ಬೆಳೆ ವಿಮೆ ಜಮಾವಣೆಗೆ ಕಾರಣರಾದ ಸಂಸದರಿಗೆ ಅಭಿನಂದನಾ ಸಮಾರಂಭ
ಶಿರಸಿ: ಪ್ರಜೆಗಳು ಜಾಗೃತವಾಗಿದ್ದರೆ ಪ್ರಜಾಪ್ರಭುತ್ವ ಜಾಗೃತವಾಗಿರುತ್ತದೆ. ದೇಶದ ಪ್ರತಿಯೊಬ್ಬ ಪ್ರಜೆ ತನ್ನ ಸುತ್ತಮುತ್ತಲಿನ ಸಮಸ್ಯೆಗಳಿಗೆ ಧ್ವನಿಯಾದಾಗ ಮಾತ್ರ ಪರಿಹಾರ ದೊರಕಿಸಲು ಸಾಧ್ಯ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಶಿರಸಿಯ ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿ ಪ್ರಧಾನ ಕಛೇರಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರಾಥಮಿಕ ಮತ್ತು ಮಾರಾಟ ಸಹಕಾರ ಸಂಘಗಳ ಹಾಗೂ ಸಮಸ್ತ ರೈತ ಬಾಂಧವರ ಸಹಯೋಗದಲ್ಲಿ ಸಂಸದರಾದ ವಿಶ್ವೇಶ್ವರ ಅನಂತ ಹೆಗಡೆ ಕಾಗೇರಿಯವರಿಗೆ 2023-24ನೇ ಸಾಲಿನ ಬೆಳೆ ವಿಮೆ ಹಣ ರೈತರಿಗೆ ದೊರಕಿಸುವ ನಿಟ್ಟಿನಲ್ಲಿ ವಿಶೇಷ ಮುತುವರ್ಜಿ ಮತ್ತು ಪ್ರಯತ್ನವಹಿಸಿ ಯಶಸ್ವಿಯಾದ ಹಿನ್ನೆಲೆಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಗೌರವ ಸನ್ಮಾನ ಸ್ವೀಕರಿಸಿದ ಸಂಸದರು, ಜಿಲ್ಲೆಯ 196 ಗ್ರಾಮ ಪಂಚಾಯಿತಿಯಿಂದ ಈ ವರ್ಷ 82.71 ಕೋಟಿ ರೂ. ವಿಮಾ ಹಣ 35000 ರೈತರ ಖಾತೆಗಳಿಗೆ ಜಮಾ ಆಗಿರುವುದು ಸಂತೋಷದ ವಿಚಾರ. ಫಸಲು ಭಿಮಾ ಯೋಜನೆಯಲ್ಲಿ 28000 ರೈತರಿಗೆ ರೂ 44.34 ಲಕ್ಷ ವಿಮಾ ಹಣ ಲಭಿಸಿದೆ. ಕೇಂದ್ರ ಸರ್ಕಾರವು 2016 ರಿಂದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯನ್ನು ಜಾರಿಗೊಳಿಸಿತು.ಈ ವರ್ಷ ತಾಂತ್ರಿಕ ಸಮಸ್ಯೆಯಿಂದಾಗಿ ನವೆಂಬರ್ನಲ್ಲಿ ದೊರೆಯಬೇಕಾಗಿದ್ದ ಪರಿಹಾರ ಮೇ ತಿಂಗಳಿನಲ್ಲಿ ಸುಮಾರು 35 ಸಾವಿರ ರೈತರಿಗೆ 82.71 ಕೋಟಿ ರೂ. ಬೆಳೆ ವಿಮೆ ಹಣ ಜಮಾ ಆಗಿದೆ. ಜಿಲ್ಲೆಯ 11 ತಾಲೂಕಿನ ಅಡಿಕೆ, ಮಾವು, ಶುಂಠಿ, ಕಾಳುಮೆಣಸಿನ ಬೆಳೆಗಳಿಗೆ ವಿಮೆ ಪರಿಹಾರದ ಹಣ ಬಂದಿದೆ. ರೈತರು, ಸಹಕಾರ ಸಂಘಗಳ ಪ್ರಯತ್ನದಿಂದಾಗಿ ಸಮಸ್ಯೆಗಳನ್ನು ಕೇಂದ್ರ ಸಚಿವರವರೆಗೆ ತಲುಪಿಸಲು ಸಾಧ್ಯವಾಯಿತು. ಶಿವಮೊಗ್ಗದಲ್ಲಿ ನಡೆದ ಅಡಿಕೆ ಬೆಳೆಗಾರರ ಸಮಾವೇಶಕ್ಕೆ ಕೇಂದ್ರ ಕೃಷಿ ಖಾತೆ ಸಚಿವ ಶಿವರಾಜ ಸಿಂಗ್ ಚೌಹ್ಹಾಣ್ ಆಗಮಿಸಿದ್ದ ವೇಳೆ ಬೆಳೆ ವಿಮೆ ಪರಿಹಾರ ಬಿಡುಗಡೆಗೆ ಎದುರಾಗಿದ್ದ ಸಮಸ್ಯೆಯ ವಸ್ತುಸ್ಥಿತಿ ಮನವರಿಕೆ ಮಾಡಿದ ತಕ್ಷಣ ಸಚಿವರು ಸ್ಪಂದಿಸಿ ಪರಿಹಾರ ಬಿಡುಗಡೆಗೆ ಬೇಕಾದ ವ್ಯವಸ್ಥೆಯನ್ನು ಮಾಡಿದ್ದರು. 3 ಆದೇಶ ಮಾಡಿದ ಬಳಿಕ ವಿಮಾ ಕಂಪೆನಿಯು ರೈತರಿಗೆ ಸಲ್ಲಬೇಕಾಗಿದ್ದ ಪರಿಹಾರವನ್ನು ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರವು ಪಂಚಾಯತ ವ್ಯಾಪ್ತಿಯ ಮಳೆ ಯಂತ್ರವನ್ನು ಸರಿಪಡಿಸಬೇಕು. ಇಲ್ಲವಾದಲ್ಲಿ ಇನ್ಸೂರೆನ್ಸ್ ಕಂಪೆನಿಗಳು ತಾಂತ್ರಿಕ ಕಾರಣವನ್ನು ಹೇಳುತ್ತಾರೆ. ಮಳೆ ಯಂತ್ರವು ದಾಖಲೆ ನೀಡದಿದ್ದರೆ ತೊಂದರೆಯಾಗುತ್ತದೆ. ಇದರಿಂದ ರೈತರಿಗೆ ನ್ಯಾಯ ದೊರೆಯುವುದಿಲ್ಲ. ರಾಜ್ಯ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಅಂಕೆ-ಸಂಖ್ಯೆಗಳನ್ನು ನೀಡುವಾಗ ಎಚ್ಚರಿಕೆ ವಹಿಸುವುದು ಅತ್ಯವಶ್ಯ. ಮಳೆಯ ಲೆಕ್ಕಾಚಾರ ಪಾರದರ್ಶಕವಾಗಿ ರೈತರಿಗೆ, ಸಂಘ-ಸಂಸ್ಥೆಗಳಿಗೆ ತಲುಪುವಂತಾಗಬೇಕು ಎಂದರು.
ಆಪರೇಷನ್ ಸಿಂದೂರ ಯಶಸ್ಸಿಗೆ ನಮ್ಮ ಸೈನಿಕರು ಕಾರಣ. ಭಯೋತ್ಪಾದನೆ ಹತ್ತಿಕ್ಕಲು ಕೈಗೊಂಡ ಕೇಂದ್ರ ಸರ್ಕಾರದ ಕ್ರಮ ಶ್ಲಾಘನೀಯ. ಭಯೋತ್ಪಾದನೆ ಸಹಿಸುವುದಿಲ್ಲ ಎಂಬ ಎಚ್ಚರಿಕೆಯ ಸಂದೇಶ ನೀಡಿದ್ದೇವೆ. ಸೈನಿಕರಿಗೆ ಬೆನ್ನುಲುಬಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿಂತಿರುವುದರಿಂದ ಭಯೋತ್ಪಾದನೆ ದೇಶದಿಂದ ಹೊರ ಹಾಕಲು ಸಾಧ್ಯವಾಯಿತು ಎಂದರು.
