ಶಿರಸಿಯಲ್ಲಿ ಅದ್ದೂರಿಯಾಗಿ ನಡೆದ ಯುಗಾದಿ ಉತ್ಸವ: ಕಣ್ಮನಸೆಳೆದ ಶೋಭಾಯಾತ್ರೆ
ಶಿರಸಿ: ಹಿಂದುತ್ವದ ಭಾವ ಬುನಾದಿಯಾದ ಯುಗಾದಿ ಹಬ್ಬ ಎಲ್ಲರನ್ನೂ ಒಂದೆಡೆ ಸೇರಿಸುವ ಹಬ್ಬವಾಗಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ನುಡಿದರು.
ನಗರದ ವಿಕಾಸಾಶ್ರಮ ಬಯಲಿನಲ್ಲಿ ಆಯೋಜಿಸಲಾಗಿದ್ದ 27ನೇ ಯುಗಾದಿ ಉತ್ಸವ ಸಮಾರಂಭದಲ್ಲಿ ದಿವ್ಯಸಾನಿಧ್ಯವಹಿಸಿ ಆಶೀರ್ವಚಿಸಿದರು. ಮನುಕುಲದ ಪಾಪ ತೊಳೆಯುವ ಪಾಪವಿನಾಶಿನಿ ಗಂಗಾ ಮಾತೆ ಪ್ರತಿಯೊಬ್ಬರ ಪ್ರಾತಃಸ್ಮರಣೆಯಾಗಿರಬೇಕು. ಗಂಗೆಯನ್ನು ನೆನಯುವ ಮೂಲಕ ದಿನವನ್ನು ಪ್ರಾರಂಭಿಸಬೇಕು. ಸೂರ್ಯನಮಸ್ಕಾರ, ಭಗವದ್ಗೀತಾ ಪಠಣ, ಸಾಯಂಕಾಲ ಭಜನೆ ಇಂತಹ ಒಳ್ಳೆ ಅಭ್ಯಾಸಗಳಿಂದ ಜೀವನದಲ್ಲಿ ಅತ್ಯುತ್ತಮ ಪರಿವರ್ತನೆ ಹೊಂದಲು ಸಹಾಯಕವಾಗಿದೆ. ದೇವರಲ್ಲಿ ಭಕ್ತಿ ಬೆಳೆಸಿಕೊಂಡಷ್ಟು ಪರಿಪೂರ್ಣವಾಗಲು ಸಾಧ್ಯ ಎಂದರು.
ಸೊಂದಾ ಜೈನ ಮಠದ ಶ್ರೀ ಭಟ್ಟಾಕಳಂಕ ಭಟ್ಟಾರಕ ಸ್ವಾಮೀಜಿ ಆಶೀರ್ವಚಿಸಿ, ಅರಿಷಡ್ವರ್ಗಗಳಾದ ಕಾಮ, ಕ್ರೋಧ,ಮೋಹ,ಲೋಭ,ಮದ, ಮಾತ್ಸರ್ಯಗಳನ್ನು ತೊರೆದು, ಉತ್ತಮ ಜೀವನಕ್ಕೆ ಮುಂದಡಿಯಿಡಲು ಯುಗಾದಿಯ ಪರ್ವಕಾಲ ಸಕಾಲವಾಗಿದೆ. ದುಶ್ಚಟ, ದುರ್ಗುಣಗಳನ್ನು ಬಿಟ್ಟು ಮನಃಪರಿವರ್ತನೆ ಮಾಡಿಕೊಂಡು ಹೊಸ ಸಂವತ್ಸರಕ್ಕೆ ಹೊಸ ಜೀವನ ಆರಂಭಿಸಿ ಎಂದರು.
