ವೆಬ್‌ಕಾಸ್ಟ್ ಮೂಲಕ ಚಾಲನೆ ನೀಡಿದ ಗೃಹಸಚಿವ ಡಾ.ಜಿ.ಪರಮೇಶ್ವರ್: ರಸ್ತೆ ನಿಯಮ ಪಾಲಿಸಲು ಸೂಚನೆ
ಶಿರಸಿ: ನಗರದಲ್ಲಿ ಪ್ರಾರಂಭಿಸಲಾದ ನೂತನ ಸಂಚಾರ ನಿಯಂತ್ರಣ ಪೊಲೀಸ್ ಠಾಣೆಯನ್ನು ಗೃಹ ಸಚಿವ ಜಿ. ಪರಮೇಶ್ವರ ಕಾರವಾರದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ವೆಬ್‌ಕಾಸ್ಟ್ ಮುಖಾಂತರ ಬುಧವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಸಹಕಾರದಿಂದ ಶಿರಸಿಯಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ಉದ್ಘಾಟನೆಯಾಗಿದೆ. ನಾನು ಶಿರಸಿಗೆ ಬಂದು ಉದ್ಘಾಟನೆ ಮಾಡಬೇಕಿತ್ತು. ಕಾರಣಾಂತರದಿಂದ ನನಗೆ ಬರಲು ಆಗಿಲ್ಲ. ಮುಂದಿನ ಸಲ ನಾನು ಖಂಡಿತ ಶಿರಸಿಗೆ ಬರುತ್ತೇನೆ ಎಂದರು. ಅಲ್ಲದೆ ಟ್ರಾಫಿಕ್ ಪೊಲೀಸ್ ಠಾಣೆಗೆ ಬೇಕಾದ ಸ್ವಂತ ಕಟ್ಟಡವನ್ನು ನಿರ್ಮಿಸಲು ಹಣಕಾಸಿನ ನೆರವನ್ನು ನೀಡುವುದಾಗಿ ಭರವಸೆ ನೀಡಿದರು. ಟ್ರಾಫಿಕ್ ಪೊಲೀಸ್ ಠಾಣೆ ಪಿಎಸ್‌ಐ ಎಮ್. ಜಿ. ಕುಂಬಾರ ಹಾಗೂ ಪೊಲೀಸರು ಗೃಹ ಸಚಿವರಿಗೆ ಗೌರವ ವಂದನೆ ಸಲ್ಲಿಸಿದರು.
ಶಿರಸಿಯ ವೇದಿಕೆ ಕಾರ್ಯಕ್ರಮದ ವೇಳೆ ದೈವಜ್ಞ ಮಹಿಳಾ ಮಂಡಳ ವತಿಯಿಂದ ನುಡಿಸಲಾದ ಚೆಂಡೆ ವಾದನ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಸಚಿವ ಮಂಕಾಳ ವೈದ್ಯ, ಶಾಸಕ ಭೀಮಣ್ಣ ನಾಯ್ಕ, ಶಾಸಕ ಶಿವರಾಮ ಹೆಬ್ಬಾರ, ಸತೀಶ ನಾಯ್ಕ, ಜಿಲ್ಲಾಧಿಕಾರಿ ಕೆ. ಲಕ್ಷ್ಮೀ ಪ್ರಿಯಾ, ಎಸ್ಪಿ ನಾರಾಯಣ ಎಂ, ಗಣೇಶ ದಾವಣಗೆರೆ, ಪ್ರದೀಪ್ ಶೆಟ್ಟಿ, ಸಂತೋಷ ಶೆಟ್ಟಿ, ಗುತ್ತಿಗೆದಾರ ಪ್ರವೀಣ, ಪ್ರಸನ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಟ್ರಾಫಿಕ್ ಪೊಲೀಸ್ ಠಾಣೆ ಆರಂಭದ ಮೂಲಕ ಶಿರಸಿ ಜನರ ಬಹು ವರ್ಷದ ಕನಸು ಇಂದು ಈಡೇರಿದಂತಾಗಿದೆ. ಇದರ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು.
-ಭೀಮಣ್ಣ ನಾಯ್ಕ ಶಾಸಕರು, ಶಿರಸಿ-ಸಿದ್ದಾಪುರ ಕ್ಷೇತ್ರ
ನೂತನ ಟ್ರಾಫಿಕ್ ಪೊಲೀಸ್ ಠಾಣೆ ಉದ್ಘಾಟನೆಗೊಂಡ ಹಿನ್ನೆಲೆಯಲ್ಲಿ ಸಂಚಾರಿ ಠಾಣೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಗರದಾದ್ಯಂತ ಬೈಕ್ ಜಾಥಾ ಹಮ್ಮಿಕೊಂಡು ಸಂಚಾರಿ ನಿಯಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ನಗರದ ಚೌಕಿಮಠದ ಟ್ರಾಫಿಕ್ ಪೊಲೀಸ್ ಠಾಣೆಯಿಂದ ಆರಂಭಗೊಂಡ ಜಾಥಾವು ರಾಘವೇಂದ್ರ ಸರ್ಕಲ್, ಅಶ್ವಿನಿ ಸರ್ಕಲ್, ಹೊಸಪೇಟೆ ರಸ್ತೆ, ದೇವಿಕೆರೆ, ನಟರಾಜ ರಸ್ತೆ, ಅಂಚೆವೃತ್ತ, ಕೋಟೆಕೆರೆ, ಮಾರಿಕಾಂಬಾ ದೇವಸ್ಥಾನ, ಶಿವಾಜಿ ಚೌಕ, ಸಿಪಿ ಬಜಾರ್, ಝೂ ಸರ್ಕಲ್ ಮೂಲಕ ವಾಪಸ್ ಬಂದು ಠಾಣೆಯಲ್ಲಿ ಮುಕ್ತಾಯಗೊಂಡಿತು.