ಸಿದ್ದಾಪುರ: ಪುರಾಣ ಪ್ರಸಿದ್ದ ಇಟಗಿ ಶ್ರೀ ಮಹತೋಬಾರ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯ ಭಕ್ತಿ ಭಾವದಿಂದ ಸಾಗಿದೆ. ಅಷ್ಟಬಂಧದ ಸಾನಿಧ್ಯ ವಹಿಸಿದ್ದ ಶ್ರೀ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಅನುಗ್ರಹ ಸಂದೇಶ ನೀಡಿ, ದೇವಸ್ಥಾನಗಳು ಸಾಕಷ್ಟಿವೆ.ಆದರೆ ಶಾಸ್ತ್ರೀಯವಾದ ದೇವಾಲಯಗಳು ವಿರಳ. ಇಟಗಿಯ ಶ್ರೀ ರಾಮೇಶ್ವರ ದೇವಾಲಯ ವಾಸ್ತುಶಾಸ್ತ್ರ, ಆಗಮೋಕ್ತವಾದ ಎಲ್ಲಾ ವ್ಯವಸ್ಥೆಗಳನ್ನು ಇಟ್ಟುಕೊಂಡ ಒಂದು ದೇವತಾ ಸನ್ನಿಧಿ. ಬಿಳಗಿ ಸೀಮೆಯ ದೇವಾಲಯ ಇದು. ಚೈತನ್ಯದ ಕಳೆ ತುಂಬಿರುವ ಪವಿತ್ರ ತಾಣ ಎಂದರು.
ಅದ್ಯಾವದೋ ಕಾರಣಕ್ಕೆ ಕಳೆದ ಸುಮಾರು ವರ್ಷಗಳಿಂದ ದೇವರಿಗೆ ಅಷ್ಟಬಂಧ ಮಹೋತ್ಸವ ನಡೆದಿರಲಿಲ್ಲ. 12 ವರ್ಷಕ್ಕೊಮ್ಮೆ ಅಷ್ಟಬಂಧ ಮಾಡಬೇಕಿತ್ತು. ಒಂದು ತಲೆಮಾರು, ಎರಡು ತಲೆಮಾರು ಸಹ ಅಷ್ಟ ಬಂಧ ಕಂಡಿರಲಿಲ್ಲ. ಅಂತಹ ಕಾರ್ಯಕ್ರಮ ಇದೀಗ ಸಂಪನ್ನಗೊಂಡಿದೆ ಎಂದು ಹೇಳಿದರು. ಬಳಿಕ ಅನ್ನದಾಸೋಹ ಸ್ಥಳಕ್ಕೆ ತೆರಳಿದ ಶ್ರೀಗಳು ಅನ್ನಾರ್ಚನೆ ನೆರವೆರಿಸಿದರು.
ದಿವ್ಯಾಷ್ಟಬಂಧ ಕಾರ್ಯದಲ್ಲಿ ಹಾಸನದ ಸಮರ್ಥ ರಾಮಾವಧೂತ ಆಶ್ರಮದ ಶ್ರೀ ರಾಮಾವಧೂತ ಸ್ವಾಮೀಜಿಗಳು ಉಪಸ್ಥಿತರಿದ್ದು ಭಕ್ತಜನಕೆ ಆಶೀರ್ವಾದ ಮಾಡಿದರು.
ಭಕ್ತಿಭಾವಕ್ಕೆ ಸಾಕ್ಷಿಯಾದ ಭಕ್ತಜನ:
ದಿವ್ಯಾಷ್ಟಬಂಧದ ಅಪೂರ್ವ ಕ್ಷಣಕ್ಕೆ ಬಿಳಗಿ ಸಿಮೆಯ ಸುತ್ತಮುತ್ತಲಿನ ಐದು ಸಾವಿರಕ್ಕೂ ಹೆಚ್ಚುಜನ ಪಾಲ್ಗೊಂಡು ಸಾಕ್ಷಿಭೂತರಾದರು.ಹಲವು ವರ್ಷಗಳ ನಂತರ ನಡೆದ ಅಷ್ಟಬಂಧದ ಶುಭಗಳಿಗೆಯನ್ನು ಕಣ್ತುಂಬಿಕೊಂಡು ಭಕ್ತಿಭಾವದಲ್ಲಿ ಭಾವುಕರಾದರು.ಇನ್ನೂ ಸಾಮಾಜಿಕ ಜಾಲತಾಣದಲ್ಲಿ ನೇರಪ್ರಸಾರವಿದ್ದು,ಹೊರಗಡೆ ಇರುವ ಸಾವಿರಾರು ಭಕ್ತರು ಪರೋಕ್ಷವಾಗಿ ಪಾಲ್ಗೊಂಡು ಪಾವನರಾದರು
ನಿರಂತರ ಭಜನೆ:
ವಿವಿಧ ಮಹಿಳಾ ಸಂಘಟನೆಗಳು ನಿರಂತರ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.ಸಂಗೀತ ಕಾರ್ಯಕ್ರಮ ಮತ್ತು ರಾತ್ರಿ ನಡೆದ ಯಕ್ಷಗಾನ ಕಲಾಸಕ್ತರ ಮನಸೊರೆಗೊಂಡಿರು.
