ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಗಟ್ಟಿಯಾಗಿದೆ
ಬ್ಯಾಂಕ್ ಕುರಿತು ಶಿರಸಿಯ ಪೀತ ಪತ್ರಿಕೆಯೊಂದರಲ್ಲಿ ಬಂದ ವರದಿ ಸತ್ಯಕ್ಕೆ ದೂರ | ಎಲ್ಲ ರಂಗದಲ್ಲಿ ಬ್ಯಾಂಕ್ ಸಮಗ್ರ ಅಭಿವೃದ್ಧಿ
ಶಿರಸಿ: ರಾಜ್ಯದ ಪ್ರತಿಷ್ಠಿತ ಮಧ್ಯವರ್ತಿ ಬ್ಯಾಂಕ್ ಆದ ಕೆಡಿಸಿಸಿ ಬ್ಯಾಂಕ್ ಸದೃಢವಾಗಿದ್ದು ಲಾಭದಲ್ಲೇ ಮುಂದುವರೆಯುತ್ತಿದೆ. ಬ್ಯಾಂಕಿನ ಎನ್‌ಪಿಎ ಪ್ರಮಾಣ 0.94 ಆಗಿದೆ. ಬ್ಯಾಂಕ್‌ನ ವಿರುದ್ಧ ಪೀತ ಪತ್ರಿಕೆಯೊಂದರಲ್ಲಿ ಸತ್ಯಕ್ಕೆ ದೂರವಾದ ವರದಿಗಳು ಪ್ರಕಟಗೊಂಡಿದೆ. ಬ್ಯಾಂಕ್‌ನ ಗೌರವಕ್ಕೆ ಚ್ಯುತಿ ಬರುವ ಕೆಲಸವಾದಲ್ಲಿ ಎಲ್ಲರೂ ಒಟ್ಟಾಗಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ನಗರದ ಕೆಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಟಿ ಆಯೋಜಿಸಿ ಮಾತನಾಡಿದ ಅವರು, ಬ್ಯಾಂಕಿನ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ಶಿರಸಿಯ ಒಂದು ಪೀತ ಪತ್ರಿಕೆಯಿಂದ ಆಗುತ್ತಿದೆ. ಇದರಿಂದ ನಮ್ಮ ಬ್ಯಾಂಕಿನ ಗ್ರಾಹಕರು ಹಾಗೂ ಸಾರ್ವಜನಿಕರ ಮೇಲೆ ಪರಿಣಾಮ ಬೀರುತ್ತಿದೆ. ವರದಿಯಲ್ಲಿ ಸತ್ಯಕ್ಕೆ ದೂರವಾದ ಅಂಶಗಳಿವೆ. ಬ್ಯಾಂಕ್ ಯಾರೋಬ್ಬರ ಸ್ವತ್ತಲ್ಲ. ಇದು ಜಿಲ್ಲೆಯ ರೈತರ ಬ್ಯಾಂಕ್. ಬ್ಯಾಂಕಿನ ಹಿತಾಸಕ್ತಿಗೆ ಧಕ್ಕೆ ಉಂಟಾದರೆ ನಾವೆಲ್ಲರೂ ಒಟ್ಟಾಗಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.
ನಮ್ಮ ಬ್ಯಾಂಕ್ ಸಾರ್ವಕಾಲಿಕ ದಾಖಲೆ ಮಾಡಿದೆ. ಎನ್‌ಪಿಎ ಪ್ರಮಾಣ 0.94 ಆಗಿದೆ ಎಂದರು. ಎಲ್ಲಾ ಕ್ಷೇತ್ರದಲ್ಲೂ ಬ್ಯಾಂಕ್ ಸಾಧನೆ ಮಾಡಿದೆ. ಪ್ರಸ್ತುತ ಸಾಲಿನಲ್ಲಿ 25ಕೋಟಿ 11ಲಕ್ಷ ಲಾಭಾಂಶ ಆಗಿದೆ. ಬ್ಯಾಂಕ್ ಸಾಕಷ್ಟು ಮಹತ್ವದ ಹೆಜ್ಜೆಯನ್ನು ಇಟ್ಟಿದೆ. 2021ರಿಂದ 2025ರ ಅವಧಿಯಲ್ಲಿ 9.44 ಕೋಟಿ ರೂ.ಗಳಿಂದ 25.11ಕೋಟಿ ರೂ ನಿಕ್ಕಿ ಲಾಭವಾಗಿದೆ. ಕಳೆದ 5 ವರ್ಷಗಳಲ್ಲಿ ಕೃಷಿ ಬೆಳೆಸಾಲ ನೀಡಿಕೆಯಲ್ಲೂ ಹೆಚ್ಚಳವಾಗಿದೆ ಎಂದರು.
