ಹೊನ್ನಾವರ : ಶಿಶು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆ ಮಾಡಿದ ಶಿಶು ಸಂಗಮೇಶ ದತ್ತಿ ಪ್ರಶಸ್ತಿಯು ಶಿಕ್ಷಕ ಪಿ.ಆರ್.ನಾಯ್ಕರವರ ಮಕ್ಕಳ ಕೃತಿ ಪಾಟಿಚೀಲ ಕವನ ಸಂಕಲನಕ್ಕೆ ಸಂದಿವೆ.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ 2023 ನೇ ಸಾಲಿನ ದತ್ತಿ ಪ್ರಶಸ್ತಿಗಾಗಿ ಕೃತಿಗಳನ್ನು ಆಹ್ವಾನಿಸಲಾಗಿತ್ತು. ರಾಜ್ಯ, ದೇಶ ಮತ್ತು ವಿದೇಶಗಳಿಂದಲೂ ನಾಲ್ಕು ಸಾವಿರ ಕೃತಿಗಳು ಬಂದಿದ್ದು ಅವುಗಳಲ್ಲಿ 12 ಜನ ಪರಿಣಿತರ ಸಮಿತಿಯು ದತ್ತಿ ಪ್ರಶಸ್ತಿಯನ್ನು ಆಯ್ಕೆ ಮಾಡಿದೆ.
ಕಳೆದ ಮೂರು ದಶಕಗಳಕಾಲ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ, ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ, ಯುವಜನ ಸೇವಾ ಕ್ರೀಡಾಧಿಕಾರಿಯಾಗಿ, ಸಾಕ್ಷರತಾ ಸಮನ್ವಾಧಿಕಾರಿಯಾಗಿ ವಿಶಿಷ್ಟ ಸೇವೆ ಸಲ್ಲಿಸಿರುತ್ತಾರೆ. ಸಾಹಿತ್ಯದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ ಪಿ.ಆರ್.ನಾಯ್ಕರವರು ಭಟ್ಕಳ ತಾಲೂಕಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುತ್ತಾರೆ.
ತಿಮ್ಮು, ಗುಲಗುಂಜಿ, ತಣ್ಣೀರು, ಡಾಕ್ಟರ್ ಮಾಮ, ನಮ್ಮವರು ನಮ್ಮ ಜನಾಂಗ, ಅಕ್ಷರ ಸಂಗಾತಿ, ದೇವಗಿರಿ, ಪಾಟಿ ಚೀಲ, ಪ್ರತಿಭಾ ಸಂಪನ್ನ, ಭಾವಾಭಿನಂದನೆ ಮುಂತಾದ 25 ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುತ್ತಾರೆ. ಕೋರೊನಾ ಸಂದರ್ಭದಲ್ಲಿ ಮಕ್ಕಳ ಕಲಿಕೆಗೆ ವಿಶೇಷ ಆಸಕ್ತಿ ವಹಿಸಿ ಕಲಿಕೆಗೆ ಉತ್ತೇಜಿಸಿರುವುದರಿಂದ ಮಕ್ಕಳ ಹಕ್ಕು ಆಯೋಗದಿಂದ ಪ್ರಸಂಶನ ಪತ್ರ ನೀಡಿ ಅಭಿನಂದಿಸಿರುತ್ತಾರೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಕಾರವಾರ, ಜೋಯಿಡಾ, ಸಿದ್ದಾಪುರ ತಾಲೂಕಿನ ಗ್ರಾಮ ಚರಿತ್ರಾ ಕೋಶದ ಕ್ಷೇತ್ರ ತಜ್ಞರಾಗಿ ನೇಮಕ ಮಾಡಿ ಪುಸ್ತಕ ಪ್ರಕಟಿಸಿರುತ್ತಾರೆ. ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿಯಾಗಿ, ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ಸಾಹಿತಿ ಜಮೀರುಲ್ಲಾ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷರಾಗಿ, ಹಳೆಯ ಪೈಕ ನಾಮಧಾರಿ ಜನಪದ ಸಾಹಿತ್ಯ ಪ್ರಕಟನಾ ಸಮಿತಿಯ ಸಂಪಾದಕರಾಗಿ, ಸಂಘಟಕರಾಗಿ ಸೇವೆ ಸಲ್ಲಿಸಿ ಅಪಾರ ಅನುಭವ ಪಡೆದಿರುತ್ತಾರೆ. ರಾಜ್ಯಮಟ್ಟದ ಗುರುಶ್ರೀ, ವಿಜ್ಞಾನ ಮಿತ್ರ ಪ್ರಶಸ್ತಿ, ಉತ್ತಮ ನಾಟಕ ನಿರ್ದೇಶಕ ಪ್ರಶಸ್ತಿ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪಿ.ಆರ್.ನಾಯ್ಕರ ಮಕ್ಕಳ ಕವನ ಸಂಕಲನಕ್ಕೆ ದತ್ತಿ ಪ್ರಶಸ್ತಿ ಬಂದಿರುವುದು ಶಿಕ್ಷಕರ ಸಮುದಾಯಕ್ಕೆ ಸಂದ ಗೌರವವಾಗಿದೆ.