ಟಿ.ಎಸ್.ಎಸ್.ನ ಪರಿಣತ ನಿರ್ದೇಶಕ ನರಸಿಂಹ ಹೆಗಡೆ ಬಾಳೇಗದ್ದೆ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸದರು ಅಡಿಕೆ ಬೆಳೆ ವಿಮೆ ರೈತರ ಖಾತೆಗೆ ಜಮಾ ಮಾಡಿಸುವಲ್ಲಿನ ಅವಿರತವಾಗಿ ಪ್ರಯತ್ನಿಸಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುವುದು ನಮ್ಮ ಕರ್ತವ್ಯ ಎಂದರು. ಟಿ.ಎಂ.ಎಸ್ ಅಧ್ಯಕ್ಷ ಜಿ.ಟಿ.ಹೆಗಡೆ ತಟ್ಟೀಸರ ಮಾತನಾಡಿ, ಫಲಾನುಭವಿ ರೈತರು ನಿಜಕ್ಕೂ ಸಂಸದರನ್ನು ಅಭಿನಂದಿಸುವುದು ಆದ್ಯ ಕರ್ತವ್ಯವೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಟಿ.ಎಸ್.ಎಸ್. ಅಧ್ಯಕ್ಷ ಗೋಪಾಲಕೃಷ್ಣ ವೆಂ. ವೈದ್ಯ ಮತ್ತಿಘಟ್ಟ ಮಾತನಾಡಿ ಬೆಳೆ ವಿಮೆ ಜಮಾ ಆಗುವಲ್ಲಿ ಸಂಸದರು ಪಕ್ಷಾತೀತವಾಗಿ, ಜವಾಬ್ದಾರಿಯುತವಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ಹಾಗೂ ವಿಮಾ ಕಂಪನಿಗಳ ನಡುವೆ ಸಂಪರ್ಕ ಸಮನ್ವಯತೆ ಸಾಧಿಸಿ ಯಶಸ್ಸುಗಳಿಸಿ ರೈತರ ಸಂಕಷ್ಟಕ್ಕೆ ನೆರವಾಗಿದ್ದಾರೆ. ಅಡಿಕೆ ಆಮದು ನಿರ್ಬಂಧಿಸಿ ಅಡಿಕೆ ಧಾರಣೆ 40000/- ಇರುವಂತೆ ನೋಡಿಕೊಳ್ಳುವಲ್ಲಿ ಸಂಸದರ ಪ್ರಯತ್ನ ಶ್ಲಾಘನೀಯ ಎಂದರು.
ಯಲ್ಲಾಪುರ ಟಿ.ಎಂ.ಎಸ್. ಅಧ್ಯಕ್ಷರಾದ ಎನ್.ಕೆ ಭಟ್ಟ ಅಗ್ಗಾಶಿಕುಂಬ್ರಿ. ಅನಂತಮೂರ್ತಿ ಚ್ಯಾರಿಟೆಬಲ್ ಟ್ರಸ್ಟನ ಅನಂತಮೂರ್ತಿ ಹೆಗಡೆ ಬ್ಯಾಗದ್ದೆ ಟಿ.ಎಸ್.ಎಸ್. ಉಪಾಧ್ಯಕ್ಷ ಎಂ.ಎನ್.ಭಟ್ಟ ತೋಟಿಮನೆ, ನಿರ್ದೇಶಕರು, ಪ್ರಧಾನ ವ್ಯವಸ್ಥಾಪಕ ಗಿರೀಶ ಹೆಗಡೆ, ಸಲಹಾ ಸಮಿತಿ ಸದಸ್ಯರು, ಸಿಬ್ಬಂದಿಗಳು, ರೈತ ಸದಸ್ಯರು, ಪ್ರಾಥಮಿಕ ಮತ್ತು ಮಾರಾಟ ಸಹಕಾರ ಸಂಘಗಳ ಪದಾಧಿಕಾರಿಗಳು, ಪತ್ರಕರ್ತರು ಉಪಸ್ಥಿತರಿದ್ದರು. ಟಿ.ಎಸ್.ಎಸ್. ಸಿಬ್ಬಂದಿ ಉದಯ ಹೆಗಡೆ ಪ್ರಾರ್ಥಿಸಿದರು. ಟಿ.ಆರ್.ಸಿ. ಉಪಾಧ್ಯಕ್ಷರಾದ ವಿಶ್ವಾಸ್ ಬಲ್ಸೆ ಚವತ್ತಿ ಸ್ವಾಗತಿಸಿದರು. ಉತ್ತರ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಮಹೇಂದ್ರ ಭಟ್ಟ ಸಾಲೇಕೊಪ್ಪ ವಂದಿಸಿದರು. ಕೃಷಿ ಮಿತ್ರ ಮಂಡಳಿಯ ಭಾರ್ಗವ ಹೆಗಡೆ ಶೀಗೇಹಳ್ಳಿ ಕಾರ್ಯಕ್ರಮ ನಿರೂಪಿಸಿದರು.