ಶಿರಸಿ: ನಾವು ಏನಾಗಬೇಕು ಎಂಬುದನ್ನು ಮೊದಲು ನಿರ್ಣಯ ಮಾಡಿಕೊಳ್ಳಬೇಕು.ಸಾಧನೆ ಯಾರೊಬ್ಬರ ಸ್ವತ್ತಲ್ಲ.ನೀವು ಸತತ ಪ್ರಯತ್ನಶೀಲರಾದರೆ ಏನಾದರು ಸಾಧಿಸಬಹುದು. ನೀವೆಲ್ಲರೂ ಸಾಧನೆಯ ನಟ್ಟುಗಳಿದ್ದಂತೆ. ಎಂದು ಸ್ಕೌಟ್ಸ್ & ಗೈಡ್ಸ್ ನ ಜಿಲ್ಲಾ ಉಪಾಧ್ಯಕ್ಷ ಎಸ್.ಎಸ್.ಭಟ್ ಲೋಕೇಶ್ವರ ಹೇಳಿದರು
ಶಿರಸಿಯ ಎಂ.ಇ.ಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ಸಂಘ ಒಕ್ಕೂಟ ಕ್ರೀಡೆ, ರಾಷ್ಟೀಯ ಸೇವಾ ಯೋಜನೆ, ರೆಡ್ ಕ್ರಾಸ್, ಸ್ಕೌಟ್ಸ್ &ಗೈಡ್ಸ್ ಘಟಕಗಳ ವಾರ್ಷಿಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ನಾನು ಅತ್ಯುತ್ತಮ ಶಿಕ್ಷಣ ಪಡೆದು ಗೋಲ್ಡ್ ಮೆಡೆಲ್ ಪಡೆದುಕೊಳ್ಳಬೇಕು ಎಂಬುದು ನನ್ನ ಕನಸಾಗಿತ್ತು. 1957ರಲ್ಲಿ ಹಾರ್ಡ್ವರ್ಕರ್ ಪ್ರಶಸ್ತಿಯನ್ನು ಪಡೆದುಕೊಂಡೆ. ಇಂದಿಗೆ 1ಕೆಜಿ ಸರ್ಟಿಫಿಕೇಟ್ಗಳನ್ನು ಪಡೆದುಕೊಂಡಿದ್ದೇನೆ. ನಿವೃತ್ತಿಯ ನಂತರ 5 ರಾಜ್ಯ ಪ್ರಶಸ್ತಿ ಪಡೆದುಕೊಂಡೆ. ಸಾಧನೆಯ ಮುಂದುವರೆಸಬೇಕಾದರೆ ಸ್ಪರ್ಧಾತ್ಮಕ ಮನೋಭಾವ, ಕ್ರಿಯಾಶೀಲ ಪ್ರವೃತ್ತಿಯನ್ನು ಹೊಂದಬೇಕು. ನಮಗೆ ಏನೇ ಬಂದರೂ ಎದುರಿಸುವ ಧೈರ್ಯ ಛಲ ಬೆಳೆಸಿಕೊಳ್ಳಿ, ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ. ಎಂ. ಕಾಲೇಜಿನ ಉಪಸಮಿತಿ ಅಧ್ಯಕ್ಷ ಎಸ್.ಕೆ. ಭಾಗವತ ಮಾತನಾಡಿ, ಎಲ್ಲಾ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಸಾಧನೆ ಮಾಡಬೇಕಾದರೆ ಏನು ಮಾಡಬೇಕು ಎಂಬುದು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು. ಇದು ಬಹಳ ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ಈ ಕಾರ್ಯಕ್ರಮ ನಿರ್ಮಾಣಗೊಂಡಿದೆ. ವಿದ್ಯಾರ್ಥಿಗಳು ತಮ್ಮ ತಮ್ಮ ಜವಾಬ್ದಾರಿಯನ್ನು ಸೂಕ್ತವಾಗಿ ನಡೆಸಿಕೊಂಡು ಹೋಗಬೇಕು. ಶಿಕ್ಷಣ ಮತ್ತು ಜೀವನಕ್ಕೆ ಅನುಕೂಲವಾಗುವಂತಹ ಯಾವುದೇ ಚಟುವಟಿಕೆಗಳನ್ನು ಮಾಡಿದರೂ ಅದಕ್ಕೆ ನಾವು ಬೆನ್ನೆಲುಬಾಗಿ ನಿಲ್ಲುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಜಿ. ಟಿ. ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇದೇ ಸಂದರ್ಭದಲ್ಲಿ ಎಸ್.ಎಸ್.ಭಟ್ ಲೋಕೇಶ್ವರ ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿನಿ ಸಂಗೀತ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದ ಅಖಿಲಾ ವಿ. ಭಟ್ ಇವರಿಗೆ ಗೌರವ ಸಮರ್ಪಣೆ ಮಾಡಲಾಯಿತು.ಬಿ ಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿ ಸುಮಂತ್ ಭಟ್ ಸಮಿತಿ ಘೋಷಣೆ ಮತ್ತು ಕಾಲೇಜಿನ ಕ್ಲಬ್ ಮೆಂಬರ್ಸ್ ಪಟ್ಟಿಯನ್ನು ಘೋಷಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಅಖಿಲಾ ಭಟ್ ಅವರ ಲಘು ಸಂಗೀತ ಕಾರ್ಯಕ್ರಮ ಎಲ್ಲರ ಮನಸೂರೆಗೊಳಿಸಿತು .ಕಾಲೇಜಿನ ಸಂಗೀತ ವಿಭಾಗದ ವಿದ್ಯಾರ್ಥಿಗಳು ಸ್ವಾಗತಗೀತೆಯನ್ನು ಹಾಡಿದರು.ಪತ್ರಿಕೋದ್ಯಮ ಮುಖ್ಯಸ್ಥ ರಾಘವೇಂದ್ರ ಹೆಗಡೆ ವಂದಿಸಿದರು ಮತ್ತು ಸಮಾಜಶಾಸ್ತ್ರ ಉಪನ್ಯಾಸಕಿ ವಿಜಯಾ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.