ಬನವಾಸಿ: ರಾಜ್ಯಮಟ್ಟದ ಕದಂಬೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಜಿಲ್ಲಾ ಆಡಳಿತ ಸಜ್ಜಾಗಿದೆ. ಏ.12 ಮತ್ತು ಏ. 13ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಯೂರವರ್ಮ ವೇದಿಕೆಯಲ್ಲಿ ಕದಂಬೋತ್ಸವಕ್ಕೆ ಚಾಲನೆ ನೀಡಿ, ಪಂಪ ಪ್ರಶಸ್ತಿಯನ್ನು ವಿತರಿಸಲಿದ್ದಾರೆ ಎಂದು ಸಹಾಯಕ ಆಯುಕ್ತೆ ಕಾವ್ಯರಾಣಿ ಹೇಳಿದರು.
ಅವರು ಇಲ್ಲಿಯ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕದಂಬೋತ್ಸವ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಪುರುಷರ, ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆ ಏರ್ಪಾಡಿಸಲಾಗಿದೆ. ಸ್ಥಳೀಯ ಹಾಗೂ ರಾಜ್ಯ ಮಟ್ಟದ ಕಲಾವಿದರಿಂದ ಮನೋರಂಜನಾ ಕಾರ್ಯಕ್ರಮ, ಪುರುಷ ಮತ್ತು ಮಹಿಳೆಯರಿಗೆ ರಾಜ್ಯ ಮಟ್ಟದ ಕುಸ್ತಿ ಪಂದ್ಯ ಏರ್ಪಡಿಸಲಾಗಿದೆ. ಕದಂಬೋತ್ಸವದಲ್ಲಿ ಯಾವುದೇ ರೀತಿಯ ಅವ್ಯವಸ್ಥೆ ಉಂಟಾಗದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪಟ್ಟಣದ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು ಇದಕ್ಕಾಗಿ ಕಾಲಾವಕಾಶ ಬೇಕಾಗುತ್ತದೆ. ಬನವಾಸಿ ಅಭಿವೃದ್ಧಿ ಪ್ರಾಧಿಕಾರದಿಂದ ಪಂಪವನ ಅಭಿವೃದ್ಧಿಗಾಗಿ 50ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಶಾಶ್ವತ ಕುಸ್ತಿ ಕ್ರೀಡಾಂಗಣದ ಬೇಡಿಕೆಯಿದ್ದು ಮುಂದಿನ ದಿನಗಳಲ್ಲಿ ಕ್ರೀಡಾಂಗಣ ನಿರ್ಮಾಣ ಕಾರ್ಯ ಮಾಡಲಾಗುವುದು ಎಂದರು.
ತಾಲ್ಲೂಕು ದಂಡಾಧಿಕಾರಿ ಶೈಲೇಶ್ ಪರಮಾನಂದ, ಗ್ರೇಡ್ 2 ತಹಶೀಲ್ದಾರ ರಮೇಶ ಹೆಗಡೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್ ಹೆಗಡೆ, ಶಿರಸಿ ವೃತ್ತ ನೀರಿಕ್ಷಕ ಶಶಿಕಾಂತ ವರ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ್, ಮೋಟಾರು ವಾಹನ ನಿರೀಕ್ಷಕ ದೇವೇಂದ್ರ ಪಾಟೀಲ್, ಗ್ರಾಪಂ ಅಧ್ಯಕ್ಷರಾದ ಬಿಬಿ ಆಯಿಷಾ ಖಾಸಿಂಖಾನ್, ನಿರ್ಮಲಾ ನಾಯ್ಕ್ ಮತ್ತಿತರರು ಮಾತನಾಡಿದರು. ಸಭೆಯಲ್ಲಿ ಗ್ರಾಪಂ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಇದ್ದರು.