ಕೇಂದ್ರ ಸರ್ಕಾರ, ನಬಾರ್ಡ್ ಸೂಚಿಸಿದ ಮಾರ್ಗದರ್ಶಿಕೆಯಂತೆ ಸ್ವ ಸಹಾಯ ಸಂಘಗಳ ಸ್ಥಾಪನೆ. ಈ ಯೋಜನೆಯಡಿಯಲ್ಲಿ ಸಾಲ ನೀಡಿಕೆ ಯೋಜನೆ ಕಾರ್ಯಗತಗೊಳಿಸುವ ಬಗ್ಗೆ ಆದ್ಯತೆ ನೀಡಿದೆ. ಈ ಸಂಬಂಧ ಕಾಲಕಾಲಕ್ಕೆ ಅಪೆಕ್ಸ್ ಬ್ಯಾಂಕ್, ನಬಾರ್ಡ್ ಕರೆದ ತರಬೇತಿ ಗಳಿಗೆ ಬ್ಯಾಂಕ್ ಅಧಿಕಾರಿಗಳನ್ನು ಕಳುಹಿಸಲಾಗುತ್ತಿದೆ. ಪ್ರಸ್ತುತ ಸಾಲಿನಲ್ಲಿ ಎಲ್ಲರಿಗೂ ಬೆಳೆಸಾಲಕ್ಕೆ ಅನುಕೂಲ ಕಲ್ಪಿಸಲಾಗಿದೆ. ಯಾವುದೋ ಒಂದು ಸೊಸೈಟಿಗೆ ಮಾತ್ರ ಅವರ ಬ್ಯಾಲೆನ್ಸ್ ಶೀಟ್ ಸರಿಯಿಲ್ಲ ಎಂಬ ಕಾರಣಕ್ಕೆ ಹಣ ನೀಡಿಲ್ಲ. ಕೆಡಿಸಿಸಿ ಬ್ಯಾಂಕ್ ನಲ್ಲಿಹಣವಿಲ್ಲ ಎಂದಲ್ಲ ಎಂದಲ್ಲ.
ಬೆಳೆಸಾಲವನ್ನು ರೈತರು ಸರಿಯಾದ ಸಮಯಕ್ಕೆ ತುಂಬುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು. ನನ್ನ ಮೇಲಿನ ಬೇಸರಕ್ಕೆ ಬ್ಯಾಂಕ್ ನ ಹೆಸರನ್ನು ಬಳಕೆ ಮಾಡಬಾರದು. ಗೌರವಕ್ಕೆ ಧಕ್ಕೆ ಬರಬಾರದು, ಹಿತಾಸಕ್ತಿ ಹಾಳಾಗಬಾರದು. ಆಡಳಿತ ಮಂಡಳಿ ಶಾಶ್ವತವಲ್ಲ. ಬ್ಯಾಂಕ್ ಶಾಶ್ವತವಾಗಿರುತ್ತದೆ ಎಂದ ಅವರು, ಬ್ಯಾಲೆನ್ಸ್ ಶೀಟ್ ಗಳನ್ನು ಸರಿಯಾಗಿಟ್ಟುಕೊಂಡ ಎಲ್ಲಾ ಸೊಸೈಟಿಗಳಿಗೂ ನಾವು ಸಾಲ ವಿತರಣೆ ಮಾಡಿದ್ದೇವೆ. ನಿಯಾಮಾವಳಿ ಪ್ರಕಾರ ಸಾಲ ವಿತರಣೆ ಮಾಡಿದ್ದೇವೆ. ಆರ್‌ಬಿಐ ಕಟ್ಟಪ್ಪಣೆಯಂತೆ ನಿರ್ದೇಶಕ ಮಂಡಳಿ ಕಾರ್ಯ ನಿರ್ವಹಿಸಬೇಕು. ಇಡೀ ಜಿಲ್ಲೆಯ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳ 2ವರ್ಷಗಳ ಆಡಿಟ್ ಮಾಡಿಸುತ್ತಿದ್ದೇವೆ. ದೊಡ್ಡ ದೊಡ್ಡ ಪ್ರಮಾಣದಲ್ಲಿ ಸಹಕಾರಿ ಸಂಘಗಳಲ್ಲಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಉತ್ತಮ ಗ್ರಾಹಕರನ್ನು ಹುಡುಕುವುದೇ ನಮ್ಮ ಮುಂದಿರುವ ದೊಡ್ಡ ಸವಾಲು. ಆ ಸವಾಲನ್ನು ಸ್ವೀಕಾರ ಮಾಡಿ ಗೆಲ್ಲಬೇಕು ಎಂದರು.
ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಎಸ್ ಎಲ್ ಫೋಟ್ರೇಕರ್ ಮಾತನಾಡಿ, ಬ್ಯಾಂಕಿನ ಬಗ್ಗೆ ಪತ್ರಿಕೆಯಲ್ಲಿ ಇಲ್ಲಸಲ್ಲದ ಆರೋಪಗಳು ಬಂದಿದೆ. ಇದರಿಂದ ಗ್ರಾಹಕರಿಗೆ ಬ್ಯಾಂಕ್ ನ ಮೇಲೆ ಅಪನಂಬಿಕೆ ಬರುವಂತಾಗಿದೆ. ಬ್ಯಾಂಕಿನ ಹಿತಾಸಕ್ತಿ ಹಾಳಾಗಬಾರದು. ಗ್ರಾಹಕರು ಅನುಮಾನ ಪಡುವ ಅಗತ್ಯವಿಲ್ಲ. ಇರುವ ವಾಸ್ತವ ಸತ್ಯವನ್ನು ಪ್ರಕಟಿಸಲಿ, ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ಸಮಂಜಸವಲ್ಲ. ಬ್ಯಾಂಕ್ ಕೆಳಮಟ್ಟಕ್ಕೆ ಇಳಿಯಲು ನಾವು ಬಿಡುವುದಿಲ್ಲ ಎಂದರು.
ಖ್ಯಾತ ಲೆಕ್ಕ ಪರಿಶೋಧಕ ಹಾಗೂ ಕೆಡಿಸಿಸಿ ವೃತ್ತಿಪರ ನಿರ್ದೇಶಕ ತಿಮ್ಮಯ್ಯ ಹೆಗಡೆ ಮಾತನಾಡಿ, 2021ರಿಂದ 2025ರ ಅವಧಿಯಲ್ಲಿ ಶೇರು ಬಂಡವಾಳವು 79.18ಕೋಟಿ ಗಳಿಂದ 145.11 ಕೋಟಿಗಳಿಗೆ ಏರಿದೆ. ಪ್ರತಿ ವರ್ಷ ಸರಾಸರಿ ಶೇಕಡಾ 20.82ರಷ್ಟು ಶೇರು ಬಂಡವಾಳ ಹೆಚ್ಚಿಗೆಯಾಗಿದೆ. 13.73ರಷ್ಟು ದುಡಿಯುವ ಬಂಡವಾಳ ಹೆಚ್ಚಾಗಿದೆ ಎಂದರು. ಎಲ್ಲ ವಿಭಾಗದಲ್ಲಿಯೂ ಬ್ಯಾಂಕ್ ಅತ್ಯುತ್ತಮ ಪ್ರಗತಿ ದಾಖಲಿಸಿದ್ದು, ಬ್ಯಾಂಕಿನ ಇತಿಹಾಸದಲ್ಲಿಯೇ ಇದು ಸಾರ್ವಕಾಲಿಕ ದಾಖಲೆಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಶಾಸಕ ಹೆಬ್ಬಾರ ಅವರು, ಜಮ್ಮು ಕಾಶ್ಮೀರದ ಪಹಲ್ಟಾಮ್‌ನಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸುತ್ತೇನೆ. ಕೃತ್ಯವನ್ನು ಎಸಗಿದವರು ಯಾವುದೇ ಧರ್ಮ, ಜಾತಿಯವರಾಗಿದ್ದರೂ ಸಹ ಕಾನೂನಿನಲ್ಲಿ ಎಷ್ಟು ಕಠಿಣ ಶಿಕ್ಷೆ ನೀಡಲು ಅವಕಾಶ ವಿದೇಯೋ ಅಷ್ಟು ಕಠಿಣ ಶಿಕ್ಷೆಯನ್ನು ನೀಡಬೇಕು. ಪಕ್ಷದ ಹಿತದೃಷ್ಟಿಯಿಂದ ದೇಶದ ಹಿತದೃಷ್ಟಿ ಮುಖ್ಯ. ಹಾಗಾಗಿ ಎಲ್ಲರೂ ಒಗ್ಗಟ್ಟಾಗಬೇಕು ಎಂದ ಅವರು, ಬಿಜೆಪಿಯವರ ಅಭಿಪ್ರಾಯದ ಬಗ್ಗೆ ನಾನು ಹೇಳುವುದಿಲ್ಲ. ನನ್ನ ಅಭಿಪ್ರಾಯವನ್ನು ತಿಳಿಸಿದ್ದೇನೆ ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.
