ಶಿರಸಿ: ಶಿರಸಿಯಲ್ಲಿ ಸರಕಾರದ ಆಡಳಿತ ಯಂತ್ರ ಸಂಪೂರ್ಣ ಹದಗೆಟ್ಟಿದ್ದು,ಯಾವ ಇಲಾಖೆಯಲ್ಲಿಯೂ ಜನತೆಯ ಕೆಲಸ ಆಗುತ್ತಿಲ್ಲ. ಕಳೆದ ಒಂದೂವರೆ ತಿಂಗಳುಗಳಿಂದ ಪೂರ್ಣಾವಧಿ ತಹಶೀಲ್ದಾರ್ ಇಲ್ಲ. ಶಿರಸಿಯ ಎಸಿ ಭಟ್ಕಳಕ್ಕೆ ಇನ್ಚಾರ್ಜ್ ಆಗಿದ್ದಾರೆ. ನಗರಸಭೆಯಲ್ಲಿ ಪೌರಾಯುಕ್ತರಿಲ್ಲ. ಒಂದು ವಾರದೊಳಗೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಇಲ್ಲವಾದಲ್ಲಿ ಮೇ.27 ರಿಂದ ಅನಿರ್ದಿಷ್ಟಾವಧಿ ಬೃಹತ್ ಧರಣಿ ನಡೆಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ, ಬಿಜೆಪಿ ಜಿಲ್ಲಾ ರೈತಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು.
ಅವರು ಸೋಮವಾರ ನಗರದ ಸಹಾಯಕ ಆಯುಕ್ತರ ಕಛೇರಿಯಲ್ಲಿ ಸಾರ್ವಜನಿಕರೊಡಗೂಡಿ ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಶಿರಸಿ ತಾಲೂಕು ವಿಸ್ತೃತವಾಗಿದ್ದು, ಬನವಾಸಿಯಿಂದ ರಾಗಿಹೊಸಳ್ಳಿಯವರೆಗೆ, ದಾಸನಕೊಪ್ಪದಿಂದ ಜಡ್ಡಿಗದ್ದೆಯವರೆಗೆ ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. ಮಳೆಗಾಲ ಆರಂಭಗೊಳ್ಲುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಸಭೆಗಳನ್ನು ಮಾಡಲು, ಇಲಾಖೆಗಳಿಗೆ ನಿರ್ದೇಶಿಸಲು ಶಿರಸಿಯಲ್ಲಿ ತಾಲೂಕು ದಂಡಾಧಿಕಾರಿಗಳೇ ಕಳೆದ ಒಂದೂವರೆ ತಿಂಗಳಿಂದ ಇಲ್ಲದಂತಾಗಿದೆ. ಕಳೆದ ಮಳೆಗಾಲದಲ್ಲಿ ನಡೆದ ಅವಾಂತರಗಳಿಗೆ ತುತ್ತಾತ ಜನರಿಗೆ ಪರಿಹಾರ ಕೆಲವೆಡೆ ಇನ್ನೂ ನೀಡಲಾಗಿಲ್ಲ ಮುಂಬರುವ ಮಳೆಗಾಲದಿಂದ ಜನರಿಗೆ ತೊಂದರೆಯಾದರೆ ಅದನ್ನು ನೋಡುವವರು ಯಾರು ಎನ್ನುವ ಪ್ರಶ್ನೆ ಇದೀಗ ಮೂಡತೊಡಗಿದೆ.
