ಶಿರಸಿ: ಸೋಲುತ್ತಿರುವ ಹೈನುಗಾರಿಕೆಗೆ ಬೆಂಬಲದ ಸಹಕಾರವಾಗಿ ಲೀಟರ್ ಹಾಲಿಗೆ ನಾಲ್ಕು ರೂಪಾಯಿ ಹೆಚ್ಚಳ ನೀಡಿದರೆ ಕಷ್ಟದಲ್ಲಿರುವ ರೈತರಿಗೆ ಸಹಾಯ ಮಾಡಿದಂತೆ ಎಂದು ಧಾರವಾಡ ಹಾಲು ಒಕ್ಕೂಟದ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಹೈನುಗಾರರ ಪರ ಗ್ರಾಹಕರಲ್ಲಿ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಉಳಿದ ಬೆಲೆ ಏರಿಕೆಯ ಜೊತೆ ಕ್ಷೀರದ ಬೆಲೆ ಏರಿಕೆ ಕುರಿತು ಅಸಮಧಾನ ವ್ಯಕ್ತಪಡಿಸಿದ ಬೆನ್ನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಹಾಲಿಗೆ ಏರಿಸಿದ ಹೆಚ್ಚಳದ ಹಣ ನೇರವಾಗಿ ರೈತರಿಗೆ ತಲುಪಲಿದೆ. ಇದರಿಂದ ಮೊದಲೇ ಸೊರಗುತ್ತಿರುವ ಹೈನುಗಾರಿಕೆಗೆ ಅಷ್ಟಾದರೂ ಬೆಂಬಲ ನೀಡಿದಂತೆ ಆಗಲಿದೆ. ಬೇರೆ ದರ ಏರಿಕೆಗೆ ಹೋಲಿಸಿ ರೈತರ ಆತ್ಮ ಗೌರವಕ್ಕೆ ಧಕ್ಕೆ ತರಬೇಡಿ ಎಂದಿದ್ದಾರೆ.
ಸಾಮಾನ್ಯವಾಗಿ ಒಂದು ಕುಟುಂಬ ದಿನಕ್ಕೆ 2 ಲೀಟರ್ ಹಾಲು ಖರೀದಿಸಿದರೆ ಎಂಟು ರೂಪಾಯಿ ಹೆಚ್ಚಳ ನೀಡಿದಂತೆ ಆಗುತ್ತದೆ. ಒಟ್ಟೂ ತಿಂಗಳಿಗೆ 240 ರೂ. ಹೆಚ್ಚಳವಾಗುತ್ತದೆ. ಎಲ್ಲವು ದುಬಾರಿ ಆಗುತ್ತಿರುವ ವೇಳೆ ಹಾಲು ದುಬಾರಿ ಎನಿಸಿದರೂ ರೈತರ ಬೆವರ ಹನಿಗೆ ನೀಡುವ ನ್ಯಾಯದ ಗೌರವ ಎಂದು ಭಾವಿಸಿದರೆ ಈ ಹಣ ಅಲ್ಪವೇ ಆಗಲಿದೆ ಎಂದೂ ಹೈನುಗಾರರ ಪರ ಸಮರ್ಥಿಸಿಕೊಂಡಿದ್ದಾರೆ.
ಪ್ರತಿಯೊಬ್ಬ ಗ್ರಾಹಕರೂ ಕಷ್ಟದಲ್ಲಿ ಇರುವ ಹೈನುಗಾರರಿಗೆ ಬೆನ್ನು ತಟ್ಟಿ ನಾವಿದ್ದೇವೆ ಎಂದಾಗ ಸಾಕಪ್ಪ ಹೈನುಗಾರಿಕೆ ಎನ್ನುವ ಅವರಿಗೂ ಮತ್ತಷ್ಟು ಹೈನು ಕೃಷಿ ಖುಷಿಯಿಂದ ನಡೆಸುವ ಉಮೇದು ಬರಲಿದೆ ಎಂದಿದ್ದಾರೆ.
ಇನ್ನು ಕೃಷಿಯಿಂದ ಅದರಲ್ಲೂ ಹೈನುಗಾರಿಕೆಯಿಂದ ವಿಮುಖ ಆಗುತ್ತಿರುವವರ ಸಂಖ್ಯೆ ಹೆಚ್ಚಳ ಆಗುತ್ತಿದೆ. ಜಾನುವಾರುಗಳ ನಿರ್ವಹಣೆ, ಆಹಾರ ಒದಗಿಸುವದು, ಕೊಟ್ಟಿಗೆ ಕಾರ್ಯಗಳು, ಎರಡು ಹೊತ್ತು ಹಾಲಿಂಡುವುದು ಎಲ್ಲವೂ ಸಹ ಕಷ್ಟಕರ ಕಾರ್ಯವೇ ಎಂದುಕೊಂಡೇ ಬಿಡುತ್ತಿದ್ದಾರೆ. ಮುಖ್ಯವಾಗಿ ಯುವಕರೂ ಈ ಕಾರ್ಯದಿಂದ ದೂರವೇ ಆಗುತ್ತಿದ್ದಾರೆ ಎಂದೂ ಕೆಶಿನ್ಮನೆ ನೆನಪಿಸಿ ಆತಂಕಿಸಿದ್ದಾರೆ. ಈ ಮಧ್ಯೆ ಹಾಲಿನ ದರ ಏರಿಕೆ ವಿದ್ಯುತ್, ಡಿಸೈಲ್ ದರ ಏರಿಕೆಗೆ ಹೋಲಿಸಬಾರದು. ಹಾಗೆ ಹೋಲಿಸುತ್ತಿರುವದೂ ದುರದೃಷ್ಟಕರವಾಗಿದೆ. ಗೋಪಾಲಕರಿಗೆ ನೀಡುವ ಗೌರವದ ನೆರವು ಎಂದು ಭಾವಿಸಬೇಕಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.