ಶಿರಸಿ: ಶ್ರೀ ಗಜಾನನ ಸೆಕೆಂಡರಿ ಸ್ಕೂಲ್ ಹೆಗಡೆಕಟ್ಟಾದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಪರಿಶೀಲನೆಗಾಗಿ ತಾಯಂದಿರ ಸಭೆಯು ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳು, ಮಹಾದಾನಿಗಳೂ ಆದ ಎಚ್.ಡಿ.ಎಫ್.ಸಿ. ಬ್ಯಾಂಕಿನ ನಿವೃತ್ತ ರಾಷ್ಟ್ರೀಯ ಅಧ್ಯಕ್ಷರಾದ ಮಧುಸೂದನ ಹೆಗಡೆ ಮರಿಯಜ್ಜನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತಮ್ಮ ಜೀವನದ ಅನುಭವಗಳನ್ನು ಹಂಚಿಕೊಳ್ಳುತ್ತಾ ವಿದ್ಯಾರ್ಥಿಗಳು ಸಾಧನೆಯಲ್ಲಿ ತೊಡಗಿದಾಗ ಒಂದೇ ಸಲಕ್ಕೆ ಯಶಸ್ಸು ಸಿಗದಿದ್ದರೂ ಪರ್ಯಾಯ ಮಾರ್ಗವನ್ನು ಅನುಸರಿಸಿ ಯಶಸ್ಸನ್ನು ಪಡೆಯಬೇಕು. ತಾವು ಗಳಿಸಿದ್ದರಲ್ಲಿ ಒಂದು ಭಾಗವನ್ನು ಸಮಾಜಕ್ಕೆ ಹಿಂದಿರುಗಿಸಬೇಕು. ತಮ್ಮ ತಂದೆ ತಾಯಿಯರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಪ್ರೌಢಶಾಲೆಯ ಹೆಣ್ಣು ಮಕ್ಕಳಿಗೆ ಅನುಕೂಲವಾಗುವಂತೆ ಸುಸಜ್ಜಿತವಾದ ಶೌಚಾಲಯವನ್ನು ನಿರ್ಮಿಸಲು ಮೂರು ಲಕ್ಷ ರೂಪಾಯಿಗಳನ್ನು ಈಗಾಗಲೇ ನೀಡಿದ್ದ ಅವರು ಶೌಚಾಲಯ ಪೂರ್ಣಗೊಳ್ಳಲು ಅಗತ್ಯವಾದ ಎಲ್ಲ ಮೊತ್ತವನ್ನು ತಾನೇ ಭರಿಸುವುದಾಗಿ ಭರವಸೆ ನೀಡಿದರು. ಶಾಲೆಯ ಸುವರ್ಣ ಮಹೋತ್ಸವದ ಹೊತ್ತಿಗೆ 5 ಲಕ್ಷ ರೂಪಾಯಿಗಳ ದೇಣಿಗೆ ನೀಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಬಹುದು.
ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಳ್ಳಿ: ತಾಯಂದಿರ ಅಭಿಮತ
ತಾಯಂದಿರ ಪರವಾಗಿ ಗೃಹೋದ್ಯಮ ನಡೆಸುತ್ತಿರುವ ವಸುಂಧರಾ ಹೆಗಡೆ ಕಾನಳ್ಳಿ ಅವರು ಮಾತನಾಡಿ ಆ ಸಂದರ್ಭಕ್ಕೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಬೆಳೆಯಬೇಕು. ಕೊರೋನಾ ಸಾಂಕ್ರಾಮಿಕ ರೋಗ ಉಲ್ಬಣಗೊಂಡಾಗ ತೆರೆದ ಆನ್ಲೈನ್ ಮಾರುಕಟ್ಟೆ ಅವಕಾಶವನ್ನು ತಾನು ಬಳಸಿಕೊಂಡು ಗ್ರಾಮೀಣ ಭಾಗದಲ್ಲಿದ್ದುಕೊಂಡೇ ವ್ಯವಹಾರದಲ್ಲಿ ಬೆಳೆದ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡು, ಎಲ್ಲ ವಿದ್ಯಾರ್ಥಿಗಳೂ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು. ನಂತರ ಮಾತನಾಡಿದ ಗ್ರಾಮ ಪಂಚಾಯತ ಪಿ.ಡಿ.ಓ. ಆಗಿ ಕಾರ್ಯ ನಿರ್ವಹಿಸುತ್ತಿರುವ ಯೋಗಿತಾ ಹೆಗಡೆ ಅವರು ಶಾಲೆಯಿಂದ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ, ಸಂಸ್ಕಾರ ಲಭಿಸುತ್ತಿದೆ. ಸಂಸ್ಕಾರವಂತರಾಗಿ ಬಾಳಬೇಕು ಎಂದರು. ನಿರಂತರವಾಗಿ ನಡೆಸಲ್ಪಡುವ ಕಿರುಪರೀಕ್ಷೆಗಳು ವಿದ್ಯಾರ್ಥಿಗಳ ಓದಿಗೆ ಉತ್ತಮ ರೀತಿಯಲ್ಲಿ ಸಹಕಾರಿ, ಅದನ್ನು ಮುಂದುವರಿಸಬೇಕು ಎಂದರು. ಸಭೆಯಲ್ಲಿ ಅಧ್ಯಕ್ಷ ಎಂ. ಆರ್. ಹೆಗಡೆ. ಹೊನ್ನೆಕಟ್ಟಾ, ಕಾರ್ಯದರ್ಶಿ ಜಿ.ಎನ್.ಹೆಗಡೆ, ಸದಸ್ಯರಾದ ಎಂ.ವಿ.ಹೆಗಡೆ ಹಲಸಿನಕಟ್ಟಾ ಮತ್ತು ಮುಖ್ಯಾಧ್ಯಾಪಕ ಶೈಲೇಂದ್ರ ಎಂ. ಎಚ್. ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.