ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ರೈತರು
ಬನವಾಸಿ: ಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ನೂತನ ವಿದ್ಯುತ್ ಸರಬರಾಜು ಕೇಂದ್ರದ ಸ್ಥಾಪನೆಗೆ ಉಂಟಾಗಿರುವ ಸಮಸ್ಯೆಯನ್ನು ಶೀಘ್ರವೇ ಸರಿಪಡಿಸುವಂತೆ ಆಗ್ರಹಿಸಿ ಬನವಾಸಿ ಹಾಗೂ ಸುತ್ತಮುತ್ತಲಿನ ರೈತರು, ವಿದ್ಯುತ್ ಬಳಕೆದಾರರು ಬನವಾಸಿ ಪಟ್ಟಣವನ್ನು ಬಂದ್ ಮಾಡಿ ಬುಧವಾರ ಪ್ರತಿಭಟನೆ ನಡೆಸಿದರು.
ಮುಂಜಾನೆ ಪಟ್ಟಣದ ಪಂಪ ವೃತ್ತದಲ್ಲಿ ನೆರೆದ ಸಾವಿರಾರು ರೈತರು, ಅಂಗಡಿಕಾರರು, ಸಾರ್ವಜನಿಕರು ಬನವಾಸಿ ಪಟ್ಟಣವನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಹೆಸ್ಕಾಂ ವಿರುಧ್ಧ ಘೋಷಣೆ ಕೂಗುತ್ತಾ ಪ್ರತಿಭಟನೆಗಿಳಿದು ತಾಲ್ಲೂಕು ದಂಡಾಧಿಕಾರಿಗಳ ಮೂಲಕ ಇಂಧನ ಸಚಿವರಿಗೆ ಮನವಿ ನೀಡಿದರು.
ರೈತ ಮುಖಂಡ ಶಿವಕುಮಾರ್ ದೇಸಾಯಿ ಗೌಡ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಈ ಭಾಗದಲ್ಲಿ ಕೆಲ ದಿನಗಳಿಂದ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದೇ ರೈತರು ಬೆಳೆದ ಬೆಳೆಗೆ ನೀರಿಲ್ಲದೇ ಬೆಳೆ, ತೋಟ ಒಣಗುತ್ತಿದೆ . ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಕಡಿಮೆ ವೋಲ್ಟೇಜ್ ನಿಂದಾಗಿ ಪ್ರತಿನಿತ್ಯ ಮೋಟರ್ ಸುಡುತ್ತಿವೆ. ಬನವಾಸಿಯಲ್ಲಿ ನೂತನವಾಗಿ ಸ್ಥಾಪನೆಯಾಗಲಿರುವ ವಿದ್ಯುತ್ ಸರಬರಾಜು ಕೇಂದ್ರಕ್ಕೆ ಉಂಟಾಗಿರುವ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಬೇಕು. ಗ್ರೀಡ್ ಕಾಮಗಾರಿಗೆ ತೊಂದರೆ ನೀಡುತ್ತಿರುವ ಅರಣ್ಯ ಇಲಾಖೆಯ ಎಲ್ಲ ಕಛೇರಿಗಳಿಗೆ ಈ ಕೂಡಲೇ ವಿದ್ಯುತ್ ಸರಬರಾಜು ನಿಲ್ಲಿಸಬೇಕು. ನಮ್ಮ ಭಾಗದ ರೈತರು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಹೋರಾಟ ವಿಕೋಪಕ್ಕೆ ಸಾಗುವ ಮುನ್ನ ಸಮಸ್ಯೆಯನ್ನು ಪರಿಹರಿಸಬೇಕು. ಬನವಾಸಿಗರಿಗೆ ಕದಂಬೋತ್ಸವದ ಅಗತ್ಯವಿಲ್ಲ ಇದರ ಬದಲಾಗಿ ಬನವಾಸಿ ಅಭಿವೃದ್ಧಿಗೆ ಒತ್ತು ನೀಡಿ, ನಮಗೆ ಮುಂಬರುವ ಏ.12 ಮತ್ತು ಏ.13ರೊಳಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದೇ ಇದ್ದಲ್ಲಿ ಬನವಾಸಿಯಲ್ಲಿ ನಡೆಯುವ ಕದಂಬೋತ್ಸವ ಕಾರ್ಯಕ್ರಮದಲ್ಲಿ ಕಪ್ಪುಬಟ್ಟೆ ಪ್ರದರ್ಶಿಸಿ ಕದಂಬೋತ್ಸವವನ್ನು ಕರಾಳ ಉತ್ಸವವೆಂದು ಘೋಷಸಿ ಆ ದಿನ ಪ್ರತಿಭಟನೆಯನ್ನು ಮಾಡಲಾಗುವುದು. ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದರೆ ಮುಂದೆ ಆಗುವ ಅನಾಹುತಗಳಿಗೆ ರಾಜ್ಯ ಸರ್ಕಾರ ನೇರ ಹೊಣೆಯಾಗಲಿದೆ ಎಂದು ಎಚ್ಚರಿಸಿದರು.
