ಸಿದ್ದಾಪುರ : ರಥೋತ್ಸವದಲ್ಲಿ ಕಾಲು ಕಳೆದುಕೊಂಡ ವ್ಯಕ್ತಿ ಕುಟುಂಬಕ್ಕೆ ಸರಕಾರದಿಂದ ಪರಿಹಾರ ನೀಡುವಂತೆ ದಲಿತ ಸಮುದಾಯದ ಮುಖಂಡರು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಇಟಗಿಯಲ್ಲಿ ಮಾರ್ಚ್ 8 ರಂದು ನಡೆದ ಶ್ರೀ ರಾಮೇಶ್ವರ ದೇವರ ಜಾತ್ರಾ ಮಹೋತ್ಸವದಲ್ಲಿ ರಥದ ಚಕ್ರಕ್ಕೆ ಕಾಲು ಸಿಲುಕಿ ಗಾಯಗೊಂಡ ವೆಂಕಟರಮಣ ಹಸ್ಲರ್ ಗಿಳಸೆ ಒಂದು ಕಾಲು ಕಳೆದುಕೊಂಡಿದ್ದಾರೆ. ಅವರ ಕುಟುಂಬಕ್ಕೆ ಸರಕಾರ ಪರಿಹಾರ ನೀಡಬೇಕು ಮತ್ತು ಅವರ ಕುಟುಂಬದ ಓರ್ವ ಸದಸ್ಯರಿಗೆ ಸರ್ಕಾರಿ, ಅರೆ ಸರ್ಕಾರಿ ಅಥವಾ ಗುತ್ತಿಗೆ ಆಧಾರದಲ್ಲಿ ಕೆಲಸ ನೀಡಬೇಕು ಎಂದು ಸಿದ್ದಾಪುರ ಅಂಬೇಡ್ಕರ್ ಶಕ್ತಿ ಸಂಘದ ಅಧ್ಯಕ್ಷ ನಂದನ ಬೋರ್ಕರ್ ಮನವಿ ಮಾಡಿದರು.
ಅವರು ಗುರುವಾರ ತಾಲೂಕ ಆಡಳಿತ ಸೌಧದಲ್ಲಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು. ಇವರ ಕುಟುಂಬವು ಬಡ ಕುಟುಂಬವಾಗಿದ್ದು ಯಾವುದೇ ಜಮೀನು ಇವರು ಹೊಂದಿಲ್ಲ ವೆಂಕಟರಮಣ ಅವರ ಕೂಲಿ ಕೆಲಸದಲ್ಲೇ ಜೀವನ ನಡೆಯುತ್ತಿತ್ತು ಆದರೆ ಅವರು ಇನ್ನು ಮುಂದೆ ಕೆಲಸ ಮಾಡುವ ಸ್ಥಿತಿಯಲ್ಲಿ ಇಲ್ಲ. ಹಾಗಾಗಿ ಅವರ ಸಮಸ್ಯೆ ಮನಗಂಡು ಸರಕಾರ ಸ್ಥಳೀಯ ಶಾಸಕರು ಉಸ್ತುವಾರಿ ಮಂತ್ರಿಗಳು ಸೂಕ್ತ ಪರಿಹಾರ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.
ಚಿಕಿತ್ಸೆಗೆ ಸಹಕರಿಸಿದ ದೇವಾಲಯದ ಆಡಳಿತ ಕಮಿಟಿ ಅವರಿಗೆ, ತಹಸೀಲ್ದಾರ್, ಪೊಲೀಸ್ ಇಲಾಖೆ ಅಧಿಕಾರಿಗಳಿಗೆ, ಇಟಗಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ಅಲ್ಟ್ರಾಸಿಟಿ ಕಮಿಟಿ ಸದಸ್ಯ ಕಿರಣ್ ಕುಮಾರ್, ಅಣ್ಣಪ್ಪ ಶಾನ್ ಬಾಳೆಗದ್ದೆ, ಈಶ್ವರ ವೆಂಕಟರಮಣ ಹಸ್ಲರ್, ಕಮಲಾಕರ ಜೋಗಳೇಕರ್ ಮತ್ತಿತರರು ಉಪಸ್ಥಿತರಿದ್ದರು.