ಶಿರಸಿ; ಸಮಾಜ ಕಲ್ಯಾಣ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ನಾಗರಿಕ ಹಕ್ಕು ರಕ್ಷಣಾ ಕಾಯ್ದೆ 1955 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ ಹಾಗೂ ಇತರೆ ಯೋಜನೆಗಳ ಬಗ್ಗೆ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವ ಜಿಲ್ಲಾ ಮಟ್ಟದ ವಿಚಾರಗೋಷ್ಠಿ ಕಾರ್ಯಗಾರವನ್ನು ಮಾ:5ರಂದು ಬೆಳಿಗ್ಗೆ 10.30 ಗಂಟೆಗೆ ಶಿರಸಿ ನಗರದ ಡಾ|| ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಕಾವ್ಯಾರಾಣಿ ಕೆ.ವಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಜಗದೀಶ ಎನ್. ಗೌಡ, ಪೋಲಿಸ್ ಉಪಾಧೀಕ್ಷಕ ಗಣೇಶ ಕೆ.ಎಲ್. ತಹಶೀಲ್ದಾರ್ ಶ್ರೀಧರ ಮುಂದಲಮನಿ, ಡಾ|| ಬಾಬು ಜಗಜೀವನರಾಮ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರುದ್ರೇಶ, ಡಾ|| ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ಅನಿಲ ಬೀರಾದಾರ, ಇಮ್ಮಡಿ ಸಹಾಯಕ ನಿರ್ದೇಶಕರು (ಗ್ರೇಡ್-2) ಸಮಾಜ ಕಲ್ಯಾಣ ಇಲಾಖೆ ಕೇಶವಮೂರ್ತಿ ಎಚ್., ಪಂಚಾಯತ ರಾಜ್ ಇಲಾಖೆಯ ಅಧಿಕಾರಿಗಳು, ತಾಲೂಕಿನ ಗ್ರಾಮ ಪಂಚಾಯತಿಗಳ ಅಧ್ಯಕ್ಷರು/ಉಪಾಧ್ಯಕ್ಷರು, ಆರಕ್ಷಕ ಇಲಾಖಾ ಸಿಬ್ಬಂದಿಗಳು, ತೋಟಗಾರಿಕೆ ಕಾಲೇಜಿನ ವಿದ್ಯಾರ್ಥಿಗಳು, ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ಮುಖಂಡರುಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.
ಪ್ರಾಸ್ತಾವಿಕದಲ್ಲಿ ಘನ ಸರ್ಕಾರದ ಆದೇಶದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಮತ್ತು ಯೋಜನೆಗಳ ಬಗ್ಗೆ ಜಿಲ್ಲಾ/ತಾಲ್ಲೂಕು/ಹೋಬಳಿ/ಗ್ರಾಮ ಮಟ್ಟದಲ್ಲಿ ಅರಿವು ಮೂಡಿಸುವ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಲು ಫೆ.18 ರಂದು ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಉತ್ತರ ಕನ್ನಡ, ಕಾರವಾರ ರವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಿಳಿಸಿದಂತೆ ಶಿರಸಿಯಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸೂಚಿಸಿರುವ ಪ್ರಯುಕ್ತ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಡಿ ಬರುವ ವಿವಿಧ ಅಭಿವೃದ್ದಿ ನಿಗಮಗಳ ಯೋಜನೆಗಳ ಬಗ್ಗೆ ಕಾರ್ಯಕ್ರಮದಲ್ಲಿ ಮಾಹಿತಿ ನೀಡುವುದಾಗಿ ತಿಳಿಸಿದರು.