ನಗರದ ಬಣ್ಣದಮಠದ ಮ.ನಿ.ಪ್ರ. ಶಿವಲಿಂಗ ಮಹಾಸ್ವಾಮಿಗಳು ದಿವ್ಯ ಉಪಸ್ಥಿತಿ ನೀಡಿ, ನಮ್ಮ ಮೂಲಬೇರನ್ನು ಮರೆತು ಉಳಿದೆಡೆ ಕೈ ಚಾಚುತ್ತಿದ್ದೇವೆ. ಪಾಶ್ಚಾತ್ಯ ಸಂಸ್ಕೃತಿಯಿಂದ ನಮ್ಮ ಮೂಲ ಶಿಕ್ಷಣ ಪದ್ಧತಿಯೇ ಕಣ್ಮರೆಯಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಪಾಶ್ಚಾತ್ಯರು ನಮ್ಮ ಸಂಸ್ಕೃತಿಯತ್ತ ಮುಖಮಾಡುತ್ತಿದ್ದರೆ, ನಮ್ಮವರು ವಿಮುಖರಾಗುತ್ತಿರುವುದು ವಿಷಾದನೀಯ ಸಂಗತಿ ಎಂದರು. ಧರ್ಮದಿಂದ ಎಲ್ಲವನ್ನೂ ಜಯಿಸಲು ಸಾಧ್ಯ.ಆದ್ದರಿಂದ ಧರ್ಮ ಪ್ರಚಾರ ಕಾರ್ಯದಲ್ಲಿ ಹೆಚ್ಚಾಗಿ ತೊಡಗಬೇಕು. ಸತ್ಕಾರ್ಯಗಳು ಹೆಚ್ಚಾದಂತೆ ಸಮಾಜದಲ್ಲಿನ ವಿಕೃತಿಗಳ ಪ್ರಮಾಣ ಕ್ಷೀಣಿಸುತ್ತದೆ. ಹೆಚ್ಚುತ್ತಿರುವ ಭಯೋತ್ಪಾದನೆ ವಿನಾಶದ ದಾರಿಯನ್ನು ತೋರಿಸುತ್ತದೆ. ಇದರ ಕುರಿತಾಗಿ ಪ್ರತಿಯೊಬ್ಬರೂ ಜಾಗೃತರಾಗಬೇಕು ಎಂದರು.
ಯುಗಾದಿ ಸಮಿತಿಯ ಅಧ್ಯಕ್ಷ ರಮೇಶ್ ದುಬಾಶಿ ಮಾತನಾಡಿ 27ನೇ ವರ್ಷದ ಯುಗಾದಿ ಉತ್ಸವವು ಸಾರ್ವಜನಿಕರ ಸಹಕಾರದಿಂದ ಅತೀ ವಿಜೃಂಭಣೆಯಿಂದ ನಡೆಯುತ್ತಿದೆ ಎಂದು ಹೇಳಿ, ಉತ್ಸವದ ಯಶಸ್ಸಿಗೆ ಕಾರಣೀಭೂತರಾದ ಪ್ರತಿಯೊಬ್ಬರಿಗೂ ಕೃತಜ್ಞತೆಯನ್ನು ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಯುಗಾದಿ ಸಮಿತಿ ಉಪಾಧ್ಯಕ್ಷ ಅಶ್ವಿನ್ ನಾಯ್ಕ್, ಪ್ರಮುಖರಾದ ಶ್ರೀನಿವಾಸ ಹೆಬ್ಬಾರ್, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಭೀಮಣ್ಣ ನಾಯ್ಕ್,ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಮುಂತಾದ ಪ್ರಮುಖರು ಉಪಸ್ಥಿತರಿದ್ದರು. ಸಾರ್ವಜನಿಕರು ಅತ್ಯುತ್ಸಾಹದಿಂದ ಭಾಗವಹಿಸಿ ಯುಗಾದಿ ಉತ್ಸವದ ಸಂಭ್ರಮದಲ್ಲಿ ಪಾಲ್ಗೊಂಡರು. ಸಭಾ ಕಾರ್ಯಕ್ರಮದ ನಂತರ ಬೃಹತ್ ಶೋಭಾಯಾತ್ರೆಗೆ ಚಾಲನೆ ನೀಡಲಾಗಿದ್ದು, 50ಕ್ಕೂ ಹೆಚ್ಚಿನ ವಿವಿಧ ವಿನ್ಯಾಸದ ಬಂಡಿಗಳು ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿದವು.