ಯಲ್ಲಾಪುರ: ಪಟ್ಟಣದ ಕೋಟೆ ಕರಿಯವ್ವ ದೇವಸ್ಥಾನದಿಂದ ಯುಗಾದಿ ಉತ್ಸವ ಸಮಿತಿ ನೇತೃತ್ವದಲ್ಲಿ ಮಾ.31ರಂದು ಭವ್ಯ ಶೋಭಾಯಾತ್ರೆ ಪ್ರಾರಂಭಗೊಂಡು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರಿ, ಉತ್ಸವಕ್ಕೆ ಮೆರುಗು ತಂದರು. ಇದರಲ್ಲಿ ವಿಶೇಷ ಆಕರ್ಷಣೆಗಳಾಗಿ ಕುಂದಾಪುರದ ಶ್ರೀರಾಮ ಮಕ್ಕಳ ಭಜನಾ ತಂಡ, ಕುಂದಾಪುರ ಗಂಗೆಬೈಲಿನ ಶ್ರೀರಾಮ ಮಕ್ಕಳ ಕುಣಿತದ ಕಲಾ ತಂಡಗಳು ಸುಮಾರು ೪ ಗಂಟೆಗಳ ಕಾಲ ನಿರಂತರ ಸಂಗೀತ ವಾದ್ಯದ ಜೊತೆ ನೃತ್ಯ ಮಾಡಿ ಜನರ ಪ್ರಶಂಸೆಗೆ ಕಾರಣರಾದರು. ಅಲ್ಲದೇ, ಭಾರತ ಮಾತೆ, ಬಾಲರಾಮ, ಶಿವಾಜಿ, ಅಘೋರಿ ವೇಷ, ಯಕ್ಷಗಾನ ವೇಷ, ತಿರುಪತಿ ತಿಮ್ಮಪ್ಪ ಹೀಗೆ ಹತ್ತಾರು ಟ್ಯಾಬ್ಲೊ ಪ್ರದರ್ಶನ ಅತ್ಯಂತ ವ್ಯವಸ್ಥಿತವಾಗಿ ಸುಂದರವಾಗಿ ಕಂಡುಬಂದಿತು.
ಈ ಶೋಭಾಯಾತ್ರೆಯಲ್ಲಿ ಶಾಸಕ ಶಿವರಾಮ ಹೆಬ್ಬಾರ, ಮಾಜಿ ಶಾಸಕ ವಿ.ಎಸ್.ಪಾಟೀಲ, ಪ್ರಮುಖರಾದ ವಿವೇಕ ಹೆಬ್ಬಾರ, ಹರಿಪ್ರಕಾಶ ಕೋಣೇಮನೆ, ಸೇರಿದಂತೆ ತಾಲೂಕಿನ ಎಲ್ಲ ಹಿರಿಕಿರಿಯ ಸ್ನೇಹಿತರು, ರಾಷ್ಟ್ರೀಯ ಸ್ವಯಸೇವಕ ಸಂಘದ ಪ್ರಮುಖರು ಮತ್ತು ಮಹಿಳೆಯರು ಹೆಚ್ಚಿನ ರೀತಿಯಲ್ಲಿ ಭಾಗಿಯಾಗಿದ್ದರು. ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ, ಸಂಚಾಲಕ ಪ್ರದೀಪ ಯಲ್ಲಾಪುರಕರ, ಎಲ್ಲ ಪದಾಧಿಕಾರಿಗಳು ಅಚ್ಚುಕಟ್ಟಾಗಿ ಶೋಭಾಯಾತ್ರೆ ನಿರ್ವಹಿಸಿದರು. ಆದರೆ ಈ ವರ್ಷ ಅತ್ಯಂತ ಶಾಂತಯುತವಾಗಿ ನಡೆದ ಶೋಭಾಯಾತ್ರೆ ಡಿಜೆ ಇಲ್ಲದೇ ನಡೆದಿರುವುದು ಸಾವಿರಾರು ಜನರ ಮೆಚ್ಚುಗೆಗೆ ಕಾರಣವಾಯಿತು.