ಸಿದ್ದಾಪುರ: ಇಂದಿನ ಯುವಕರು ಮೊಬೈಲ್ ಗೇಮ್ಸ್, ಚಾಟಿಂಗ್, ರೀಲ್ಸ್ ಗೀಳಿಗೆ ಬಲಿಯಾಗದೆ ಅಧ್ಯಯನಶೀಲರಾಗುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದು ಎಂದು ಕಸಾಪ ತಾಲೂಕು ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ ಕರೆ ನೀಡಿದರು.
ಅವರು ತಾಲೂಕಿನ ಬಿಳಗಿಯ ಶ್ರೀ ಚೌಡೇಶ್ವರಿ ಜ್ಞಾನ ಸಾಗರ ಪದವಿ ಪೂರ್ವ ಕಾಲೇಜಿನ ಕ್ರೀಡಾ, ಸಾಂಸ್ಕೃತಿಕ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಇಂದು ಮೊಬೈಲ್ ಸರ್ವಾಂತರ್ಯಾಮಿಯಾಗಿದ್ದು ಬಿಡಲಾರದ ಸ್ಥಿತಿ ತಲುಪಿದೆ. ಆದರೆ ಅದರಲ್ಲೂ ಬಹಳಷ್ಟು ಉಪಯುಕ್ತ ಜ್ಞಾನ ಕಣಜವೇ ಅಡಗಿದೆ ಅಂತಹ ಜ್ಞಾನ ಸ್ವೀಕರಿಸಿ ಉನ್ನತ ಜೀವನದ ದಾರಿ ಕಂಡುಕೊಳ್ಳಬಹುದು ಎಂದು ಆಶಿಸಿದರು.
ಕೋಲಸಿರ್ಸಿ ಪದವಿ ಕಾಲೇಜು ಹಿರಿಯ ಉಪನ್ಯಾಸಕ ಹಾಗೂ ತಾಲೂಕು ಪ.ಪೂ ಉಪನ್ಯಾಸಕರ ಸಂಘದ ಅಧ್ಯಕ್ಷ ಮಂಜಪ್ಪ ಮಾತನಾಡಿ ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾಗಿ ಉನ್ನತ ಬದುಕು ಕಟ್ಟಿಕೊಳ್ಳಬೇಕು ಜೊತೆಗೆ ವಾಹನ ಸಂಚಾರ ನಿಯಮವನ್ನು ಪಾಲಿಸಿ ಕುಟುಂಬಕ್ಕೆ ಆಧಾರವಾಗಬೇಕೆಂದು ಕರೆನೀಡಿದರು.
ಕಾಲೇಜು ಪ್ರಾಂಶುಪಾಲರಾದ ಲೋಕೇಶ್ ಗೌಡ್ರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾಲೇಜಿನ ಉಪನ್ಯಾಸಕರ ನಿರಂತರ ಪರಿಶ್ರಮ, ಸಹಕಾರ ಸ್ಮರಿಸಿ ಪ್ರತಿಭಾ ಪುರಸ್ಕಾರ ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಉಪನ್ಯಾಸಕ ವಿರೂಪಾಕ್ಷಪ್ಪ ಮೇಟಿ ಸ್ವಾಗತಿಸಿ ಕ್ರೀಢಾ ಮತ್ತು ಸಾಂಸ್ಕೃತಿಕ ಪುರಸ್ಕಾರ ಕಾರ್ಯಕ್ರಮ ನಿರ್ವಹಿಸಿದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಉಪನ್ಯಾಸಕ ಶಶಿಧರ ಶಾಸ್ತ್ರಿ ನಿರ್ವಹಿಸಿದರು. ವಿದ್ಯಾರ್ಥಿಗಳಾದ ಕು. ಶೋಭಿತಾ ಸಂಗಡಿಗರು ಪ್ರಾರ್ಥನೆ ಹಾಡಿದರು. ಉಪನ್ಯಾಸಕ ಮಾಬಲೇಶ್ವರ ವಂದನಾರ್ಪಣೆ ಮಾಡಿದರು. ಉಪನ್ಯಾಸಕರಾದ ಮಹೇಶ್ ಕ್ಯಾದಗಿ, ಶ್ರೀಕಾಂತ ನಾಯ್ಕ, ಜಗನ್ನಾಥ ಜಿ. ಹೆಚ್. ಸಂಗೀತಾ ಈಶ್ವರ್ ಉಪಸ್ಥಿತರಿದ್ದರು.