರೆ.

ಈ ಕುರಿತು ಗುರುವಾರ ಜರುಗಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ತನುಜಾ ಗೌಡರ್ ನಾವು ಮೂರು ಕುಟುಂಬದವರು ಕುಣಜಿ ಗ್ರಾಮದ ನಿವಾಸಿಗಳಾಗಿದ್ದು ಅಲ್ಲಿನ ಸ.ನಂ.124/2, 125/1, 125/2,126 ಹಾಗೂ 127 ರ ಸ್ವಂತ ಮಾಲೀಕತ್ವ, ಕಬಜಾ ಇರುವ ಭಾಗಾಯ್ತ ಜಮೀನು ಹೊಂದಿದ್ದು ಅವುಗಳಿಗೆ ಕೆನರಾ ಪ್ರಿವಿಲೇಜ್ ಕಾನೂನು ಪ್ರಕಾರ 14ಬೆ1,14ಬೆ2,14ಬೆ3,14ಬೆ4ರ ಸರ್ಕಾರಿ ಬೆಟ್ಟಗಳನ್ನು ಉಪಯೋಗಕ್ಕೆ ಬಿಡಲಾಗಿದೆ. ಈ ಬೆಟ್ಟಗಳೆಲ್ಲ ಪೋಡಿ ಕೂಡ ಆಗಿದೆ. ಈ ಬೆಟ್ಟಗಳಿಂದ ಸೊಪ್ಪು,ಮಣ್ಣು, ದರಕು ಮುಂತಾಗಿ ಬಳಸಿಕೊಂಡು ಬರುತ್ತಿದ್ದು ಮಣ್ಣು ತೆಗೆದ ಜಾಗಗಳಲ್ಲಿ ಅಡಕೆ, ತೆಂಗು, ಹಣ್ಣು ಹಂಪಲು,ಕಾಡು ಜಾತಿಯ ಗಿಡಗಳನ್ನು ನೆಟ್ಟು ಬೆಳೆಸಿರುತ್ತೇವೆ. ಜುಲೈ 2ರ ಮುಂಜಾನೆ 6 ಗಂಟೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಯಾವುದೇ ಪೂರ್ವಸೂಚನೆ, ನೊಟೀಸ್ ಯಾವುದನ್ನು ನೀಡದೇ ತಮ್ಮ 25-30 ಮಂದಿ ಸಿಬ್ಬಂದಿಗಳೊಂದಿಗೆ ಬಂದು ಎಲ್ಲ ಗಿಡಗಳನ್ನು ಕಡಿದು, ಬುಡಸಮೇತ ಕಿತ್ತು ಪೈಪ್ ಲೈನ್ ಹಾಳುಗೆಡವಿ ವಾಹನದಲ್ಲಿ ಸಾಗಿಸಿದ್ದಾರೆ. ವಿಷಯ ತಿಳಿದ ನಾವು ಸ್ಥಳಕ್ಕೆ ಹೋಗಿ ವಿನಂತಿಸಿಕೊಂಡರೂ ಅದಕ್ಕೆ ಪ್ರತಿಕ್ರಿಯಿಸದೇ ದೌರ್ಜನ್ಯ ನಡೆಸಿದ್ದಾರೆ. ನೀವು ನೊಟೀಸ್ ನೀಡಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ರೇಂಜರ್ ಉದ್ದಟತನದ ಮಾತನ್ನಾಡಿದ್ದಾರೆ. ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಮಲ್ಲಸರ್ಜ ಗೌಡರ್ ಮಾತನಾಡಿ ಕೆನರಾ ಪ್ರಿವಿಲೇಜ್ ಕಾಯ್ದೆ ಪ್ರಕಾರ ಬೆಟ್ಟ ಹಕ್ಕುದಾರರು ನಿಯಮ ಉಲ್ಲಂಘನೆ ಮಾಡಿದರೆ ಕಂದಾಯ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ವಸಾಹತು ಅಧಿಕಾರಿ, ಸಹಾಯಕ ಆಯುಕ್ತರು,ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬಹುದು. ನಮ್ಮ ಹಕ್ಕಿನ ಬೆಟ್ಟದಲ್ಲಿ ವ್ಯತಿರಿಕ್ತವಾಗಿ ನಡೆದುಕೊಳ್ಳದೇ ಸಾಗುವಳಿ ಮಾಡುತ್ತಿರುವ ನಮ್ಮ ಮೇಲೆ ಅರಣ್ಯ ಇಲಾಖೆ ದೌರ್ಜನ್ಯ ನಡೆಸಿದೆ. ಕಾನೂನಿಗೆ ವಿರುದ್ಧವಾಗಿ ಅತಿಕ್ರಮಣ ಮಾಡಿದವರು, ಅತಿಕ್ರಮಣ ಮಾಡಿ ಮನೆ ಕಟ್ಟಿದವರು ಸಾಕಷ್ಟು ಮಂದಿ ಇದ್ದರೂ ಕಾನೂನುಬದ್ದವಾಗಿರುವ ನಮ್ಮ ಮೇಲೆ ಕ್ರಮ ಜರುಗಿಸಿದ್ದಾರೆ. ಈ ಮೂಲಕ ಅನ್ಯಾಯ ಮಾಡಿದ್ದಾರೆ. ಸುಮಾರು 5 ಲಕ್ಷ ರೂ.