Slide
Slide
Slide
previous arrow
next arrow

‘ನಾನೂ ನಿಮ್ಮ ಹಾಗೆ ಜಿಲ್ಲಾಧಿಕಾರಿ ಆಗಬೇಕು’

300x250 AD

ಜಿಲ್ಲಾಧಿಕಾರಿಯಾಗ ಬಯಸಿದ ವಿದ್ಯಾರ್ಥಿನಿಗೆ ಸೂಕ್ತ ಮಾರ್ಗದರ್ಶನ ನೀಡಿದ ಡಿಸಿ

ಪ್ರತಿಯೊಬ್ಬರಿಗೂ ಜೀವನದಲ್ಲಿ ತಮ್ಮದೇ ಆದ ಗುರಿ ಮತ್ತು ಕನಸುಗಳಿರುತ್ತವೆ ಅವುಗಳನ್ನು ನನಸು ಮಾಡಿಕೊಳ್ಳಲು ಸತತ ಪರಿಶ್ರಮ ಪಟ್ಟರೂ ಹಲವು ಬಾರಿ ಅವುಗಳ ಸಮೀಪ ತೆರಳಿ ನಿರೀಕ್ಷಿತ ಸಾಧನೆಯಿಂದ ವಿಮುಖರಾಗುವ ಸಾಧ್ಯತೆಗಳೇ ಹೆಚ್ಚು. ಆದರೆ ತನ್ನ ಗುರಿಯ ಆಶಯ ಹೇಳಿಕೊಂಡ ವಿದ್ಯಾರ್ಥಿನಿಗೆ ಕೂಡಲೇ ಸ್ವತ: ಅದರ ಅನುಭವವನ್ನು ನೀಡಿ, ಆಕೆ ಕಂಡಿರುವ ಕನಸಿಗೆ ಸ್ಪೂರ್ತಿ ಮತ್ತು ಪ್ರೇರಣೆ ನೀಡುವ ಮೂಲಕ ವಿದ್ಯಾರ್ಥಿನಿಯ ಭವಿಷ್ಯದ ಕನಸನ್ನು ನನಸು ಮಾಡಿದ ಅತ್ಯಂತ ಅಪರೂಪದ ಘಳಿಗೆಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ ಸಾಕ್ಷಿಯಾಗಿದ್ದಾರೆ.

ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಜಿಲ್ಲಾ ಮಟ್ಟದ ವಿಚಾರಗೋಷ್ಠಿ ಕಾರ್ಯಾಗಾರ ಉದ್ಘಾಟನೆಗೆ ಆಗಮಿಸಿದ್ದ ಮೆಟ್ರಿಕ್ ಪೂರ್ವ ಬಾಲಕಿಯರ್ ಹಾಸ್ಟೆಲ್, ಬಾಡದ ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಲು ಉತ್ಸುಕತೆಯಿಂದ ಅವರ ಕಚೇರಿಯ ಕೊಠಡಿಗೆ ತೆರಳಿದರು. ವಿದ್ಯಾರ್ಥಿನಿಯರೊಂದಿಗೆ ಅವರ ವಿದ್ಯಾಭ್ಯಾಸದ ಬಗ್ಗೆ ಮತ್ತು ಆರೋಗ್ಯದ ಕುರಿತು ವಿಚಾರಿಸಿದ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ, ವಿದ್ಯಾಭ್ಯಾಸದ ನಂತರ ಮುಂದೆ ಏನಾಗಬೇಕು ಎಂದು ಕೊಂಡಿದ್ದೀರಿ ಎಂದು ವಿಚಾರಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು, ಡಾಕ್ಟರ್, ಲಾಯರ್, ಇಂಜಿನಿಯರ್ ಆಗುವ ಮತ್ತು ನೌಕಾಪಡೆ ಸೇರುವ ಬಗ್ಗೆ ತಿಳಿಸಿದರು ಆದರೆ ಅದರಲ್ಲಿದ್ದ ಯಲ್ಲಾಪುರ ಮೂಲಕ 8 ನೇ ತರಗತಿ ವಿದ್ಯಾರ್ಥಿನಿ ಸುದೀಪ್ತ ಶಂಕರ್ ಅತ್ತರವಾಲ್ ಮಾತ್ರ ನಾನು ನಿಮ್ಮ ಹಾಗೆ ಡಿಸಿ ಆಗಬೇಕು, ಅದಕ್ಕೆ ಏನು ಓದಬೇಕು ಎಂದು ಜಿಲ್ಲಾಧಿಕಾರಿಗಳನ್ನೇ ಪ್ರಶ್ನಿಸಿದರು.

