ಯಲ್ಲಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಅಲ್ಪಸಂಖ್ಯಾತರ ತುಷ್ಠೀಕರಣಕ್ಕೆ ಹೆಚ್ಚಿನ ಒತ್ತು ನೀಡಿದೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರು ಇದನ್ನು ಸ್ವಾಗತಿಸಿರುವುದು ಕಾರ್ಯಕರ್ತರಿಗೆ ಮಾಡಿದ ಅಪಮಾನ ಎಂದು ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಹೇಳಿದ್ದಾರೆ.
`ಅಲ್ಪ ಸಂಖ್ಯಾತರ ಕಲ್ಯಾಣಕ್ಕೆ ಸಾವಿರ ಕೋಟಿ ರೂ, ವಕ್ಫ್ ರಕ್ಷಣೆಗೆ 150 ಕೋಟಿ ರೂ, ಉರ್ದು ಶಾಲೆ ಅಭಿವೃದ್ಧಿಗೆ 100 ಕೋಟಿ 6 ಸಾವಿರ ಇಮಾಮ್ಗಳಿಗೆ ಗೌರವಧನ ಹಾಗೂ ಸರ್ಕಾರಿ ಕಾಮಗಾರಿಗಳಲ್ಲಿ ಶೇ 4ರಷ್ಟು ಮುಸ್ಲಿಂ ಸಮುದಾಯಕ್ಕೆ ಮೀಸಲು ಮಾಡುವುದು ಸರಿಯಲ್ಲ’ ಎಂದಿದ್ದಾರೆ.
`ತುಷ್ಟೀಕರಣದ ಉತ್ತುಂಗ ಸ್ಥಿತಿಗೆ ತಲುಪಿರುವ ಕೋಮುವಾದಿ ಸಿದ್ದರಾಮಯ್ಯ ಅವರು ಕೈಗಾರಿಕಾ ಪ್ರದೇಶ ಭೂಮಿ ಹಂಚಿಕೆಯಲ್ಲೂ ಮುಸ್ಲಿಮರಿಗೆ ಶೇ 20ರಷ್ಟು ಮೀಸಲಾತಿ ನೀಡಿದ್ದಾರೆ. ರಾಜ್ಯದಲ್ಲಿರುವ ಆಸ್ತಿಗಳ ಮೇಲೆ ವಕ್ಫ್ ತನ್ನ ವಕ್ರದೃಷ್ಠಿ ಬೀರಿ ಕಬಳಿಸಿದ ನಂತರವೂ ಕೆಐಎಡಿಬಿಯಲ್ಲಿ 20ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಇದರಿಂದ ಇಡೀ ಕೆಐಎಡಿಬಿಯೇ ವಕ್ಫ್ ಆಸ್ತಿ ಎಂದು ಘೋಷಣೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದಿದ್ದಾರೆ.
‘ಬಿಜೆಪಿ ಚಿಹ್ನೆಯ ಅಡಿ ಶಾಸಕರಾದ ಶಿವರಾಮ ಹೆಬ್ಬಾರ ಅವರು ದೃಶ್ಯ ಮಾದ್ಯಮಗಳಲ್ಲಿ ಕಾಂಗ್ರೆಸನ್ನು ಹಾಡಿ ಹೊಗಳುತ್ತಿದ್ದಾರೆ. ಕಾಂಗ್ರೆಸ್ಸಿನ ತುಷ್ಠೀಕರಣ ನೀತಿಯನ್ನು ಸ್ವಾಗತಿಸಿದ ಅವರ ನಡೆ ಬಿಜೆಪಿ ಕಾರ್ಯಕರ್ತರಿಗೆ ಮಾಡಿದ ಅಪಮಾನವಾಗಿದೆ’ ಎಂದು ಪ್ರಸಾದ ಹೆಗಡೆ ಹೇಳಿದ್ದಾರೆ. `ಬಿಜೆಪಿಯಲ್ಲಿದ್ದು ಕಾಂಗ್ರೆಸ್ ಬೆಂಬಲಿಸುವ ಅವರ ವರ್ತನೆಯನ್ನು ಬಿಜೆಪಿ ಖಂಡಿಸಲಿದೆ’ ಎಂದಿದ್ದಾರೆ.
‘ಹಲಾಲ್ ಬಜೆಟ್’ ಎಂದ ಬಿಜೆಪಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಕುರಿತು ಬಿಜೆಪಿಯು ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ಬಾರಿಯ ಬಜೆಟ್ ಹಲಾಲ ಬಜೆಟ್ ಎಂದು ಟೀಕಿಸಿದೆ.
ಕರ್ನಾಟಕ ಬಜೆಟ್ ಅನ್ನು ಇಸ್ಲಾಮೀಕರಣಗೊಳಿಸಿರುವ ಸಿಎಂ ಸಿದ್ದರಾಮಯ್ಯನವರು ಬಜೆಟ್ ನಲ್ಲಿ ಎಸ್ಸಿ,ಎಸ್ಟಿ,ಒಬಿಸಿ ಸಮುದಾಯಗಳಿಗೆ ನೀವು ಕೊಟ್ಟಿರುವುದು ಕೇವಲ ಚಿಪ್ಪು ಮಾತ್ರ ಎಂದು ಟೀಕಿಸಿದೆ.