ಡಿಎಸ್ಎಸ್ ಮುಖಂಡ ಶಿವಾಜಿ ಕಾಳೇರಮನೆ ಮಾತನಾಡಿ, ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮದ ಸಾರ್ವಜನಿಕರಿಗೆ, ಉದ್ಯಮದಾರರಿಗೆ, ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದೇ ಇರುವುದರಿಂದ ತೀವ್ರ ತೊಂದರೆಯಾಗುತ್ತಿದೆ. ಈ ಸಮಸ್ಯೆಗೆ ಇಲ್ಲಿನ ಶಾಖಾಧಿಕಾರಿಯೇ ನೇರ ಹೊಣೆಯಾಗಿದ್ದಾರೆ. ಇಲ್ಲಿಯ ಹೆಸ್ಕಾಂನ ಶಾಖಾಧಿಕಾರಿಯು ಲೈನ್ ಮ್ಯಾನ್ ಹುದ್ದೆಗೆ ಸಹ ಪ್ರಯೋಜಕನಲ್ಲ. ಇಂತಹ ಬೇಜಾವಾಬ್ದಾರಿ ಶಾಖಾ ಅಧಿಕಾರಿಯನ್ನು ಎರಡು ದಿನಗಳಲ್ಲಿ ವರ್ಗಾವಣೆ ಮಾಡಬೇಕು. ಇಲ್ಲವಾದರೆ ಸಾರ್ವಜನಿಕರು ಹೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುತ್ತೆವೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲೂಕು ದಂಡಾಧಿಕಾರಿ ಶೈಲೇಶ್ ಪರಮನಂದ್ ಮನವಿ ಸ್ವೀಕರಿಸಿ ಮಾತನಾಡಿ, ತಮ್ಮ ಮನವಿಯನ್ನು ಮೇಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದು. ವಿದ್ಯುತ್ ಸಮಸ್ಯೆ ಕುರಿತು ಹೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರ ವಿನಯ ರಾಚೋಟಿ ಮಾತನಾಡಿ, ವಿದ್ಯುತ್ ಸರಬರಾಜು ಕೇಂದ್ರ ಪ್ರಾರಂಭವಾದಲ್ಲಿ ಮಾತ್ರ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಿದೆ ಎಂದರು.
ಕೆಪಿಟಿಸಿಎಲ್ ನ ಕಾರ್ಯನಿರ್ವಾಹಕ ಅಭಿಯಂತರ ವಿ.ಸುನೀಲ್ ಕುಮಾರ್ ಮಾತನಾಡಿ, ವಿದ್ಯುತ್ ಉಪಕೇಂದ್ರಕ್ಕೆ ಬರುವ 10 ಕಂಬಗಳಲ್ಲಿ 6 ಕಂಬಗಳ ಕಾರ್ಯ ಪೂರ್ಣಗೊಂಡಿದೆ. ಉಳಿದ 4 ಕಂಬ ಹಾಕುವ ಜಾಗದಲ್ಲಿ ತಕರಾರು ಉಂಟಾಗಿ ಪ್ರಕರಣ ಹೈಕೋರ್ಟ್ ನಲ್ಲಿದೆ. ಇನ್ನೂ ಒಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದರು.
ಹೆಸ್ಕಾಂ ಅಧೀಕ್ಷಕ ಅಭಿಯಂತರ ಪುರುಷೋತ್ತಮ ಮಲ್ಯ, ಸಾಮಾಜಿಕ ಕಾರ್ಯಕರ್ತ ಜಯಶೀಲ ಗೌಡ, ರೈತ ಮುಖಂಡರಾದ ಗಜಾನನ ಗೌಡ, ವೀರೇಂದ್ರ ಗೌಡ, ವಿನಯ ಗೌಡ, ವೀರಭದ್ರ ಗೌಡ, ವಿಶ್ವನಾಥ ಹಾದಿಮನಿ, ಶಾಂತಲಾ ಕಾನಳ್ಳಿ, ವಿ.ಜಿ.ನಾಯ್ಕ್ ಮತ್ತಿತರರು ಮಾತನಾಡಿದರು.
ಪ್ರತಿಭಟನೆಯಲ್ಲಿ ಅಂಗಡಿಕಾರರು, ಸಣ್ಣ ಕೈಗಾರಿಕಾ ಉದ್ಯಮದಾರರು, ಹೋಟೆಲ್ ಉದ್ಯಮಗಾರರು, ಝರಾಕ್ಸ್ ಅಂಗಡಿಕಾರರು ಸುತ್ತಮುತ್ತಲಿನ ಹಳ್ಳಿಯ ಸಾವಿರಾರು ರೈತರು ಭಾಗವಹಿಸಿದ್ದರು.