ಧಾರ್ಮಿಕ ಕಾರ್ಯಕ್ರಮಗಳು: ದಿವ್ಯಾಷ್ಟಬಂಧ ಮಹೋತ್ಸವ ನಿಮಿತ್ತ ಏಪ್ರಿಲ್ 2 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡುಬಂದಿದ್ದು,ದಿವ್ಯಾಷ್ಟಬಂಧಕ್ಕೆ ಸಂಬಂಧಿಸಿದ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ ಜರುಗಿತು. ಏಪ್ರಿಲ್ 5 ರಂದು ಅಧಿವಾಸ ಹೋಮ, ತತ್ವ ಹೋಮ, ಪೂರ್ಣಕಲಾವೃದ್ಧಿ ಹೋಮ, ಶ್ರೀಮದ್ಭಾಗವತ ಪಾರಾಯಣ ಆರಂಭ, ಮಹಾಬಲಿಪ್ರದಾನ, ಜಪಹೋಮ, ಮಯೂರೋತ್ಸವ ನಡೆಯಲಿದೆ. ಏಪ್ರಿಲ್ 6 ಶ್ರೀ ರಾಮನವಮಿಯಂದು ನವಗ್ರಹ ಶಾಂತಿ, ಮೃತ್ಯುಂಜಯ ಹೋಮ, ಶ್ರೀರಾಮತಾರಕ ಹೋಮ, ಮಹಾಬಲಿಪ್ರದಾನ, ಅಧಿವಾಸ ಹೋಮ, ಜಪಹೋಮ, ಡೋಲೋತ್ಸವ ಜರುಗಿತು. ಏ.10 ಧರ್ಮ ಸಭೆನಡೆಯಲಿದ್ದು, ರಾಘವೇಶ್ವರ ಶ್ರೀಗಳು ಆಶೀರ್ವಚನ ನೀಡಲಿದ್ದಾರೆ.
ಸ್ಮರಣ ಸಂಚಿಕೆ: ಶ್ರೀ ಕ್ಷೇತ್ರ ಇಟಗಿ ರಾಮೇಶ್ವರ ದೇವರ ಇತಿಹಾಸ,ಪರಂಪರೆ,ಶಾಸ್ರ್ರ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಸಲುವಾಗಿ ಅಷ್ಟಬಂಧ ನಿಮಿತ್ತ ಸಿದ್ದವಾದ ಸ್ಮರಣ ಸಂಚಿಕೆ ಏ.10 ಕ್ಕೆ ಬಿಡುಗಡೆಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ದಿವ್ಯಾಷ್ಟಬಂಧ ಮಹೋತ್ಸವ ಸಮಿತಿ ಹಾಗೂ ಮೊಕ್ತೇಸರ ಮಂಡಳಿಯ ಅಧ್ಯಕ್ಷರು, ಸರ್ವ ಸದಸ್ಯರು, ಸಹಸ್ರ-ಸಹಸ್ರ ಸಂಖ್ಯೆಯಲ್ಲಿ,ಶಿಷ್ಯಭಕ್ತರು ಪಾಲ್ಗೊಂಡಿದ್ದರು.
ಶ್ರೀ ರಾಮೇಶ್ವರ ಹಾಗೂ ಪರಿವಾರ ದೇವರ ಪುನ:ಪ್ರತಿಷ್ಠೆ, ಅಷ್ಟಬಂಧ ನೆರವೇರಿದೆ. ಬ್ರಹ್ಮಕಲಶೋತ್ಸವ ಮುಂದಕ್ಕೆ ಆಗಲಿದೆ. ಭಕ್ತಜನರ ಭಾಗ್ಯವಿದು.ಇಡೀ ಸೀಮೆಯ ಕ್ಷೇಮಕ್ಕೆ, ಎಲ್ಲಾ ಭಕ್ತ ಜನರ ಆಧ್ಯಾತ್ಮಿಕ ಉನ್ನತಿಗೆ, ಬದುಕಿನ ರಕ್ಷೆಗೆ ಈ ಮಹತ್ಕಾರ್ಯ ಕಾರಣವಾಗಿದೆ. ಈ ಪುಣ್ಯತಮ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲಾ ಶಿಷ್ಯಭಕ್ತರಿಗೂ, ಸಮಸ್ತರಿಗೂ ಶ್ರೇಯಸ್ಸು ಉಂಟಾಗಲೆಂದು ರಾಘವೇಶ್ವರ ಶ್ರೀಗಳು ಹಾರೈಸಿ, ಫಲ ಮಂತ್ರಾಕ್ಷತೆ ಅನುಗ್ರಹಿಸಿದರು.
ಹಲವು ವರ್ಷದ ಹಿಂದೆ ನಡೆದ ಅಷ್ಟಬಂಧದಲ್ಲಿ ಪಾಲ್ಗೊಂಡಿದ್ದೆ.ಅದಾದ ನಂತರ ಈಗಿನ ಅಷ್ಟಬಂಧದಲ್ಲಿಯೂ ಪಾಲ್ಗೊಳ್ಳುವ ಸೌಭಾಗ್ಯ ನನ್ನದಾಗಿದೆ.ನನ್ನ ಜೀವನದ ಸಾರ್ಥಕ ಕ್ಷಣದಲ್ಲಿ ಈ ಮಹತ್ ಕಾರ್ಯವೂ ಸೇರಿದೆ.- ಗಜಾನನ ಭಟ್ ವರಗದ್ದೆ,ವೈದಿಕ,ಭಕ್ತ