ಬ್ರಹ್ಮ- ಕ್ಷಾತ್ರ ಸೇರಿ ಮುನ್ನಡೆದಾಗ ಮಾತ್ರ ಸನಾತನದ ಉಳಿವು ಸಾಧ್ಯ: ಮಂಜುನಾಥ್ ಭಟ್
- ಶ್ರೀಧರ ಅಣಲಗಾರ
ಯಲ್ಲಾಪುರ: ಪ್ರಯಾಗರಾಜ್ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ಭಾಗವಹಿಸಿದ ಅನೇಕರ ಸಮಾಗಮ, ಗಂಗಾ ಜಲದಿಂದ ಶತರುದ್ರಾಭಿಷೇಕ, ಕುಂಭಮೇಳದಲ್ಲಿ ಭಾಗವಹಿಸಿದವರಿಗೆ ಗೌರವ ಸಮರ್ಪಣೆ…ಇಂತಹ ಅಪರೂಪದ ಕಾರ್ಯಕ್ರಮ ನಡೆದದ್ದು ತಾಲೂಕಿನ ನಂದೊಳ್ಳಿ ಸಮೀಪದ ಭಟ್ರಕೇರಿಯ ಭಾರದ್ವಾಜ ಆಶ್ರಮದಲ್ಲಿ. ಆರ್ಷವಿದ್ಯಾ ಟ್ರಸ್ಟ್ ಹಾಗೂ ಆಯುಷ್ಮಾನ್ ಭವ ವಿಜಯೀಭವ ಬಳಗದಿಂದ ‘ಅಮೃತಾಭಿಷೇಕ’ ಎಂಬ ಈ ವಿಶಿಷ್ಟ ಕಾರ್ಯಕ್ರಮ ನಡೆಯಿತು.
ಪ್ರಯಾಗರಾಜ್ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಭಾಗವಹಿಸಿ, ಪುಣ್ಯಸ್ನಾನ ಮಾಡಿದ ಹಲವರು ಗಂಗಾಜಲದೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಾರದ್ವಾಜೇಶ್ವರನಿಗೆ ಗಂಗಾ ಜಲದಿಂದ ಶತರುದ್ರಾಭಿಷೇಕ ನೆರವೇರಿಸಲಾಯಿತು. ಕುಂಭ ಮೇಳದಲ್ಲಿ ಭಾಗವಹಿಸಿದವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಭಾರದ್ವಾಜಾಶ್ರಮದ ವಿವಿಧ ಪ್ರಕಲ್ಪಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಬಳಗದ ಮುಖ್ಯಸ್ಥ ಮಂಜುನಾಥ ಭಟ್ಟ ಭಟ್ರಕೇರಿ ಮಾತನಾಡಿ, ರಾಷ್ಟ್ರಕ್ಷೇಮ ಹಾಗೂ ರಾಷ್ಟ್ರದ ನೇತಾರರ ದೀರ್ಘಾಯುಷ್ಯದ ಸಂಕಲ್ಪದೊಂದಿಗೆ ನಮ್ಮ ಬಳಗ ರಾಜ್ಯದಾದ್ಯಂತ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದೆ. ಈವರೆಗೆ 307 ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಬ್ರಹ್ಮ ಮತ್ತು ಕ್ಷಾತ್ರ ಒಟ್ಟಾಗಿ ಮುನ್ನಡೆದರೆ ಮಾತ್ರ ಸನಾತನ ಪರಂಪರೆ ಉಳಿಯಲು ಸಾಧ್ಯ ಎಂಬುದು ಇತಿಹಾಸದಿಂದ ತಿಳಿಯುವ ಸಂಗತಿ. ಅದೇ ಸಂಕಲ್ಪದಿಂದ ನಾವೆಲ್ಲ ಮುಂದುವರಿದರೆ ನಮ್ಮ ಸಂಸ್ಕೃತಿಯ ಬೇರು ಇನ್ನಷ್ಟು ಗಟ್ಟಿಯಾಗಲು ಸಾಧ್ಯ. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮುಂದುವರಿಯಲಿದೆ ಎಂದರು.
