ಸಿದ್ದಾಪುರ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಸಂಸ್ಥಾನ ಶ್ರೀಮನ್ನೆಲೆಮಾವಿನ ಮಠದಲ್ಲಿ ಇಂದು ಏ. 22 ರಿಂದ ಏ.24ರ ವರೆಗೆ ಶ್ರೀಮಠದಲ್ಲಿ ಮಹಾರಥ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ.
ಸಿದ್ದಾಪುರ ತಾಲೂಕಿನ ಹೇರೂರು ಸೀಮೆ ಮತ್ತು ಹೊನ್ನಾವರ ತಾಲೂಕಿನ ಸಪ್ತಗ್ರಾಮ ಸೀಮೆಯನ್ನೊಳಗೊಂಡ ಶ್ರೀಮನ್ನೆಲೆಮಾವಿನ ಮಠದಲ್ಲಿ ಶ್ರೀ ಲಕ್ಷ್ಮಿನೃಸಿಂಹ, ಶ್ರೀ ರಾಜರಾಜೇಶ್ವರೀ, ಶ್ರೀ ಚಂದ್ರಮೌಳೇಶ್ವರ ಸ್ವಾಮಿಯು ಇಲ್ಲಿನ ಅಧಿದೇವತೆಗಳು. 25 ಯತಿವರೇಣ್ಯರ ಪರಂಪರೆಯನ್ನು ಹೊಂದಿದ ಮಠವಾಗಿದ್ದು, ಪ್ರಸ್ತುತ ಪರಮಪೂಜ್ಯ ಶ್ರೀ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳು ಪೀಠಾರೂಢರಾಗಿದ್ದಾರೆ. ಶ್ರೀಗಳವರ ಮನದಾಶಯದ ಮೇರೆಗೆ ಶ್ರೀಮಠದ ಭಕ್ತ ಜನರ ಸಹಕಾರದಿಂದ, ಶಿಥಿಲಗೊಂಡ ಪುರಾತನವಾದ ರಥಕ್ಕೆ ಬದಲಾಗಿ ಸ್ಥಪತಿ ರಥಶಿಲ್ಪಿ ಶ್ರೀ ಗಂಗಾಧರ ಆಚಾರ್ಯ ವಾಸ್ತುಶಿಲ್ಪ ವುಡ್ ಇಂಡಸ್ಟ್ರಿಸ್ ಕೆಳಗಿನ ಇಡಗುಂಜಿ ಇವರಿಂದ ನಿರ್ಮಾಣಗೊಂಡ ಸುಂದರವಾದ ಮಹಾರಥವು ಶ್ರೀಮಠಕ್ಕೆ ಸುರಕ್ಷಿತವಾಗಿ ತಲುಪಿದೆ. ತನ್ನಿಮಿತ್ತ ಶ್ರೀಮಠದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಏ.22 ರಿಂದ ಏ.24ರ ವರೆಗೆ ಶ್ರೀಮಠಕ್ಕೆ ಚಿತ್ತೈಸಿ ಅನುಗ್ರಹ ಮಾಡಲಿದ್ದಾರೆ. ಅಂತೆಯೆ ಸೋಂದಾ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಕೂಡ ಏ.22ರಂದು ಸಂಜೆ 5 ಗಂಟೆಗೆ ಆಗಮಿಸಿ ಆಶೀರ್ವದಿಸಲಿದ್ದಾರೆ. ಏ. 22ರಂದು ಶೃಂಗೇರಿ ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ಆಗಮನ, ಸ್ವಾಗತ, ಧೂಳೀಪಾದಪೂಜೆ ನಡೆಯಲಿದೆ. ಹಾಗೆಯೇ ಏ.23 ರಂದು ಬೆಳಿಗ್ಗೆ ಗಣಪತಿ ಪೂಜೆ, ನಾಂದಿ ಪುಣ್ಯಾಹ, ನವಗ್ರಹ ಪೂರ್ವಕ ವಾಸ್ತು ಹೋಮ, ರಥಾಧಿವಾಸ ಹೋಮ, ರಥಾಧಿವಾಸ ಪೂಜೆ, ಕಲಶಾಭಿಷೇಕ, ಶ್ರೀ ಲಕ್ಷ್ಮಿನೃಸಿಂಹ ದೇವರ ಪ್ರಾರ್ಥನೆ, ಬಲಿ, ಶ್ರೀ ದೇವರ ರಥಾರೋಹಣ, ರಥಾರೂಢ ಶ್ರೀ ದೇವರಿಗೆ ಶ್ರೀ ಶ್ರೀ ಜಗದ್ಗುರುಗಳಿಂದ ಪೂಜೆ, ರಥೋತ್ಸವ, ಅದೇ ದಿನ ಮಧ್ಯಾಹ್ನ ಶ್ರೀ ಸನ್ನಿಧಾನಂಗಳವರಿಂದ ಆಶೀರ್ವಚನ, ಮಧ್ಯಾಹ್ನ 3.30ರಿಂದ ವೇದ ವಿದ್ವಾಂಸರಿಂದ ವೇದ ಪಾರಾಯಣ ಮತ್ತು ವೇದ ವಿದ್ವಾಂಸರಿಗೆ ಸನ್ಮಾನ ನಡೆಯಲಿದೆ.
ಹಾಗೆಯೇ ಏ.24ರಂದು ಬೆಳಿಗ್ಗೆ ಶ್ರೀ ಲಕ್ಷ್ಮಿನೃಸಿಂಹ ಮೂಲಮಂತ್ರ ಹವನ, ಕಲ್ಯಾಣವೃಷ್ಟಿ ಸ್ತೋತ್ರ ತ್ರಿವೇಣಿಯ ಸಮರ್ಪಣೆ, ಹವನದ ಪೂರ್ಣಾಹುತಿ, ಜಗದ್ಗುರು ಮಹಾಸ್ವಾಮಿಗಳವರಿಂದ ಭಕ್ತಾದಿಗಳಿಗೆ ಅನುಗ್ರಹ ಮಹಾಮಂತ್ರಾಕ್ಷತೆ ನಡೆಯಲಿದೆ. ಹೀಗೇ ಮೂರು ದಿನಗಳ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಸಮಸ್ತ ಭಕ್ತ ಮಹಾಜನರು ಆಗಮಿಸಿ, ನಮ್ಮ ಕಾಲಘಟ್ಟದಲ್ಲಿ ಲಭಿಸಿರುವ ಈ ಅಪರೂಪದ ನೂತನ ಶ್ರೀಮನ್ಮಹಾರಥದ ವೈಭವದ ರಥೋತ್ಸವದಲ್ಲಿ ಭಾಗವಹಿಸಿ ನೂತನ ರಥದಲ್ಲಿ ಶ್ರೀ ಲಕ್ಷ್ಮಿನೃಸಿಂಹ ದೇವರು ರಥಾರೂಢನಾಗುವ ದಿವ್ಯ ಭವ್ಯ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಮಠದಿಂದ ಆಮಂತ್ರಿಸಲಾಗಿದೆ.