ಗ್ರಾ.ಪಂ.ಸದಸ್ಯ ಸುಭಾಷ ಬೋವಿವಡ್ಡರ ಆಕ್ರೋಶ
ದಾಂಡೇಲಿ : ಗ್ರಾಮ ಪಂಚಾಯಿತಿಯ ಈ ಅವಧಿಯ ಎರಡುವರೆ ವರ್ಷಗಳ ನಂತರ ಅದು ಸದಸ್ಯರೆಲ್ಲರ ಒತ್ತಾಯಕ್ಕೆ ಒಂದು ಗ್ರಾಮ ಸಭೆ ನಡೆದಿದೆ. ಆನಂತರ ಗ್ರಾಮ ಸಭೆಯು ಇಲ್ಲ, ವಾರ್ಡ್ ಸಭೆಯು ಇಲ್ಲ. ಇನ್ನೂ ಮನೆ ಮನೆಗಳ ಕಸ ಸಂಗ್ರಹಣೆಗಾಗಿ ಬಂದ ವಾಹನವೊಂದು ಆರು ತಿಂಗಳಾದರೂ ನಿಂತಲ್ಲೇ ನಿಂತುಕೊಂಡಿದೆ. ಅಂದ ಹಾಗೆ ಇದು ದಾಂಡೇಲಿ ತಾಲೂಕಿನ ಹಚ್ಚ ಹಸಿರಿನ ನಡುವೆ ಇರುವ ಊರಿಗೆ ಉಪಕಾರಿಯಾಗಬೇಕಾದ ಆಲೂರು ಗ್ರಾಮ ಪಂಚಾಯಿತಿಯ ಹಣೆಬರಹ. ಗ್ರಾಮ ಪಂಚಾಯಿತಿಯ ಆಡಳಿತ ವ್ಯವಸ್ಥೆ ತೀವ್ರ ಹದಗೆಟ್ಟಿದೆ. ಇಲ್ಲಿ ಸಮಸ್ಯೆ ನೂರು, ಪರಿಹರಿಸುವವರು ಯಾರು? ಎಂಬ ಪ್ರಶ್ನೆಯೊಂದಿಗೆ ಗ್ರಾಮ ಪಂಚಾಯಿತಿಯ ನಿರ್ಲಕ್ಷದ ವಿರುದ್ಧ ಅದೇ ಗ್ರಾಮ ಪಂಚಾಯಿತಿಯ ಸದಸ್ಯ ಸುಭಾಷ ಬೋವಿವಡ್ಡರ ಅವರು ಬುಧವಾರ ಗ್ರಾಮ ಪಂಚಾಯ್ತಿಯ ಮುಂಭಾಗದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಪಿಡಿಓ ಅವರ ನಿಷ್ಕಾಳಜಿಯಿಂದ ಅಭಿವೃದ್ಧಿ ಕುಂಠಿತವಾಗಿದೆ. ಗ್ರಾಮ ಪಂಚಾಯಿತಿಯ ಈ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸದೇ ಇದ್ದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ಸುಭಾಷ ಬೋವಿವಡ್ಡರವರು ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ವಾಮನ ಮಿರಾಶಿ, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಗಿರೀಶ್ ಟೋಸೂರು, ಮುಖಂಡರಾದ ಮಾರುತಿ ಕಾಂಬ್ರೇಕರ, ಪ್ರಶಾಂತ ಬಸೂರ್ತೆಕರ, ರವಿ ವಾಟ್ಲೇಕರ ಹಾಗೂ ಸ್ಥಳೀಯ ಗ್ರಾಮಸ್ಥರು ಮೊದಲಾದವರು ಉಪಸ್ಥಿತರಿದ್ದರು.