ಯಾವ ಕಾರಣಕ್ಕೆ ಡಿಸಿ ಆಗಬೇಕು ಎಂಬ ಜಿಲ್ಲಾಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ ವಿದ್ಯಾರ್ಥಿನಿ, ಸಮಾಜದಲ್ಲಿ ಎಲ್ಲರಿಗೂ ನ್ಯಾಯ ದೊರಕಿಸಬೇಕು, ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಬೇಕು ಆದ್ದರಿಂದ ಡಿಸಿ ಆಗಬೇಕು ಎಂದರು.

ಬಾಲಕಿಯ ಪ್ರಶ್ನೆ ಮತ್ತು ಉತ್ತರಿದಂದ ಅಚ್ಚರಿಗೊಂಡ ಜಿಲ್ಲಾಧಿಕಾರಿಗಳು, ನೀನು ಇನ್ನೂ ಚಿಕ್ಕವಳಿದ್ದೀಯಾ ಈಗಿನಿಂದಲೇ ಚೆನ್ನಾಗಿ ಓದು, ದಿನಪತ್ರಿಕೆಗಳನ್ನು ಓದಿ ಹೆಚ್ಚಿನ ಸಾಮಾನ್ಯ ಜ್ಞಾನ ಬೆಳಸಿಕೊಳ್ಳಬೇಕು, ಪದವಿ ಶಿಕ್ಷಣದ ನಂತರ ಯುಪಿಎಸ್‌ಸಿ ಪರೀಕ್ಷೆಗೆ ಅಗತ್ಯ ತರಬೇತಿ ಪಡೆದು, ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಆಗ ಡಿಸಿ ಆಗುತ್ತಿಯಾ, ಇದಕ್ಕಾಗಿ ನಿರಂತರವಾಗಿ ಶ್ರಮ ಪಡಬೇಕು ಎಂದರು.

ಜಿಲ್ಲಾಧಿಕಾರಿಯಾಗುವ ನಿನ್ನ ಕನಸನ್ನು ನನಸು ಮಾಡಿಕೊಳ್ಳಲು ಯಾವುದೇ ಸಂದರ್ಭದಲ್ಲೂ ಇಟ್ಟು ಕೊಂಡಿರುವ ಗುರಿಯಿಂದ ಮತ್ತು ನಿರ್ಧಾರಗಳಿಂದ ಹಿಂದೆ ಸರಿಯದಂತೆ ವಿದ್ಯಾರ್ಥಿನಿಗೆ ಕಿವಿಮಾತುಗಳನ್ನು ಹೇಳಿ, ನಿನ್ನ ಕನಸಿಗೆ ನನ್ನಿಂದ ಈಗಿನಿಂದಲೇ ಪ್ರೇರಣೆ ಸಿಗಲಿ ಎಂದು ತಾವು ಕುಳಿತಿದ್ದ ಕುರ್ಚಿಯಿಂದ ಕೆಳಗಿಳಿದು ವಿದ್ಯಾರ್ಥಿಯನ್ನು ಜಿಲ್ಲಾಧಿಕಾರಿ ಕುರ್ಚಿಯ ಮೇಲೆ ಕೂರಿಸಿದರು.