ಶಿರಸಿ ನಗರದಲ್ಲಿ ಅನೇಕರ ಮನೆಗಳು ಕುಸಿದು ಬೀಳುವ ಸಂಭವವಿದೆ. ರಸ್ತೆ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ತಹಶೀಲ್ದಾರ್ ಇಲ್ಲದೇ ಯಾವ ಕೆಲಸವೂ ನಡೆಯುತ್ತಿಲ್ಲ. ಇಷ್ಟೆಲ್ಲ ಸಮಸ್ಯೆಗಳಿಂದ ಶಿರಸಿ ಜನತೆ ಹೊದ್ದು ಮಲಗುವಂತಿದ್ದರೂ ಕಳೆದ ಒಂದೂವರೆ ತಿಂಗಳಿಂದ ತಹಶೀಲ್ದಾರ್ ನೇಮಕಾತಿ ಆಗಿಲ್ಲವೆಂಬುದು ದುರದೃಷ್ಟಕರ. ಈ ಕಾರಣಕ್ಕಾಗಿಯೇ ತಾಲೂಕು ವ್ಯಾಪ್ತಿಯಲ್ಲಿ ಎಲ್ಲ ಇಲಾಖೆಗಳ ಕಾಮಗಾರಿಗಳು ಹಳ್ಳ ಹಿಡಿದಿದೆ. ಜೊತೆಗೆ ಶಿರಸಿ ಉಪ ವಿಭಾಗದ ಸಹಾಯಕ ಆಯುಕ್ತರೂ ಸಹ ವಾರಕ್ಕೆ ಮೂರು ದಿನ ಭಟ್ಕಳಕ್ಕೆ ಪ್ರಭಾರಿಯಾಗಿ ಹೋಗುತ್ತಿದ್ದಾರೆ. ಶಿರಸಿ ಉಪ ವಿಭಾಗ ವ್ಯಾಪ್ತಿಯೇ ದೊಡ್ಡದಿರುವಾಗ, ಇಲ್ಲಿಯ ಸಹಾಯಕ ಆಯುಕ್ತರನ್ನೇ ಬೇರೆಡೆಗೆ ಪ್ರಭಾರಿಯನ್ನಾಗಿಸಿದರೆ ಈ ಭಾಗದ ಜನರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸುವವರು ಯಾರು ? ಇದಿಷ್ಟೇ ಸಾಲದು ಎಂಬಂತೆ, ಶಿರಸಿ ನಗರ ಸಭೆಯಲ್ಲಿ ಪೌರಾಯುಕ್ತರೂ ಸಹ ಜನರಿಗೆ ಸಂಪರ್ಕಕ್ಕೆ ಸಿಗುತ್ತಿಲ್ಲ. ಪೌರಾಯುಕ್ತರೇ ದೀರ್ಘಾವಧಿ ರಜೆ ಮೇಲೆ ತೆರಳಿರುವುದು ಎಲ್ಲ ರೀತಿಯ ಸಮಸ್ಯೆಗಳನ್ನು ಸೃಷ್ಟಿಸಿದೆ ಎಂದರು.
ನಿವೃತ್ತ ಸಾರಿಗೆ ಅಧಿಕಾರಿ ಜಿ.ಎಸ್.ಹೆಗಡೆ ಮಾತನಾಡಿ, ಶಿರಸಿ ತಹಸೀಲ್ದಾರ್ ಗೆ ಭಟ್ಕಳಕ್ಕೆ ಇನ್ ಚಾರ್ಜ್ ಹಾಕಿರುವುದು ನಗೆಪಾಟಿಲಿನ ವಿಷಯ. ಆಡಳಿತ ಯಂತ್ರ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂಬುದಕ್ಕೆ ಇದೇ ಸಾಕ್ಷಿ. ಶಿರಸಿಗೆ ಖಾಯಂ ತಹಸೀಲ್ದಾರ್ ನೇಮಕ ಮಾಡುವಲ್ಲಿ ಶಾಸಕರು, ಉಸ್ತುವಾರಿ ಸಚಿವರು ಹೆಚ್ಚಿನ ಗಮನ ಹರಿಸಬೇಕಿದೆ ಎಂದರು.
ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷೆ ಉಷಾ ಹೆಗಡೆ ಮಾತನಾಡಿ, ಎರಡು ವರ್ಷಗಳಿಂದ ರಾಜ್ಯದಲ್ಲಿ ಕಾರ್ಯಂಗ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಈ ಬರಿ ಮುಂಗಾರು ಬೇಗನೇ ರಾಜ್ಯಕ್ಕೆ ಆಗಮಿಸಲಿದೆ ಎಂಬ ಸೂಚನೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಶಿರಸಿಯಲ್ಲಿ ದಂಡಾಧಿಕಾರಿಗಳೇ ಇಲ್ಲ. ಮಾನ್ಸೂನ್ ಪೂರ್ವ ತಯಾರಿಗಾಗಿ ಸಾಕಷ್ಟು ಕೆಲಸಗಳು ಇವೆ. ಗ್ರಾಮೀಣ ರಸ್ತೆಗಳೆಲ್ಲ ಸಂಪೂರ್ಣ ಹದಗೆಟ್ಟಿವೆ. ಆದರೆ ಈ ಕುರಿತು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಮಾನ್ಸೂನ್ ಪೂರ್ವ ತಯಾರಿಗಾಗಿ ಎಸಿ ನೇತೃತ್ವದಲ್ಲಿ ಸಭೆಗಳು ನಡೆಯಬೇಕಿತ್ತು ಆದರೆ ಖಾಯಂ ಎಸಿ ಇಲ್ಲದ ಪರಿಣಾಮ ಸಭೆಗಳು ನಡೆದಿಲ್ಲ. ಶಾಸಕರು ಈ ಕೂಡಲೇ ಗಮನ ಹರಿಸಲಿ ಎಂದರು.
ಈ ವೇಳೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ, ಸರಕಾರದ ಮುಖ್ಯ ಕಾರ್ಯದರ್ಶಿಗೆ ಹಾಗು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಮಯದಲ್ಲಿ ರಾಘವೇಂದ್ರ ನಾಯ್ಕ್, ಹುತ್ತಗಾರ್ ಗ್ರಾ.ಪಂ ಅಧ್ಯಕ್ಷೆ ಶೋಭಾ ನಾಯ್ಕ್, ವಿ.ಎಂ ಹೆಗಡೆ, ಶ್ರೀಪಾದ್ ಹೆಗಡೆ, ಪ್ರಭಾವತಿ ಗೌಡ, ಅಂಕಿತ್ ಹೆಗಡೆ, ಸಾಲ್ಕಣಿ ಗ್ರಾ. ಪಂ ಅಧ್ಯಕ್ಷೆ ಅನಸೂಯಾ ಹೆಗಡೆ, ಶಿವಾನಂದ್ ದೇಶಳ್ಳಿ, ವಿಶ್ವನಾಥ್ ಗೌಡ, ಕಮಲಾಕರ ಜಿ ನಾಯ್ಕ್, ನಾರಾಯಣ ಹೆಗಡೆ, ಸುಬ್ರಾಯ ಹೆಗಡೆ, ರಾಘವೇಂದ್ರ ದೇವಾಡಿಗ, ಜ್ಯೋತಿ ಹೆಗಡೆ, ಸಚಿನ್ ಎಸ್ ಭಟ್ ಈ ವೇಳೆ ಉಪಸ್ಥಿತರಿದ್ದರು.
ಮನವಿಯಲ್ಲಿರುವ ಬೇಡಿಕೆಗಳೇನು ?
1) ಜನತೆಯ ಹಿತದೃಷ್ಟಿಯಿಂದ ಈ ಕೂಡಲೇ ಶಿರಸಿಗೆ ತಹಶೀಲ್ದಾರ್ ನೇಮಕ ಆಗಬೇಕಿದೆ.
2) ತಹಶೀಲ್ದಾರ್ ನೇಮಕ ಆಗುವರೆಗೆ ಇಲ್ಲಿನ ಅಧಿಕಾರಿಗಳೇ ಪ್ರಭಾರಿಯಾಗಿ ಜನರಿಗೆ ಪೂರ್ಣ ಕೆಲಸಕ್ಕೆ ದೊರೆಯುವಂತಾಗಬೇಕು. ಹೊರತೂ ಬೇರೆ ತಾಲೂಕಿನ ಅಧಿಕಾರಿಗನ್ನು ಪ್ರಭಾರಿಯಾಗಿ ನೇಮಿಸಬಾರದು.
