ಶಿರಸಿ: ಸಾಮಾನ್ಯವಾಗಿ ಮದುವೆ-ಉಪನಯನದ ಆಮಂತ್ರಣ ಪತ್ರಿಕೆಗಳು ಪೇಪರ್, ಕಾರ್ಡ್ಶೀಟ್ ಗಳ ವಿವಿಧ ವಿನ್ಯಾಸಗಳಲ್ಲಿರುವುದನ್ನು ನಾವೆಲ್ಲರೂ ನೋಡಿರುತ್ತೇವೆ. ಆದರೆ ಇಲ್ಲೊಂದು ವಿಶೇಷವಾದ ಮದುವೆ ಆಮಂತ್ರಣ ಪತ್ರಿಕೆ ಎಲ್ಲರ ಗಮನ ಸೆಳೆದಿದೆ.
ಶಿರಸಿ ತಾಲೂಕಿನ ಹೊನ್ನೆಗದ್ದೆಯ ಮಹಾಲಕ್ಷ್ಮೀ ಸತ್ಯನಾರಾಯಣ ಹೆಗಡೆ ಇವರ ಮಗ ಖ್ಯಾತ ಪಶುವೈದ್ಯ ಪರಮೇಶ್ವರ ಎಸ್.ಹೆಗಡೆ (ಡಾ. ಪಿ.ಎಸ್.ಹೆಗಡೆ) ಇವರ ಮಗಳ ಮದುವೆಯ ಆಮಂತ್ರಣ ಆಕರ್ಷಣೀಯವಾಗಿದೆ. ಏನಾದರೂ ವಿಭಿನ್ನ ರೀತಿಯಲ್ಲಿ ಮದುವೆಯ ಆಮಂತ್ರಣವಿರಬೇಕು ಎಂದು ಯೋಚನೆಯಲ್ಲಿದ್ದಾಗ ಸೃಷ್ಟಿಯಾಗಿದ್ದೇ ಈ ಆಮಂತ್ರಣ ಎನ್ನುತ್ತಾರೆ ಡಾ.ಪಿ.ಎಸ್.ಹೆಗಡೆ. ಮನೆಯಲ್ಲಿ ಸಾಮಾನ್ಯವಾಗಿ ಊಟಕ್ಕೆ ಬಳಸುವ ಸ್ಟೀಲ್ ಬಟ್ಟಲಿನ ಹಿಂಭಾಗದಲ್ಲಿ ಡಿಜಿಟಲ್ ಪ್ರಿಂಟ್ ಮೂಲಕ ತಮ್ಮ ಮಗಳ ಮದುವೆಯ ಕರೆಯೋಲೆಯನ್ನು ಮುದ್ರಿಸಿ ಮದುವೆಗೆ ಆಮಂತ್ರಿಸಿದ್ದಾರೆ.
ಪರಿಸರಕ್ಕೆ ಪೂರಕ ಆಮಂತ್ರಣ : ಸಾಮಾನ್ಯವಾಗಿ ಕಾಗದದ ಮೇಲೆ ವಿವಿಧ ರೀತಿಯಲ್ಲಿ ಮಾಡಿಸುವ ಆಮಂತ್ರಣ ಪತ್ರಿಕೆ ಎಲ್ಲೆಡೆ ಕಾಣುತ್ತದೆ. ಆದರೆ ಪರಿಸರಕ್ಕೆ ಪೂರಕವಾಗಿ, ಪ್ರತಿದಿನದ ಬಳಕೆಗೆ ಅನುಕೂಲವಾಗುವಂತೆ ಸ್ಟೀಲ್ ಬಟ್ಟಲಿನಲ್ಲಿ ಆಮಂತ್ರಣ ಮುದ್ರಿಸಿದ್ದು ಗರ್ಮನಾರ್ಹವಾಗಿದ್ದು, ಜೊತೆಗೆ ಪರಿಸರಕ್ಕೆ ಹಾನಿಯಾಗದಂತೆ ಪೂರಕವಾಗಿ ಮೂಡಿಬಂದಿದ್ದು ವಿಶೇಷವಾಗಿದೆ. ಈ ಹಿಂದೆಯೂ ಸಹ ತಮ್ಮ ಜ್ಯೇಷ್ಠ ಪುತ್ರಿಯ ಮದುವೆಯಲ್ಲಿ ಇದೆ ರೀತಿ ವಿಶೇಷವಾಗಿ ಬಿಳಿ ಕರವಸ್ತ್ರದಲ್ಲಿ (ಕರ್ಚೀಫ್) ಆಮಂತ್ರಣವನ್ನು ಮುದ್ರಿಸಿ, ಪ್ರಶಂಸೆಗೆ ಪಾತ್ರವಾಗಿತ್ತು.