ಬನವಾಸಿ: ಐದು ವರ್ಷಗಳಿಗೊಮ್ಮೆ 9 ದಿನಗಳ ಕಾಲ ವಿಜೃಂಭಣೆಯಿಂದ ನಡೆವ ಗ್ರಾಮದೇವತೆ ಹಕ್ಕಲ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಬುಧವಾರ ಮುಂಜಾನೆ ದೇವಿಯ ರಾಜಬೀದಿ ಉತ್ಸವದೊಂದಿಗೆ ಅದ್ದೂರಿಯಾಗಿ ತೆರೆ ಕಂಡಿತು.
ಮಂಗಳವಾರ ಮಧ್ಯರಾತ್ರಿ ವಿಸರ್ಜನಾ ಪೂಜೆ, ಮಂಗಳಾರತಿ ನೆರವೇರಿಸಿ, ಬುಧವಾರ ಮುಂಜಾನೆ ವಿವಿಧ ವಾದ್ಯ ಮೇಳದೊಂದಿಗೆ ಪಟ್ಟಣದ ಬಿಡ್ಕಿ ಬಯಲಿನಿಂದ ಹಕ್ಕಲ ಮಾರಿಕಾಂಬಾ ದೇವಸ್ಥಾನದವರೆಗೆ ವಿಸರ್ಜನಾ ಮೆರವಣಿಗೆ ನಡೆಯಿತು. ಹೂವಿನ ಕೊಪ್ಪಲಕೇರಿಯಲ್ಲಿರುವ ಶ್ರೀ ಹಕ್ಕಲ ಮಾರಿಕಾಂಬಾ ದೇವಸ್ಥಾನ ತಲುಪಿದ ಬಳಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ, ಶ್ರೀ ಹಕ್ಕಲ ಮಾರಿಕಾಂಬಾ ದೇವಿಯ ಮೂರ್ತಿ ವಿಸರ್ಜನೆ ಮಾಡಿ 9 ದಿನ ನಡೆದ ಅದ್ದೂರಿ ಜಾತ್ರೆಗೆ ತೆರೆ ಎಳೆಯಲಾಯಿತು.
ಶ್ರೀ ಹಕ್ಕಲ ಮಾರಿಕಾಂಬಾ ದೇವಿ ಜಾತ್ರೆಯನ್ನು ಐದು ವರ್ಷಗಳಿಗೊಮ್ಮೆ ನಡೆಸಿಕೊಂಡು ಬರಲಾಗುತ್ತಿದ್ದು ವಿವಿಧ ಜಾತಿ, ಧರ್ಮಗಳ ಜನರು ಸೇರಿ ಸೌಹಾರ್ದವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಈ ಬಾರಿ ಮಾರ್ಚ್3 ರಿಂದ ಆರಂಭವಾಗಿ ಮಾ.12ರಂದು ಸಂಪನ್ನಗೊಂಡ ಜಾತ್ರೆಯಲ್ಲಿ ನಿತ್ಯವೂ ಸಾವಿರಾರು ಭಕ್ತರು ಭಾಗವಹಿಸಿ ದೇವಿಯ ದರ್ಶನ ಪಡೆದರು.
ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಶ್ರೀ ಹಕ್ಕಲ ಮಾರಿಕಾಂಬಾ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಮದಾಸ ಚೌದರಿ, ಕಾರ್ಯದರ್ಶಿ ಸುಕುಮಾರ ಆರೇರ, ಜಾತ್ರಾ ಕಮೀಟಿ ಅಧ್ಯಕ್ಷ ವಸಂತ ಇಳಿಗೇರ, ಕಾರ್ಯದರ್ಶಿ ರವಿ ಕೋಳೆಕರ, ಪ್ರಮುಖರಾದ ಬಿ.ಶಿವಾಜಿ, ಮಾಲತೇಶ ಚೌದರಿ, ಸಿದ್ಧಲಿಂಗೇಶ ಕಬ್ಬೂರ, ಸುಧೀರ ನಾಯರ್, ಮಹಾಬಲ ಆರೇರ, ಎನ್.ಪಿ.ಕಾನಳ್ಳಿ, ಸಾಯಿರಾಂ ಕಾನಳ್ಳಿ, ಅರ್ಚಕ ಚಂದ್ರಪ್ಪ, ಚಂದನ್ ಮತ್ತಿತರರು ಇದ್ದರು.