ಆರ್.ಎಂ.ಹೆಗಡೆ ಬಾಳೇಸರ, ಎಲ್.ಟಿ.ಪಾಟೀಲ್, ಕೃಷ್ಣ ದೇಸಾಯಿ, ರಾಘವೇಂದ್ರ ಶಾಸ್ತ್ರಿ, ರಾಮಕೃಷ್ಣ ಹೆಗಡೆ ಕಡವೆ, ಗಜು ಪೈ, ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಭಟ್ ಸೇರಿದಂತೆ ಹಲವರು ಇದ್ದರು.
ವಯಕ್ತಿಕ ದ್ವೇಷಕ್ಕೆ ಬ್ಯಾಂಕ್ ಬಗ್ಗೆ ಬರೆಯಬಾರದು. ಪೀತ ಪತ್ರಿಕೆಗಳಿಗೆ ನನ್ನ ಮೇಲೆ ವಯಕ್ತಿಕ ದ್ವೇಷವಿದ್ದರೆ ಚುನಾವಣೆಗೆ ನಿತ್ತಾಗ ಏನಾದರೂ ಬರೆದುಕೊಳ್ಳಲಿ.ಅದನ್ನು ಬಿಟ್ಟು ನನ್ನ ಮೇಲಿನ ದ್ವೇಷಕ್ಕೆ ಬ್ಯಾಂಕ್ ಗೌರವಕ್ಕೆ ಧಕ್ಕೆ ತರುವುದು ಸರಿಯಲ್ಲ. ಬ್ಯಾಂಕಿನ ಗ್ರಾಹಕರ ವಿಶ್ವಾಸ ಉಳಿಸಿಕೊಳ್ಳುವ ಕೆಲಸ ನಮ್ಮಿಂದಾಗುತ್ತದೆ. – ಶಿವರಾಮ ಹೆಬ್ಬಾರ್, ಕೆಡಿಸಿಸಿ ಅಧ್ಯಕ್ಷ
ಕೆಡಿಸಿಸಿಯಲ್ಲಿ ದುಡ್ಡಿಲ್ಲವೆಂದು ಅಪಪ್ರಚಾರ ಮಾಡುವವರು ತಮ್ಮ ಬ್ಯಾಲೆನ್ಸ್ ಶೀಟ್ ಸರಿಪಡಿಸಿಕೊಳ್ಳಲಿ :
ಯಾವ ಸೊಸೈಟಿಯ ಬ್ಯಾಲೆನ್ಸ್ ಶೀಟ್ ಸರಿಯಾಗಿದೆಯೋ ಅಂಥವರಿಗೆ ನಾವು ಎಲ್ಲರಿಗೂ ಹಣ ನೀಡಿದ್ದೇವೆ. ತಮ್ಮ ಬ್ಯಾಲೆನ್ಸ್ ಶೀಟ್ ಸರಿಯಿಲ್ಲದೇ, ಕೆಡಿಸಿಸಿಯಲ್ಲಿ ಲೋನ್ ಕೊಡಲು ಹಣವಿಲ್ಲ ಎಂದು ಬೇರೆಡೆ ಹೇಳುವುದು ಸರಿಯಲ್ಲ. ಕೆಡಿಸಿಸಿಯಲ್ಲಿ ಹಣವಿಲ್ಲ ಎಂದು ಅಪಪ್ರಚಾರ ಮಾಡುವ ಮೊದಲು ತಮ್ಮ ಬ್ಯಾಲೆನ್ಸ್ ಶೀಟ್ ಸರಿಪಡಿಸಿಕೊಳ್ಳಲಿ ಎಂದು ಶಾಸಕ ಹೆಬ್ಬಾರ್ ಶಿರಸಿಯ ಪ್ರತಿಷ್ಟಿತ ಸಹಕಾರಿ ಸಂಘಕ್ಕೆ ಮತ್ತು ಸಹಕಾರಿ ಸಾಕ್ಷರರಿಗೆ ಟಾಂಗ್ ನೀಡಿದರು.