ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ಚುನಾವಣೆ: ಎ.ಆರ್. ಅಜೀತ್ ಶಿರಹಟ್ಟಿ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ಚುನಾವಣಾ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘಿಸಿದ ರಿಟರ್ನಿಂಗ್ ಆಫೀಸರ್ ಹಾಗೂ ಶಿರಸಿ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ (ಎ.ಆರ್) ಅಜೀತ್ ಶಿರಹಟ್ಟಿ ರವರ ಆದೇಶಕ್ಕೆ ಧಾರವಾಡದ ಉಚ್ಛನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ಚುನಾವಣೆಯಲ್ಲಿ ನಿಯಮ ಪಾಲಿಸದೇ ಒಂದೇ ದಿನ ಎರಡೆರಡು ಆದೇಶವನ್ನು ಹೊರಡಿಸಿದ ರಿಟರ್ನಿಂಗ್ ಅಧಿಕಾರಿ ಅಜೀತ್ ಶಿರಹಟ್ಟಿಯವರು ಚುನಾವಣಾ ಪ್ರಕ್ರಿಯೆಯ ಮಾಹಿತಿಯನ್ನು ನಿಯಮಾನುಸಾರ ಸಾರ್ವಜನಿಕವಾಗಿ ಪ್ರಕಟಿಸದೇ ಗೊಂದಲ ಸೃಷ್ಟಿಸಿದ್ದರು. ಈ ಬಗ್ಗೆ ಮಾಹಿತಿ ಕೇಳಿದ ಒಕ್ಕೂಟದ ನಿರ್ದೇಶಕಿ ಸರಸ್ವತಿ ಎನ್.ರವಿಯವರಿಗೆ ಕಛೇರಿಗೆ ಕರೆದು ಬೆದರಿಕೆ ಹಾಕಿದ್ದರು. ಚುನಾವಣಾ ಅಕ್ರಮದ ಕುರಿತು ಧರಣಿ ಆರಂಭಿಸಿದ ಸರಸ್ವತಿ ಎನ್. ರವಿಯವರು ಶಿರಸಿ ಉಪವಿಭಾಗಾಧಿಕಾರಿಗಳ ಸಂಧಾನದ ಮೇರೆಗೆ ಧರಣಿ ಕೈ ಬಿಟ್ಟು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರುಗಳಿಗೆ ದೂರು ಸಲ್ಲಿಸಿ ಹೈ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಸಹಕಾರಿ ವಲಯದಲ್ಲಿ ಸಂಚಲನ ಮೂಡಿಸಿದೆ.