ಮುಸ್ಲಿಮರಿಗೆ ಸರ್ಕಾರಿ ಗುತ್ತಿಗೆಯಲ್ಲಿ ಮೀಸಲಾತಿ, ಮುಸ್ಲಿಮರ ಸರಳ ಮದುವೆಗೆ 50 ಸಾವಿರ ರೂ. ಖಬರಸ್ಥಾನಗಳ ಮೂಲಸೌಕರ್ಯಕ್ಕೆ 150 ಕೋಟಿ ರೂ. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 50 ಲಕ್ಷ ರೂ. ಮುಸ್ಲಿಮರು ಅತಿಹೆಚ್ಚು ವಾಸವಿರುವ ಪ್ರದೇಶದಲ್ಲಿ ಐಟಿಐ ಸ್ಥಾಪನೆ, ಮುಸ್ಲಿಮ್ ವಿದ್ಯಾರ್ಥಿಗಳಿಗೆ ಶೇ.50 ರಷ್ಟು ಶುಲ್ಕ ಕಡಿತ ಉಲ್ಲಾಳದಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ವಸತಿ ಸಹಿತ ಪಿ.ಯು ಕಾಲೇಜು, ಮುಸ್ಲಿಂ ವಿದ್ಯಾರ್ಥಿಗಳ ರಾಷ್ಟ್ರೀಯ ವಿದೇಶಿ ವಿದ್ಯಾರ್ಥಿ ವೇತನ ಏರಿಕೆ, ಬೆಂಗಳೂರಿನ ಹಜ್ ಭವನದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣ, ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣಾ ಕೌಶಲ್ಯ ತರಬೇತಿ ಘೋಷಣೆ ಮಾಡಲಾಗಿದೆ. ದೇಶದ ಯಾವುದೇ ರಾಜ್ಯದಲ್ಲೂ ಇಲ್ಲದ ದಿವಾಳಿ ಮಾಡೆಲ್ ಕರ್ನಾಟಕದಲ್ಲಿ ಜಾರಿ ಆಗುತ್ತಿದೆ ಎಂದು ಬಿಜೆಪಿ ಟೀಕಿಸಿದೆ.
ಕೋಟ್
ಇದು ಅಲ್ಪಸಂಖ್ಯಾತರ ಓಲೈಕೆಯ ಅದರಲ್ಲೂ ಮುಸ್ಲಿಮರ ಓಲೈಕೆಗಾಗಿ ಮಾಡಿರತಕ್ಕಂತ ಬಜೆಟ್, ಹೇಳಿಕೊಳ್ಳಲು ಅನ್ನದಾತನಿಗೆ ಯಾವುದೇ ವಿಶೇಷ ಸೌಲಭ್ಯವನ್ನು ಹೊಂದಿರದ, ಇದು ಕರ್ನಾಟಕದ ಅಖಂಡತೆಗಾಗಿ ಹೇಳಿಕೊಳ್ಳುವಂತ ಯಾವುದೇ ವೈಶಿಷ್ಟ್ಯತೆ ಇಲ್ಲದ ನೀರಸ ಮತ್ತು ಜನವಿರೋಧಿ ಬಜೆಟ್.
ಗೋಪಾಲಕೃಷ್ಣ ವೈದ್ಯ
(ಮಂಡಲಾಧ್ಯಕ್ಷರು ಬಿಜೆಪಿ ಅಂಕೋಲಾ)
ಇದು ರೈತರ ವಿರೋಧಿ ಬಜೆಟ್ ಹಲಾಲ್ ಬಜೆಟ್ ಮತ್ತು ಉತ್ತರ ಕನ್ನಡಕ್ಕೆ ಸೊನ್ನೆ ಬಜೆಟ್
ನಾರಾಯಣ ಹೆಗಡೆ
(ಅಧ್ಯಕ್ಷರು ಬಿಜೆಪಿ ಶಕ್ತಿ ಕೇಂದ್ರ ಅಗಸೂರು)
ಬಿಜೆಪಿ ಚಿಹ್ನೆಯ ಅಡಿ ಶಾಸಕರಾದ ಶಿವರಾಮ ಹೆಬ್ಬಾರ ಅವರು ದೃಶ್ಯ ಮಾದ್ಯಮಗಳಲ್ಲಿ ಕಾಂಗ್ರೆಸನ್ನು ಹಾಡಿ ಹೊಗಳುತ್ತಿದ್ದಾರೆ. ಕಾಂಗ್ರೆಸ್ಸಿನ ತುಷ್ಠೀಕರಣ ನೀತಿಯನ್ನು ಸ್ವಾಗತಿಸಿದ ಅವರ ನಡೆ ಬಿಜೆಪಿ ಕಾರ್ಯಕರ್ತರಿಗೆ ಮಾಡಿದ ಅಪಮಾನವಾಗಿದೆ
ಪ್ರಸಾದ ಹೆಗಡೆ
ಬಿಜೆಪಿ ಮಂಡಳ ಅಧ್ಯಕ್ಷ