ಸಿದ್ದಾಪುರ: ಸಿಇಟಿ ಪರೀಕ್ಷೆ ಬರೆಯಲು ಬಂದ ಬ್ರಾಹ್ಮಣ ವಿದ್ಯಾರ್ಥಿಗಳನ್ನು ಪರೀಕ್ಷಾ ಕೊಠಡಿಗೆ ಬಿಡುವುದಕ್ಕೆ ಜನಿವಾರ ತೆಗೆಸಿರುವ ಘಟನೆಯನ್ನು ಶ್ರೀ ಸಂಸ್ಥಾನ ಶ್ರೀಮನ್ನೆಲೆಮಾವು ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಮಾಧವಾನಂದ ಭಾರತೀ ಮಹಾಸ್ವಾಮೀಜಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ಜನಿವಾರ ಧಾರಣೆ ಮತ್ತು ಗಾಯತ್ರಿ ಮಂತ್ರೋಪದೇಶ ಕೇವಲ ಒಂದು ಆಚರಣೆಯೋ, ಒಂದು ಕಾರ್ಯಕ್ರಮವೋ ಅಲ್ಲ. ಅದೊಂದು ಆರಾಧನೆಯ ದೀಕ್ಷೆಯಂತೆ. ಬ್ರಹ್ಮೋಪದೇಶ ಪಡೆದ ಪ್ರತಿಯೊಬ್ಬರೂ ಜೀವನಪರ್ಯಂತ ಜನಿವಾರ ಧಾರಣೆಯನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಾರೆ. ಹೀಗಿರುವಾಗ ಜನಿವಾರದಿಂದ ಪರೀಕ್ಷೆಯಲ್ಲಿ ನಕಲು ಮಾಡಲು ಸಾಧ್ಯವಿಲ್ಲವೆಂಬ ಸಾಮಾನ್ಯ ಜ್ಞಾನವೂ ಇಲ್ಲದಂತೆ ಅಧಿಕಾರಿಗಳು ಇಂತಹ ಅವಿವೇಕದ ಕ್ರಮಗಳನ್ನು ಕೈಗೊಂಡಿರುವುದು ಸರ್ವಥಾ ಸರಿಯಾದುದಲ್ಲ. ಜನಿವಾರವನ್ನು ಕೇವಲ ಬ್ರಾಹ್ಮಣರು ಮಾತ್ರ ಧರಿಸುವುದಿಲ್ಲ. ಬೇರೆ ಬೇರೆ ಸಮುದಾಯಗಳಲ್ಲೂ ಬ್ರಹ್ಮೋಪದೇಶದ ಕ್ರಮವಿದೆ. ಹಾಗಾಗಿ ಇಂತಹ ವರ್ತನೆಯ ಮೂಲಕ, ಅದರಲ್ಲೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗುವ ಕ್ರಮಗಳನ್ನು ಯಾರೂ ಕೈಗೊಳ್ಳಬಾರದು ಮತ್ತು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯಲು ಸರಕಾರ ಆಸ್ಪದ ನೀಡಬಾರದು ಎಂದು ಅವರು ಆಗ್ರಹಿಸಿದ್ದಾರೆ.