3) ಶಿರಸಿ ಉಪವಿಭಾಗಕ್ಕೆ ಪೂರ್ಣ ಪ್ರಮಾಣದಲ್ಲಿ ಸಹಾಯಕ ಆಯುಕ್ತರ ಸೇವೆ ಲಭ್ಯವಾಗಬೇಕು. ಭಟ್ಕಳಕ್ಕೆ ಸ್ಥಳೀಯರನ್ನೇ ಸಹಾಯಕ ಆಯುಕ್ತರನ್ನಾಗಿ ಪ್ರಭಾರಿ ನೀಡಲಿ.
4) ಶಿರಸಿ ನಗರಸಭೆಯಲ್ಲಿಯೂ ಸಹ ಪ್ರಭಾರಿ ಬದಲಾಗಿ ಪೂರ್ಣ ಪ್ರಮಾಣದಲ್ಲಿ ಪೌರಾಯುಕ್ತರನ್ನು ನೇಮಕ ಮಾಡಬೇಕು.
5) ಶಿರಸಿ-ಸಿದ್ದಾಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವ ಇಲಾಖೆಯಲ್ಲಿಯೂ ಜನರ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಈ ಕೂಡಲೇ ಅಧಿಕಾರಿಗಳು ಜನರಿಗೆ ಸ್ಪಂದಿಸುವಂತಾಗಬೇಕು.
6) ಮಳೆಗಾಲ ಸಮೀಪ ಇರುವುದರಿಂದ ಅತ್ಯಾವಶ್ಯಕ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಕ್ತ ನಿರ್ದೇಶನ ಮಾಡುವುದು.
ಖೋಟ್ :
ಭೀಮಣ್ಣ ನಾಯ್ಕ ಅವರು ಕ್ಷೇತ್ರದ ಶಾಸಕರಾಗಿರುವ ಕಾರಣಕ್ಕಾಗಿ ಅವರನ್ನು ಪ್ರಶ್ನಿಸುತ್ತಿರುವುದು ವಿನಃ ಅವರ ವಯಕ್ತಿಕ ಕಾರಣಕ್ಕಲ್ಲ. ಇಷ್ಟು ಸಮಸ್ಯೆಗಳಿಗೆ ಶಾಸಕರೇ ನೇರ ಹೊಣೆ ಹೊರಬೇಕಿದೆ. ಈ ಕೂಡಲೇ ಅವರು ಜನತೆಯ ಸಮಸ್ಯೆಗೆ ಸರಕಾರದಿಂದ ಪರಿಹಾರ ದೊರಕಿಸಲಿ. – ಅನಂತಮೂರ್ತಿ ಹೆಗಡೆ
ಕ್ಷೇತ್ರದ ಶಾಸಕರು ನಾಟಕ, ಟೂರ್ನಮೆಂಟ್ ಗಳಿಗೆ ನೀಡುವ ಸಮಯವನ್ನು ಆಡಳಿತ ಸುಧಾರಣೆಗಾಗಿ ನೀಡಬೇಕಾದ ಅನಿವಾರ್ಯತೆ ಇದೆ. – ಉಷಾ ಹೆಗಡೆ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷೆ
ಬಾಕ್ಸ್ :
ತಹಶೀಲ್ದಾರ್ ನೇಮಕಕ್ಕೆ ಒಂದು ವಾರಗಳ ಗಡುವು ಕೊಟ್ಟ ಅನಂತಮೂರ್ತಿ
