ಯಲ್ಲಾಪುರ : ವಿಶ್ವವೇ ವೈಜ್ಞಾನಿಕ ಅಭಿವೃದ್ಧಿಯತ್ತ ಸಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ತಾಲೂಕಾ ಕೇಂದ್ರದಿಂದ ಅತಿ ದೂರದಲ್ಲಿರುವ ಶಾಲೆಯೊಂದು ಪಾಲಕರ ನೆರವು ಮತ್ತು ಶಿಕ್ಷಕರ ಸೀಮಿತ ವ್ಯಾಪ್ತಿಯ ಪರಿಶ್ರಮದಿಂದಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಿದೆ ಎಂಬುದಕ್ಕೆ ದೊಡ್ಡಬೇಣದ ಶಾಲೆ ನಿದರ್ಶನವಾಗಿದೆ ಎಂದು ಬಿಇಒ ಕ್ಷೇತ್ರಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ ಹೇಳಿದರು.
ಅವರು ಫೆ.4ರಂದು ತಾಲೂಕಿನ ಕುಂದರಗಿ ಗ್ರಾ.ಪಂ ವ್ಯಾಪ್ತಿಯ ದೊಡ್ಡಬೇಣದ ಸ.ಕಿ.ಪ್ರಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ‘ಕಲಿಕಾ ಹಬ್ಬ’ ಮತ್ತು ನೂತನವಾಗಿ ಆರಂಭಿಸಿದ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಇಲಾಖೆ ಶೈಕ್ಷಣಿಕ ಅಭಿವೃದ್ಧಿಗಾಗಿ ಅನುಷ್ಠಾನಗೊಳಿಸಿರುವ ಅಮೂಲಾಗ್ರ ಬದಲಾವಣೆಯ ಸನ್ನಿವೇಶದಲ್ಲಿ ಈ ಶಾಲೆಯ ಕೊಡುಗೆಯೂ ಗಮನಾರ್ಹವಾಗಿದ್ದು ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಸಾಮಾನ್ಯ ಜ್ಞಾನ ಮತ್ತು ನೈತಿಕತೆಗಳನ್ನು ವರ್ಧಿಸಿಕೊಳ್ಳುವಂತಾಗಬೆಕು ಎಂದರು.
ಅತಿಥಿಗಳಾಗಿದ್ದ ಸಿಆರ್ಪಿ ವಿಷ್ಣು ಭಟ್ಟ ಮಾತನಾಡಿ ಮಕ್ಕಳಿಗೆ ಜೀವನ ಕೌಶಲ ಮತ್ತು ಶಿಸ್ತನ್ನು ಕಲಿಸುತ್ತಿರುವ ಈ ಶಾಲೆಗೆ ಸ್ಥಳೀಯ ಗ್ರಾಮ ಅರಣ್ಯ ಸಮಿತಿಯವರು ನೆರವು ನೀಡುತ್ತಿರುವುದು ಅಪರೂಪದ ಸಂಗತಿಯಾಗಿದೆ ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದ ಕಾರ್ಯಕ್ರಮದಲ್ಲಿ ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜುನಾಥ ನಾಯ್ಕ, ರಾಮಾ ಪೂಜಾರಿ, ದತ್ತಾತ್ರೇಯ ಹೆಗಡೆ, ಕೃಷ್ಣ ಹೆಗಡೆ ಮತ್ತು ಬಿಸಿಯೂಟದ ನಿರ್ವಾಹಕಿ ಲಲಿತಾ ಭಟ್ಟರನ್ನು ಸನ್ಮಾನಿಸಲಾಯಿತು.
ಸನ್ಮಾನಿತರಾದ ಮಂಜುನಾಥ ನಾಯ್ಕ, ದತ್ತಾತ್ರೇಯ ಹೆಗಡೆ, ಅಧ್ಯಕ್ಷತೆ ವಹಿಸಿದ್ದ ಎಸ್ಡಿಎಂಸಿ ಅಧ್ಯಕ್ಷ ಕೃಷ್ಣ ಪೂಜಾರಿ, ಗ್ರಾ.ಪಂ ಸದಸ್ಯೆ ನಿರ್ಮಲಾ ನಾಯ್ಕ, ಮತ್ತು ವಿಎಫ್ಸಿ ಮಂಜುನಾಥ ಶಾಸ್ತ್ರಿ ಮಾತನಾಡಿದರು.
ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಮುಖ್ಯಾಧ್ಯಾಪಕಿ ನಮಿತಾ ಭಂಡಾರಿ ಸ್ವಾಗತಿಸಿ ನಿರ್ವಹಿಸಿದರು. ಸಹಶಿಕ್ಷಕ ರಾಘವೇಂದ್ರ ನಾಯ್ಕ ವಂದಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ, ಅಭ್ಯಾಗತರು, ವಿದ್ಯಾರ್ಥಿಗಳು ನಿರ್ಮಿಸಿದಿ ‘ಕೈ ತೋಟ’ ವನ್ನು ವೀಕ್ಷಿಸಿ ಶ್ಲಾಘಿಸಿದರು.