ಕು|| ಕಾವ್ಯಾರಾಣಿ ಕೆ.ವಿ. ಕಾರ್ಯಕ್ರಮವನ್ನು ಉದ್ಘಾಟಿಸಿ ಯೋಜನೆಗಳ ಅನುಷ್ಟಾನ ಮಾಡುವಲ್ಲಿ ಅಧಿಕಾರಿಗಳು/ಸಿಬ್ಬಂದಿಗಳು ಕರ್ತವ್ಯ ಪ್ರಜ್ಞೆ ಮೆರೆದಲ್ಲಿ ಸಮಾಜದಲ್ಲಿ ಸಮಾನತೆಯನ್ನು ತಂದು ಪ್ರಗತಿ ಸಾಧಿಸಲು ಸಾಧ್ಯ ಎಂದು ತಿಳಿಸಿದರು. ಗಣೇಶ ಕೆ.ಎಲ್. ಮಾತನಾಡಿ ಯೋಜನೆ ಅನುಷ್ಠಾನದಲ್ಲಿ ತಮ್ಮ ಇಲಾಖೆಯಿಂದ ಸಂಪೂರ್ಣ ಸಹಕಾರವಿದ್ದು, ಯೋಜನೆಯನ್ನು ಜಾರಿಗೆ ತರಲು ಸದಾ ಭದ್ದರಿದ್ದೇವೆ ಎಂದು ತಿಳಿಸಿದರು. ಶ್ರೀಧರ ಮುಂದಲಮನಿ ಮಾತನಾಡಿ ಅಧಿಕಾರಿಗಳು ಕರ್ತವ್ಯದ ಜೊತೆಗೆ ಸಾರ್ವಜನಿಕರು ತಮ್ಮ ಗೊತ್ತಿರುವ ಯೋಜನೆಗಳ ಮಾಹಿತಿಯನ್ನು ಇತರರೊಂದಿಗೆ ವಿನಿಮಯಮಾಡಿಕೊಂಡಲ್ಲಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅನುಕೂಲವಾಗುವುದೆಂದು ತಿಳಿಸಿದರು. ಜಗದೀಶ ಎನ್. ಗೌಡ ಮಾತನಾಡಿ ಇಲಾಖೆಗಳ ಯೋಜನೆಗಳ ಪ್ರಯೋಜನ ಪಡೆದುಕೊಂಡು ಆರ್ಥಿಕ ಮಟ್ಟ ಸುಧಾರಿಕೊಳ್ಳಲು ಕರೆನೀಡಿದರು.
ಜಿಲ್ಲಾ ವ್ಯವಸ್ಥಾಪಕರು ಡಾ|| ಬಾಬು ಜಗಜೀವನರಾಮ್ ಅಭಿವೃದ್ಧಿ ನಿಗಮ (ನಿ) ಉತ್ತರ ಕನ್ನಡ, ಕಾರವಾರ, ಜಿಲ್ಲಾ ವ್ಯವಸ್ಥಾಪಕರು ಡಾ|| ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ (ನಿ) ಉತ್ತರ ಕನ್ನಡ, ಕಾರವಾರ, ಸಹಾಯಕ ನಿರ್ದೇಶಕರು ಕೈಗಾರಿಕಾ ಇಲಾಖೆ ಶಿರಸಿ ರವರುಗಳು ತಮ್ಮ ಇಲಾಖೆಗಳ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಇನ್ನುಳಿದಂತೆ ಬಾರ್ ಅಸೋಸಿಯೆಶನ್ ಅಧ್ಯಕ್ಷರಾದ ಸಿ.ಎಫ್. ಈರೇಶ್, ಇಲಾಖೆಯಿಂದ ಕಾನೂನು ತರಬೇತಿ ಪ್ರೋತ್ಸಾಹಧನ ಪಡೆದ ಸಚಿನ ಎಂ. ಚನ್ನಯ್ಯ ಹಾಗೂ ಕಾನೂನು ಮಹವಿದ್ಯಾಲಯ ಇಬ್ಬರು ವಿದ್ಯಾರ್ಥಿನಿಯರಾದ ಕು|| ಬಿಂಬಾ ಹೆಗಡೆ ಹಾಗೂ ಕು|| ವರ್ಷಾ ಬಾಂದೇಕರ ಇವರುಗಳು ದೌರ್ಜನ್ಯ ಪ್ರತಿಬಂಧಕ ನಿಯಮ, ಪೋಕ್ಸೋ ಕಾಯಿದೆಗಳ ಕುರಿತು ಅರಿವು ಮೂಡಿಸಿದರು.
ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿಗಳಾದ ಶ್ರೀಮತಿ ರಾಜೇಶ್ವರಿ ಮಡಿವಾಳ ರವರು ಕಾರ್ಯಕ್ರಮವನ್ನು ನಿರೂಪಿಸಿದರು, ಶ್ರೀಮತಿ ನೇತ್ರಾವತಿ ಕೆ. ಸ್ವಾಗತಿಸಿದರು, ಶ್ರೀಮತಿ ಮಾನಸಾ ಜಿ. ರಾಗಿ ವಂದಿಸಿದರು.