ಹೊನ್ನಾವರ: ತಾಲೂಕಿನ ಖರ್ವಾ ಗ್ರಾಮ ಪಂಚಾಯತ ಬಿಲ್ ಕಲೆಕ್ಟರ್ ನಾರಾಯಣ ಅಮ್ಕೂಸ ಗೌಡ ಮೇಲೆ ಹಲ್ಲೆ ನಡೆಸಿದ ಆರೋಪಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲೂಕಿನ ಗ್ರಾ.ಪಂ. ನೌಕರರು ಅನಿರ್ದಿಷ್ಟಾವದಿ ಹೋರಾಟ ಕುಳಿತು, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ನೀಡಿ ಆಗ್ರಹಿಸಿದ್ದಾರೆ.
ಖರ್ವಾ ಗ್ರಾ.ಪಂ.ದಲ್ಲಿ ಕಳೆದ ೨೭ ವರ್ಷಗಳಿಂದ ನಾರಾಯಣ ಅಮ್ಕೂಸ ಗೌಡ ಬಿಲ್ ಕಲೆಕ್ಟರ್ ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಫೆ.೭ರಂದು ಕಚೇರಿ ಕೆಲಸ ನಿರ್ವಹಿಸುತ್ತಿರುವ ಸಮಯದಲ್ಲಿ ತನುಜಕುಮಾರ ಗಣಪತಿ ನಾಯ್ಕ ಎಂಬವರು ಅವಾಚ್ಯ ಶಬ್ದಗಳಿಂದ ನಿಂದಿಸಿ ದೈಹಿಕವಾಗಿ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ನಾರಾಯಣ ಅಮ್ಕೂಸ ಗೌಡ ಇವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ಈ ಬಗ್ಗೆ ಸಂಘಟನೆಯ ವತಿಯಿಂದ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ಹಾಗೂ ಪೊಲೀಸ್ ಠಾಣೆಗೆ ಕ್ರಮ ಕೈಗೊಳ್ಳುವಂತೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಗ್ರಾ.ಪಂ. ಸಿಬ್ಬಂದಿಗಳು ಕನಿಷ್ಠ ವೇತನದಲ್ಲಿ ಗರಿಷ್ಠ ಸೇವೆಯಲ್ಲಿ ಕೆಲಸ ನಿರ್ವಹಿಸುತ್ತೇವೆ. ಸರಕಾರದ ಪಿಂಚಣಿ, ವಿಮಾ ಸೌಲಭ್ಯವಿಲ್ಲದೇ ಗ್ರಾಮ ಮಟ್ಟದಲ್ಲಿ ಒಬ್ಬರೇ ಕೆಲಸ ನಿರ್ವಹಿಸಬೇಕಾಗಿದೆ. ನಿರ್ಜನ ಪ್ರದೇಶಗಳಲ್ಲಿ ತೆರಿಗೆ ಸಂಗ್ರಹಣೆಗಾಗಿ ಒಬ್ಬರೇ ಸಂಚರಿಸಬೇಕಾಗುವುದು. ಒಬ್ಬರೇ ಸಂಚರಿಸುವ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕೆಲಸ ನಿರ್ವಹಿಸಬೇಕಾದ ಅನಿರ್ವಾಯತೆ ಇದೆ. ಹೀಗಿರುವಾಗ ಕಛೇರಿಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ದೈಹಿಕವಾಗಿ ಹಲ್ಲೆ ಮಾಡಿದ್ದು ಖಂಡಿಸುವ ಜೊತೆ ಕಾನೂನು ಕ್ರಮ ಕೈಗೊಳ್ಳುವರೆಗೂ ಪ್ರತಿಭಟನೆ ಮುಂದುವರೆಸುದಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮನವಿ ಸ್ವಿಕರಿಸಿದ ತಾಲೂಕ ಪಂಚಾಯತ ವ್ಯವಸ್ಥಾಪಕರಾದ ರಾಮ ಭಟ್ ಮಾತನಾಡಿ ಈ ಹಲ್ಲೆ ಕೇವಲ ಒಂದು ವ್ಯಕ್ತಿಗೆ ಮಾತ್ರ ಸೀಮಿತವಾಗಿಲ್ಲ. ನಮ್ಮ ಇಲಾಖೆಯ ಮೇಲೆ ನಡೆದ ವ್ಯವಸ್ಥಿತ ಹಲ್ಲೆಯಾಗಿದ್ದು, ಇದರ ಬಗ್ಗೆ ಪೋಲಿಸ್ ಇಲಾಖೆಗೆ ದೂರನ್ನು ನೀಡಲಾಗಿದ್ದು, ಆರೋಪಿಗೆ ಶಿಕ್ಷೆ ಆಗಬೇಕು ಮತ್ತು ತಾಲೂಕ ಪಂಚಾಯತ ತಮ್ಮ ಪರವಾಗಿದೆ ಎಂದರು.
ನರೇಗಾ ಯೋಜನೆಯ ಸಹಾಯಕ ನಿರ್ದೆಶಕ ಕಿರಣಕುಮಾರ್ ಮಾತನಾಡಿ ಇಂತಹ ಘಟನೆಯು ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಸಮಸ್ಯೆ ಉಂಟಾಗುದರಿಂದ ಇಲಾಖೆಯು ಗಂಭೀರವಾಗಿ ಪರಿಗಣಿಸಿದೆ. ಪೊಲೀಸ್ ಇಲಾಖೆಯು ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಪಿ.ಡಿ.ಓ ಸಂಘದ ಕಾರ್ಯದರ್ಶಿ ಉದಯಕುಮಾರ ಆರೋಪಿಯನ್ನು ಬಂಧಿಸಿ, ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ವಿವಿಧ ಸಂಘಟನೆಯ ಪ್ರಮುಖರು ಪ್ರತಿಭಟನೆಯ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು. ಮುಂಜಾನೆಯಿಂದ ಸಾಯಂಕಾಲದವರೆಗೂ ಪಂಚಾಯತಿ ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.