ಕಾರವಾರ- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಶನಿವಾರ ಆಯೋಜಿಸಲಾದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಹೇಮರೆಡ್ಡಿ ಮಲ್ಲಮ್ಮರವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಹಿಂದು ಹೈಸ್ಕೂಲ್ ಶಿಕ್ಷಕಿ ವನಿತಾ ಶೇಟ್ ಹೇಮರೆಡ್ಡಿ ಮಲ್ಲಮ್ಮ ಅವರ ಕುರಿತು ಉಪನ್ಯಾಸ ನೀಡಿ ಮಾತನಾಡಿ, ಹೇಮರೆಡ್ಡಿ ಮಲ್ಲಮ್ಮ ಧರ್ಮಶೀಲತೆ, ಶ್ರದ್ಧೆ ಮತ್ತು ಸತಿತ್ವದ ಪ್ರತೀಕವಾಗಿದ್ದಳು. ಕೌಟುಂಬಿಕ ಸಂಕಷ್ಟಗಳನ್ನು ಮೆಟ್ಟಿ ನಿಂತು ಕುಟುಂಬಕ್ಕೆ ಭೂಷಣ ಪ್ರಾಯವಾಗಿದ್ದಳು, ಆದರ್ಶ ಮೌಲ್ಯಗಳನ್ನು ಬದುಕಿನಲ್ಲಿ ರೂಢಿಸಿಕೊಂಡು ಸಾಮಾಜಿಕ ಮತ್ತು ಧಾರ್ಮಿಕ ಚಿಂತನೆಯಲ್ಲಿ ಸಾಧನೆಗೈದ ಮಹಾಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸ್ತ್ರೀ ಕುಲಕ್ಕೆ ಮಾದರಿ ಎಂದರು.
ಬಸವಣ್ಣನವರ ಮಾರ್ಗಗಳನ್ನು ಜೀವನದಲ್ಲಿ ಅಳವಡಿಸಿಕೊಂಡವಳು. ಶ್ರೀಶೈಲ ಮಲ್ಲಿಕಾರ್ಜುನನನ್ನು ಆರಾಧ್ಯ ದೈವವಾಗಿ ಸ್ವೀಕರಿಸಿ, ಸಾಕ್ಷಾತ್ಕರಿಸಿಕೊಂಡ ಸಾಧ್ವಿ ಮಲ್ಲಮ್ಮ. ವೇಮನ ಮಹಾಯೋಗಿಯಾಗಿ ಬದಲಾಗಲು ಪ್ರೇರಣೆಯಾದವಳು. ಹೇಮರೆಡ್ಡಿ ಮಲ್ಲಮ್ಮನ ಪವಾಡ ಹಾಗೂ ಭಕ್ತಿಯ ಕುರಿತು ಹಲವು ಪ್ರತೀತಿಗಳಿವೆ. ಇವರು ಹಲವಾರ ವಚನ ಮತ್ತು ಛಂದಸ್ಸುಗಳನ್ನು ರಚಿಸಿದ್ದಾರೆ. ಸಂತ ಶಿಶುನಾಳ ಶರೀಫರು ಹೇಮರೆಡ್ಡಿ ಮಲ್ಲಮ್ಮಳನ್ನು ರೆಡ್ಡಿ ಕುಲದ ಉದ್ಧಾರಕಳು ಎಂದು ಬಣ್ಣಿಸಿದ್ದಾರೆ ಎಂದರು.
ಕರ್ನಾಟಕದಲ್ಲಿ ಅಷ್ಟೇ ಅಲ್ಲದೇ ಆಂಧ್ರ ಪ್ರದೇಶ, ಮಹಾರಾಷ್ಟ್ರ ಹಾಗೂ ಹಲವು ರಾಜ್ಯಗಳಲ್ಲಿ ಹೇಮರೆಡ್ಡಿ ಮಲ್ಲಮ ಜಯoತಿ, ಉತ್ಸವ, ನಾಟಕ. ಚಲನಚಿತ್ರಗಳನ್ನು ಮಾಡಲಾಗುತ್ತದೆ. ಅವರ ಗುಣ ಮತ್ತು ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತರು, ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿವಾಜಿ ವಿದ್ಯಾಮಂದಿರದ ಶಿಕ್ಷಕ ಮಹಾದೇವ ರಾಣೆ ನಿರೂಪಿಸಿ, ವಂದಿಸಿದರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ವೆಂ ನಾಯಕ ಸ್ವಾಗತಿಸಿದರು.
ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ.