ಗೂ ಹೆಚ್ಚು ನಷ್ಟವಾಗಿದೆ. ಈ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು.ನಮ್ಮ ನಷ್ಟ ಭರಿಸಬೇಕು ಎಂದರು.
ಕುಣಜಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಶಿವಕುಮಾರ ಮಾತನಾಡಿ ಬೆಟ್ಟಗಳು ಸಮಿತಿ ವ್ಯಾಪ್ತಿಗೆ ಬರುವದಿಲ್ಲ ಎನ್ನುತ್ತಾರೆ. ಆದರೆ ಸಮಿತಿಯಿಂದ ಮಾಹಿತಿ ಕೇಳಬಹುದಿತ್ತು.ಕಳೆದ 3-4 ವರ್ಷದಿಂದ ಇವರು ಸಾಗುವಳಿ ಮಾಡುತ್ತಿದ್ದರೂ ಅದನ್ನು ನೋಡಿಯೂ ಸುಮ್ಮನಿದ್ದ ಅರಣ್ಯ ಇಲಾಖೆ ಕಾನೂನು ಪ್ರಕಾರ ವರ್ತಿಸದೇ ಏಕಾಏಕಿ ದೌರ್ಜನ್ಯ ನಡೆಸಿದ್ದು ತಪ್ಪು ಎಂದರು.
ತಾಪಂ ಮಾಜಿ ಅಧ್ಯಕ್ಷ ಸುಧೀರ ಗೌಡರ್, ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಇಲಿಯಾಸ್ ಸಾಬ್, ಜಿಲ್ಲಾ ಪ್ರಮುಖ ಶಿವಲಿಂಗಯ್ಯ ಅಲ್ಲಯ್ಯನವರ, ಪರಮೇಶ್ವರಯ್ಯ ಕಾನಳ್ಳಿಮಠ,ಸಿ.ಎಸ್.ಗೌಡರ್ ಮುಂತಾದವರು ಈ ದೌರ್ಜನ್ಯವನ್ನು ವಿರೋಧಿಸಿ ಕಾನೂನು ಹೋರಾಟಕ್ಕೆ ಬೆಂಬಲ ಸೂಚಿಸಿದರು. ಬಸವರಾಜ ಚಕ್ರಸಾಲಿ,ನಾಗರಾಜ ದೋಶೆಟ್ಟಿ,ಕುಮಾರ ಗೌಡರ್ ಮುಂತಾಗಿ ಹಲವು ರೈತರು ಉಪಸ್ಥಿತರಿದ್ದರು.
ಅರಣ್ಯ ಇಲಾಖೆಯ ಈ ದಬ್ಬಾಳಿಕೆ ನಿನ್ನೆ ನಮ್ಮ ಮೇಲಾಗಿದೆ. ಮುಂದಿನ ದಿನಗಳಲ್ಲಿ ಅಸಹಾಯಕ ರೈತರೆಲ್ಲರ ಮೇಲೂ ಆಗಬಹುದು. ಆ ಕುರಿತು ಎಲ್ಲ ರೈತರು ಆಲೋಚಿಸಬೇಕು. ಕಾನೂನುಬದ್ದವಾಗಿರುವ ನಮ್ಮ ಮೇಲೆ ದೌರ್ಜನ್ಯ ನಡೆಸಿ ಕಷ್ಟಪಟ್ಟು ಬೆಳೆಸಿದ 4-5 ಸಾವಿರ ಅಡಕೆ,ತೆಂಗು ಗಿಡಗಳನ್ನು ನಾಶ ಮಾಡಿದ್ದಾರೆ.

300x250 AD


ರೈತ ದೇಶದ ಬೆನ್ನೆಲುಬು ಅನ್ನುತ್ತಲೇ ಅವನ ಬೆನ್ನು ಮುರಿಯುತ್ತಿದ್ದಾರೆ. ನಮ್ಮಂಥ ರೈತರಿಗೆ ರಕ್ಷಣೆ ನೀಡುವವರು ಯಾರು? ನಾವು ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ. ದೌರ್ಜನ್ಯ ನಡೆಸಿದ ಅಧಿಕಾರಿಗಳ ತಲೆದಂಡವಾಗಬೇಕು- ತನುಜಾ ಗೌಡರ್

Share This
300x250 AD
300x250 AD
300x250 AD
Back to top