ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಸುಬ್ರಾಯ್ ಗೌಡ ಕುಳಿಕಟ್ಟು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ಸಮುದಾಯ ಭವನ ನಿರ್ಮಾಣಕ್ಕೆ ಪ್ರಯತ್ನಿಸಿದ್ದರು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಸಹಕಾರದೊಂದಿಗೆ ಸಿದ್ದಾಪುರ ಕರೆ ಒಕ್ಕಲಿಗರ ಸಂಘದಿಂದ ಹಲಗಡಿಕೊಪ್ಪದಲ್ಲಿ ಜಾಗ ಗುರುತಿಸಿ ಸಮುದಾಯ ಭವನ ನಿರ್ಮಾಣಕ್ಕೆ ಏ.11 ರಂದು ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಳ್ಳಲಾಗಿದೆ ಎಂದರು.
ಶಂಕುಸ್ಥಾಪನೆಯು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರ ಅಮೃತ ಹಸ್ತದಿಂದ ನೆರವೇರಲಿದೆ. ಸಮುದಾಯದ ಅಭಿವೃದ್ಧಿಗೆ ಮಾರ್ಗದರ್ಶನ ನೀಡಿ ಇಂತಹದೊAದು ಸ್ಮರಣೀಯ ಕಾರ್ಯಕ್ರಮದಲ್ಲಿ ಸಮಾಜದವರು ತೊಡಗಿಕ್ಕೊಳ್ಳುವಂತೆ ಆಶಿರ್ವದಿಸಿದ ಶ್ರೀಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ, ಮಿರ್ಜಾನ್ ಶಾಖಾ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಸೇರಿದಂತೆ ಶಾಖಾ ಮಠದ ಪೂಜ್ಯರುಗಳು ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಲಿದ್ದಾರೆ ಎಂದರು.
ಇದಲ್ಲದೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಭೀಮಣ್ಣ ನಾಯ್ಕ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಉಮಾಪತಿ ಗೌಡ, ಮಾಜಿ ಉಪ ಮುಖ್ಯಮಂತ್ರಿ ಸಿ.ಎನ್ ಅಸ್ವತ್ನಾರಾಯಣ, ರಾಜ್ಯಸಭಾ ಸದಸ್ಯರಾದ ಜಿ.ಸಿ ಚಂದ್ರಶೇಖರ್, ರಾಜ್ಯ ಒಕ್ಕಲಿಗರ ಸಂಗದ ನಿರ್ದೇಶಕ ಧರ್ಮೇಶ್ ಸಿರಿಬೈಲ್, ಉದ್ಯಮಿ ಉಪೇಂದ್ರ ಪೈ, ವಕೀಲರಾದ ಕೆ.ಟಿ ಗೌಡ, ಎಂ.ಟಿ. ಗೌಡ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಮುಂಜಾನೆ 9.30ಕ್ಕೆ ಸಿದ್ದಾಪುರದ ಸಾಗರ್ ಸರ್ಕಲ್ನಿಂದ ಹಲಗಡಿಕೊಪ್ಪದವರೆಗೆ ಬೈಕ್ ರ್ಯಾಲಿ ನಡೆಯಲಿದೆ. ಬಳಿಕ ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ ಹಾಗೂ ಡೊಳ್ಳುಕುಣಿತದೊಂದಿಗೆ ಪೂಜ್ಯರುಗಳನ್ನು ಬರಮಾಡಿಕ್ಕೊಳ್ಳಲಾಗುವುದು. ನಂತರ ಗಣಪತಿ ಹವನ, ಶ್ರೀ ರಾಮತಾರಕ ಮತ್ತು ಪವಮಾನ ಹವನ ಪೂಜಾ ಕಾರ್ಯಕ್ರಮ ನಡೆಯಲಿದೆ. ಬಳಿಕ ಪೂಜ್ಯರುಗಳಿಂದ ಪೂರ್ಣಾಹುತಿ ಹಾಗೂ ಮಹಾಮಂಗಳಾರತಿ ನಡೆಯಲಿದೆ ಎಂದರು.
ಇನ್ನು ಇದೇ ವೇಳೆ ಸಂಘದ ಭವನ ನಿರ್ಮಾಣಕ್ಕೆ ಜಾಗ ನೀಡಿದ ವೆಂಕಟೇಶ ರಾಮದಾಸ ಕಾಂತು ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದವರು ಶ್ರೀಮಠದ ಭಕ್ತರು ಆಗಮಿಸುವಂತೆ ಮನವಿ ಮಾಡಿದರು.
ಈ ವೇಳೆ ಸಂಘದ ಗೌರವಾಧ್ಯಕ್ಷ ಮಹಾಬಲೇಶ್ವರ ಗೌಡ ಸರಕುಳಿ, ಸಲಹಾ ಸದಸ್ಯ ಶಂಕರ ಬಡ್ಡೆಮನೆ, ಕಾರ್ಯದರ್ಶಿ ರವೀಶ ಗೌಡ, ಸಂಘದ ಪದಾಧಿಕಾರಿಗಳಾದ ವಿನಾಯಕ ಗೌಡ, ನಾಗಪತಿ ಗೌಡ, ಸೀತಾರಾಮ ಗೌಡ ಸೇರಿದಂತೆ ಇನ್ನಿತರರು ಇದ್ದರು.