ಡಾ.ಮಹೇಶ ಭಟ್ಟ ಇಡಗುಂದಿ ಅವರು ರಚಿಸಿದ ಸಪ್ತರ್ಷ್ಯಾಷ್ಟಕವನ್ನು ಬಿಡುಗಡೆಗೊಳಿಸಲಾಯಿತು. ಸನಾತನ ಪರಂಪರೆಯ ಬಗ್ಗೆ ಅನಾದರ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಸಪ್ತರ್ಷಿಗಳ ಅನುಗ್ರಹದಿಂದ ಅದು ದೂರವಾಗಬೇಕು. ಸನಾತನ ಧರ್ಮ, ಆಚರಣೆಗಳ ಬಗ್ಗೆ ಶ್ರದ್ಧೆ ಹೆಚ್ಚಲೆಂಬ ಆಶಯದೊಂದಿಗೆ ಈ ಅಷ್ಟಕ ರಚಿಸಿರುವುದಾಗಿ ಮಹೇಶ ಭಟ್ಟ ತಿಳಿಸಿದರು.
ನಂತರ ಮಾಗೋಡಿನ ಶ್ರೀ ವೀರಮಾರುತಿ ತಾಳಮದ್ದಲೆ ಕೂಟದ ಕಲಾವಿದರಿಂದ ಗಂಗಾವತರಣ ತಾಳಮದ್ದಲೆ ನಡೆಯಿತು. ಎಷ್ಟೇ ಕಷ್ಟಗಳು ಎದುರಾದರೂ ಛಲ ಬಿಡದೇ ತನ್ನ ಪ್ರಯತ್ನದಿಂದ ಭಗೀರಥನು ಗಂಗೆಯನ್ನು ಧರೆಗಿಳಿಸಿದ ಕಥಾನಕವನ್ನು ಕಲಾವಿದರು ಸುಂದರವಾಗಿ ಪ್ರಸ್ತುತಪಡಿಸಿದರು.
ಕುಂಭ ಮೇಳದಿಂದ ಬಂದ ಗಂಗಾ ಜಲದೊಂದಿಗೆ ಭಾರದ್ವಾಜಾಶ್ರಮದ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಚಾಲನೆ ನೀಡುವ ಈ ಮಾದರಿ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ನೂರಾರು ಜನರು ಭಾಗಿಯಾಗಿದ್ದರು.
ಭಾರದ್ವಾಜ ಆಶ್ರಮವನ್ನು ಸನಾತನ ಧಾರ್ಮಿಕ ಕೇಂದ್ರವನ್ನಾಗಿ ರೂಪಿಸುವುದು ಬಳಗದ ಉದ್ದೇಶ. ಗುರುಕುಲ, ಗೋಶಾಲೆ, ಯಾಗಶಾಲೆ, ಯೋಗಕೇಂದ್ರ, ಕಲ್ಯಾಣಿ, ನಕ್ಷತ್ರ ವನ, ರಾಶಿ ವನ, ನವಗ್ರಹವನಗಳನ್ನು ನಿರ್ಮಿಸುವ ಯೋಜನೆ ಹೊಂದಿದ್ದಾರೆ. ಕುಂಭಮೇಳದ ಗಂಗಾಜಲದಿಂದ ರುದ್ರಾಭಿಷೇಕ ಮಾಡಿ, ವೃಕ್ಷಾರೋಪಣ ಮಾಡುವ ಮೂಲಕ ಈ ಯೋಜನೆಗಳಿಗೆ ಚಾಲನೆ ನೀಡಿರುವುದು ವಿಶೇಷ.
ಈ ಸ್ಥಳವನ್ನು ವಿದ್ಯಾಕೇಂದ್ರ, ಶೃದ್ಧಾಕೇಂದ್ರ, ಯೋಗ ಕೇಂದ್ರವಾಗಿ ರೂಪಿಸಲಿದ್ದೇವೆ. ಹಿಂದೆ ಋಷಿಮುನಿಗಳು ಆಶ್ರಮದಲ್ಲಿ ರೂಪಿಸಿದ ಸನಾತನ ಧಾರ್ಮಿಕ ವಾತಾವರಣ ನಿರ್ಮಾಣ ನಮ್ಮ ಸಂಕಲ್ಪ. ಗಂಗಾಜಲದಿಂದ ಶತರುದ್ರಾಭಿಷೇಕದ ಮೂಲಕ ಶುಭಾರಂಭಗೊಂಡಿದೆ.
| ಮಂಜುನಾಥ ಭಟ್ಟ ಭಟ್ರಕೇರಿ
ಆಯುಷ್ಮಾನ್ ಭವ, ವಿಜಯೀಭವ ಬಳಗದ ಮುಖ್ಯಸ್ಥ