ದಾಂಡೇಲಿ : ತಾಲ್ಲೂಕಿನ ಬಡಕಾನಶಿರಡಾ ಗ್ರಾ.ಪಂ. ವ್ಯಾಪ್ತಿಯ ಹಾರ್ನೋಡಾ ಗ್ರಾಮದಲ್ಲಿ ಹುಲ್ಲಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಹಾನಿಯಾದ ಘಟನೆ ಶನಿವಾರ ನಡೆದಿದೆ.
ಹಾರ್ನೋಡಾ ಗ್ರಾಮದ ನಿವಾಸಿ ಬಾಬು ಲಕ್ಕು ಪಟಕಾರೆ ಎಂಬವರಿಗೆ ಸೇರಿದ ಹುಲ್ಲಿನ ಬಣವೆಯಾಗಿದೆ. ಆರ್ಥಿಕವಾಗಿ ತೀರಾ ಬಡವರಾದ ಬಾಬು ಲಕ್ಕು ಪಟಕಾರೆ ತಮ್ಮ ದನಕರುಗಳಿಗಾಗಿ ರಾಮನಗರದಿಂದ ಲಕ್ಷಾಂತರ ರೂಪಾಯಿ ಹಣವನ್ನು ವ್ಯಯಿಸಿ ಹುಲ್ಲನ್ನು ಖರೀದಿಸಿದ್ದರು. ಇದೀಗ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮವಾಗಿ ಹುಲ್ಲು ಸಂಪೂರ್ಣ ಭಸ್ಮವಾಗಿದೆ. ಘಟನೆ ನಡೆದ ತಕ್ಷಣವೇ ಸ್ಥಳೀಯರು ಬೆಂಕಿ ನಂದಿಸಲು ಹರಸಪಟ್ಟಿದ್ದಾರೆ. ಇತ್ತ ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಅಗ್ನಿಶಾಮಕ ದಳವು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲು ಶ್ರಮ ಪಟ್ಟಿದೆ. ಆದಾಗ್ಯೂ ಹುಲ್ಲಿನ ಬಣವೆಯನ್ನು ಬೆಂಕಿ ಸಂಪೂರ್ಣವಾಗಿ ಆವರಿಸಿಕೊಂಡಿತ್ತು. ಬೇಸಿಗೆ ಕಾಲದಲ್ಲಿ ದನಕರುಗಳಿಗೆ ನಿತ್ಯ ಆಹಾರಕ್ಕಾಗಿ ತಂದಿಟ್ಟ ಹುಲ್ಲು ಇದೀಗ ಬೆಂಕಿಗೆ ಆಹುತಿಯಾಗಿರುವುದರಿಂದ ಬಾಬು ಲಕ್ಕು ಪಟಕಾರೆ ಅವರು ತೀವ್ರ ನೊಂದು ಕೊಂಡಿದ್ದಾರೆ. ಅಗ್ನಿ ಅವಘಡದಿಂದ ಸರಿ ಸುಮಾರು ಒಂದುವರೆ ಲಕ್ಷ ರೂಪಾಯಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದ್ದು, ಸಂಬಂಧಪಟ್ಟ ಇಲಾಖೆಯವರು ಸೂಕ್ತ ಪರಿಹಾರಕ್ಕಾಗಿ ಅಗತ್ಯ ಕ್ರಮವನ್ನು ಕೈಗೊಳ್ಳಬೇಕಾಗಿದೆ.