ಜನತೆಯ ಹಿತದೃಷ್ಟಿಯಿಂದ ಈ ಕೂಡಲೇ ಶಿರಸಿಗೆ ತಹಶೀಲ್ದಾರ್ ನೇಮಕ ಆಗಬೇಕಿದೆ. ತಹಶೀಲ್ದಾರ್ ನೇಮಕ ಆಗುವರೆಗೆ ಇಲ್ಲಿನ ಅಧಿಕಾರಿಗಳೇ ಜನರಿಗೆ ಪೂರ್ಣ ಕೆಲಸಕ್ಕೆ ದೊರೆಯುವಂತಾಗಬೇಕು. ಜೊತೆಗೆ ಶಿರಸಿ ಉಪವಿಭಾಗಕ್ಕೆ ಪೂರ್ಣ ಪ್ರಮಾಣದಲ್ಲಿ ಸಹಾಯಕ ಆಯುಕ್ತರ ಸೇವೆ ಲಭ್ಯವಾಗಬೇಕು. ಮೇ.26ರೊಳಗೆ ಪರಿಹಾರ ದೊರೆಯದಿದ್ದಲ್ಲಿ ಎಲ್ಲ ಸಾರ್ವಜನಿಕರೊಡಗೂಡಿ ಮೇ.27ರಿಂದ ಬೇಡಿಕೆ ಈಡೇರುವವರೆಗೂ ಬೃಹತ್ ಅನಿರ್ದಿಷ್ಟಾವಧಿ ಬೃಹತ್ ಧರಣಿ ಕೈಗೊಳ್ಳಲಾಗುವುದು. ಜನತೆಯ ಕೆಲಸಕ್ಕಾಗಿ ತಹಶೀಲ್ದಾರರನ್ನು ನೇಮಕ ಮಾಡಲು ಸರಕಾರಕ್ಕೆ ಆಗುವುದಿಲ್ಲ ಎಂದಾದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಅವರು ಆಕ್ರೋಶ ಹೊರಹಾಕಿದರು.
ಕೆಡಿಪಿ ಸಭೆಗೆ ಪುರುಸೊತ್ತಿಲ್ಲ.. ಕಬ್ಬಡ್ಡಿ ಮ್ಯಾಚ್ ಬಿಡುವುದಿಲ್ಲ..
ಸಮಸ್ಯೆಗಳ ಸರಮಾಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಸಹ ಶಾಸಕರಾದ ಭೀಮಣ್ಣ ನಾಯ್ಕ ಅವರು ಮಾತ್ರ ಜವಾಬ್ದಾರಿ ನುಣುಚಿಕೊಂಡು, ಕೆಡಿಪಿ ಸಭೆ ಮಾಡಲೂ ಪುರುಸೊತ್ತಿಲ್ಲ. ಕೆಡಿಪಿ ಸಭೆಯಲ್ಲಿ ಹತ್ತು ನಿಮಿಷ ಕಾದು ಅಧಿಕಾರಿಗಳ ಜೊತೆಗೆ ಚರ್ಚಿಸುವ ಬದಲು, ಶಾಸಕರು ಓಡಿ ಹೋಗುತ್ತಾರೆ. ನಾಟಕ, ಕಬ್ಬಡ್ಡಿ ಮ್ಯಾಚ್ ಗೆ ಹೋಗಿ ಎರಡು ಮೂರು ತಾಸು ಕೂತುಕೊಳ್ಳುತ್ತಾರೆ. ಅಭಿವೃದ್ಧಿ ಕಾಮಗಾರಿಗಳ ಹೇಳ ಹೆಸರಿಲ್ಲದಂತಾಗಿದೆ. ಈ ರೀತಿ ಕ್ಷೇತ್ರದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಶಾಸಕರಿಗೆ ಸಾಧ್ಯ ಆಗದಿರುವುದನ್ನು ನೋಡಿದರೇ, ಭೀಮಣ್ಣರಿನ್ನೂ ಜಿಲ್ಲಾ ಪಂಚಾಯಿತಿಯಿಂದ ಎಂಎಲ್ಎ ಆಗಿ ಅಪ್ಡೇಟ್ ಆದಂತಿಲ್ಲ ಎಂಬ ಅಭಿಪ್ರಾಯ ಎಲ್ಲೆಡೆ ಕೇಳಿಬರುತ್ತಿದೆ. ಇನ್ನಾದರೂ ಭೀಮಣ್ಣ ನಾಯ್ಕ ಅವರು ಶಾಸಕತ್ವದ ಜವಾಬ್ದಾರಿ ನಿರ್ವಹಿಸಲಿ ಎಂದು ಅನಂತಮೂರ್ತಿ ಹೆಗಡೆ ಕಿವಿಮಾತು ಹೇಳಿದರು.