300x250 AD

ಇತರ ವಿದ್ಯಾರ್ಥಿಗಳ ಜೊತೆ ಜಿಲ್ಲಾಧಿಕಾರಿ ಕುರ್ಚಿಯ ಮೇಲೆ ಕುಳಿತದ್ದ ಬಾಲಕಿಯ ಹಿಂದೆ ನಿಂತ ಜಿಲ್ಲಾಧಿಕಾರಿಗಳು ಪೋಟೋ ತೆಗೆಸಿಕೊಂಡು, ಮುಂದೆ ನಿಜವಾಗಿಯೂ ಜಿಲ್ಲಾಧಿಕಾರಿ ಕುರ್ಚಿಯ ಮೇಲೆ ಆಸೀನವಾಗುವಂತಾಗಲಿ ಎಂದು ಸುದೀಪ್ತ ಶಂಕರ್ ಅತ್ತರವಾಲ್ ಗೆ ಹಾರೈಸಿ, ಇತರೇ ವಿದ್ಯಾರ್ಥಿಗಳಿಗೂ ತಮ್ಮ ಗುರಿ ಸಾಧನೆಗೆ ಸತತವಾಗಿ ಪ್ರಯತ್ನಿಸುವಂತೆ ತಿಳಿಸಿದರು.

ಜಿಲ್ಲಾಧಿಕಾರಿಯಾಗ ಬಯಸಿದ ವಿದ್ಯಾರ್ಥಿನಿಗೆ ಸೂಕ್ತ ಮಾರ್ಗದರ್ಶನ ನೀಡಿ, ತಮ್ಮ ಕುರ್ಚಿಯಲ್ಲಿ ಕೂರಿಸಿ ಅವರ ಕನಸಿಗೆ ಬೆಂಬಲಿಸಿರುವ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ ಅವರ ಕಾರ್ಯ ಜಿಲ್ಲೆಯ ಹಲವು ವಿದ್ಯಾರ್ಥಿನಿಯರಿಗೆ ಉನ್ನತ ಸಾಧನೆಗಳನ್ನು ಮಾಡಲು ಪ್ರೇರಣೆ ನೀಡುವುದು ಖಚಿತ…

ಕೋಟ್

ಜಿಲ್ಲಾಧಿಕಾರಿ ಕುರ್ಚಿಯ ಮೇಲೆ ನಿಜಕ್ಕೂ ಪ್ರೌಡ್ ಫೀಲಿಂಗ್ ಆಯ್ತು, ನಾನೂ ಜಿಲ್ಲಾಧಿಕಾರಿ ಆಗಿಯೇ ಆಗುತ್ತೀನಿ ಎಂಬ ದೃಢ ನಿರ್ಧಾರ ಮಾಡಿದ್ದೇನೆ : ಸುದೀಪ್ತ ಶಂಕರ್ ಅತ್ತರವಾಲ್, ವಿದ್ಯಾರ್ಥಿನಿ.

ಜಿಲ್ಲಾಧಿಕಾರಿಯಾಗಲು ಬಯಸಿರುವ ನಮ್ಮ ಇಲಾಖೆಯ ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿ ಸುದೀಪ್ತ ಶಂಕರ್ ಅತ್ತರವಾಲ್ ಅವರಿಗೆ ಇಲಾಖೆಯ ಮೂಲಕ ಮತ್ತು ವೈಯಕ್ತಿಕವಾಗಿ ಸದಾ ಬೆಂಬಲಕ್ಕೆ ನಿಂತು ಅಗತ್ಯವಿರುವ ಎಲ್ಲಾ ರೀತಿಯ ಪ್ರೋತ್ಸಾಹ ಮತ್ತು ಸಹಕಾರ ನೀಡಲಾಗುವುದು: —
ಉಮೇಶ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ,ಉತ್ತರ ಕನ್ನಡ ಜಿಲ್ಲೆ.

Share This
300x250 AD
300x250 AD
300x250 AD
Back to top