ಹೊನ್ನಾವರ : ತಾಲೂಕಿನ ಕಡತೋಕ ಗ್ರಾಮ ಪಂಚಾಯತ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಶ್ರೀಕೃಷ್ಣ ಭಟ್ಟ ಇವರು ಕರ್ನಾಟಕ ಮೀಡಿಯಾ ಕ್ಲಬ್ ನೀಡುವ, ಕರ್ನಾಟಕ ಭೂಷಣ ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ.
ರಾಜಕೀಯ ಹಾಗೂ ಸಮಾಜ ಸೇವೆ ಕ್ಷೇತ್ರದಲ್ಲಿ ಅತ್ಯಮೂಲ್ಯ ಸೇವೆ, ಜನಪರ ಕಾಳಜಿ, ಆದರ್ಶ ಬದುಕಿಗಾಗಿ ಕರ್ನಾಟಕ ಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿತವಾಗಿ ಸನ್ಮಾನಿಸಲಾಗುತ್ತದೆ. ಜು. 8 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮಠಾಧೀಶರು, ಸಚಿವರು, ಚಲನಚಿತ್ರ ನಟ-ನಟಿಯರು, ಸಾಹಿತಿಗಳು, ಉನ್ನತ ಅಧಿಕಾರಿಗಳು ಸೇರಿದಂತೆ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ.
ಕರ್ನಾಟಕ ಮೀಡಿಯಾ ಕ್ಲಬ್ ತನ್ನ ವಾರ್ಷಿಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ 2ನೇಯ ಆವೃತ್ತಿಗೆ ಇವರ ಸೇವೆ, ಜನಪರ ಕಾಳಜಿ, ಆದರ್ಶ ಬದುಕಿಗಾಗಿ ಕ್ಲಬ್ ಕರ್ನಾಟಕ ಭೂಷಣ ಪ್ರಶಸ್ತಿ ಮತ್ತು ಬಿರುದು ನೀಡಿ ಸನ್ಮಾನಿಸುತ್ತಿದೆ. ಕರ್ನಾಟಕ ಭೂಷಣ ಪ್ರಶಸ್ತಿಯು ಇವರ ಸಾಧನೆ ಮತ್ತು ವ್ಯಕ್ತಿತ್ವಕ್ಕೆ ಕನ್ನಡ ನಾಡಿನ ಸಮಸ್ತ ಜನತೆಯ ಪರವಾಗಿ ನೀಡಿದ ಬಿರುದಾಗಿದೆ. ಕನ್ನಡಿಗರ ಹೆಮ್ಮೆಯ ಕಿರೀಟವನ್ನು ಖ್ಯಾತನಾಮ ಗಣ್ಯರ ಸಮ್ಮುಖದಲ್ಲಿ ಮುಡಿಗೇರಿಸಲಿದ್ದಾರೆ.
ಸಾಮಾಜಿಕ, ರಾಜಕೀಯವಾಗಿ ಕ್ರಿಯಾಶೀಲವಾಗಿರುವ ಇವರು ಮೊದಲ ಗ್ರಾ. ಪಂ. ಅವಧಿಯಲ್ಲಿಯೆ ವಾರ್ಡಿನ ಅಭಿವೃದ್ಧಿಗೆ ಸಾಕಷ್ಟು ಪ್ರಯತ್ನ ನಡೆಸಿರುತ್ತಾರೆ. ಅಧ್ಯಕ್ಷರಾದ ಮೇಲೆ ಗ್ರಾ. ಪಂ. ವ್ಯಾಪ್ತಿಯಲ್ಲಿ ಹಲವಾರು ಜನಪರ ಕೆಲಸವನ್ನು ಮಾಡಿರುತ್ತಾರೆ. ತಾಲೂಕಿನಲ್ಲಿ ಮಹಿಳಾ ಸಬಲೀಕರಣ, ಮಹಿಳಾ ಸಂಘಟನೆ ಬಲಪಡಿಸುವಲ್ಲಿ ಪ್ರಾಮಾಣಿಕವಾಗಿ ತೊಡಗಿಕೊಂಡಿದ್ದಾರೆ. ಬಡವರ, ವಿದ್ಯಾರ್ಥಿಗಳ, ಮಹಿಳೆಯರ ಯಾವುದೇ ಕೆಲಸಕಾರ್ಯಗಳಿದ್ದರು ಮುತುವರ್ಜಿ ವಹಿಸಿ ಅಧಿಕಾರಿಗಳನ್ನು ಸಂಪರ್ಕಿಸಿ ಕೆಲಸ ಮಾಡಿ ಕೊಡುವುದರ ಮೂಲಕ ಅವರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.
ಸಾರ್ವಜನಿಕ ಕ್ಷೇತ್ರದಲ್ಲಿ ಪ್ರಾಮಾಣಿಕ, ಕ್ರಿಯಾಶೀಲವಾಗಿ ಪಾಲ್ಗೊಳ್ಳುತ್ತಿರುವ ಇವರಿಗೆ ಲಭಿಸಿರುವ ಪ್ರಶಸ್ತಿಗೆ ಸ್ಥಳೀಯರು, ತಾಲೂಕಿನ ಪ್ರಮುಖರು, ಸಂಘ ಸಂಸ್ಥೆಯ ಪ್ರಮುಖರು ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಸ್ತುತ ಇವರು ಕಡತೋಕ ಗ್ರಾಮ ಪಂಚಾಯತ ಅಧ್ಯಕ್ಷರಾಗಿದ್ದು, ಗ್ರಾ. ಪಂ. ಅಧ್ಯಕ್ಷ, ಉಪಾಧ್ಯಕ್ಷರ ಒಕ್ಕೂಟದ ತಾಲೂಕಾ ಉಪಾಧ್ಯಕ್ಷರು, ಬಾಜಪ ಹೊನ್ನಾವರ ಮಂಡಳದ ಮಹಿಳಾ ಮೋರ್ಚಾದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.