ಸಮಾಜಮುಖಿ ಕಾರ್ಯದೊಂದಿಗೆ ವಿವಾಹ ವಾರ್ಷಿಕೋತ್ಸವ ಆಚರಣೆ
ಭಟ್ಕಳ: ಇತ್ತೀಚಿನ ದಿನಗಳಲ್ಲಿ ತಮ್ಮ ಹುಟ್ಟಿದ ಹಬ್ಬವನ್ನಾಗಲಿ ಅಥವಾ ಮದುವೆ ವಾರ್ಷಿಕೋತ್ಸವವನ್ನು ಕೇಕ್ ಕತ್ತರಿಸುವ ಮೂಲಕ ವಿಜೃಂಭಣೆಯಿಂದ ಆಚರಿಸುತ್ತಾರೆ. ಆದರೆ ಇಲ್ಲೊಂದು ಜೋಡಿ ತಮ್ಮ ತಾವು ಬರೆದ “ನೀ ಬರೆಸಿದಂತೆ” ಕವನ ಸಂಕಲನ ಪುಸ್ತಕದಿಂದ ಮಾರಾಟ ಮಾಡಿದ ಹಣವನ್ನು ಇಬ್ಬರು ಕ್ಯಾನ್ಸರ್ ರೋಗಿಗಳಿಗೆ ನೀಡುವ ಮೂಲಕ ವಿವಾಹ ವಾರ್ಷಿಕೋತ್ಸವವನ್ನು ಆಚರಿಕೊಳ್ಳುವುದರ ಮೂಲಕ ನಮ್ಮ ಸಮಾಜಕ್ಕೊಂದು ಉತ್ತಮ ಸಂದೇಶ ಸಾರಿದ್ದಾರೆ.
ಕಳೆದ ವರ್ಷ ಫೆ. 4 ರಂದು ಭಟ್ಕಳ ತಾಲೂಕಿನ ಮುಗಳಿಕೋಣೆ ಶ್ರೀ ಗೋಪಾಲಕೃಷ್ಣ ಕಲ್ಯಾಣ ಮಂಟಪ” ಸಭಾಭವನದಲ್ಲಿ ಗಣಪತಿ ನಾಯ್ಕ ಮತ್ತು ವಿಮಲಾ ನಾಯ್ಕ ನವ ಜೋಡಿಗಳು ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಡುವುದರ ಮೂಲಕ ಅದೇ ದಿನ ಮದ್ದಾರಮನೆಯ ಯುವ ಸಾಹಿತಿ ಗಣಪತಿ ನಾಯ್ಕ ತಾನು ರಚಿಸಿದ “ನೀ ಬರೆಸಿದಂತೆ” ಕವನ ಸಂಕಲನವನ್ನು ಹಿರಿಯ ಸಾಹಿತಿ ಡಾ. ಸೆಯದ್ ಜಮೀರುಲ್ಲಾ ಷರೀಫ್ ಅವರ ಅಭಯಹಸ್ತದಿಂದ ಬಿಡುಗಡೆಗೊಳಿಸಿದ್ದರು.
ವೃತ್ತಿಯಲ್ಲಿ ಗಣಪತಿ ನಾಯ್ಕ ರೇಡಿಯಮ್ ಡಿಸೈನಿಂಗ್ ಮಾಡುತ್ತಿದ್ದು ತಮ್ಮ ಬಿಡುವಿನ ವೇಳೆ ಆಗಾಗ ಚುಟುಕು ಕವನ ಬರುತ್ತಿದ್ದು ಇವರ ಹವ್ಯಾಸವಾದ ಜೊತೆಯಲ್ಲಿ ಬಡವರಿಗೆ ನಿರ್ಗತಿಕರಿಗೆ ತಮ್ಮ ಸ್ನೇಹಿತರ ಜೊತೆಯಲ್ಲಿ ಸೇರಿಕೊಂಡು ಸಹಾಯ ಮಾಡುತ್ತಿದ್ದ ಇವರು ತಮ್ಮ ಮದುವೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ 500 ಪುಸ್ತಕವನ್ನು ಪ್ರಕಟಿಸಿದ್ದು ಈ ಪುಸ್ತಕವನ್ನು ಮಾರಾಟ ಮಾಡಿ ಬಂದಂತ ಹಣವನ್ನು ಕ್ಯಾನ್ಸರ್ ರೋಗಿಗಳಿಗೆ ನೀಡುವುದಾಗಿ ಅಂದು ತಿಳಿಸಿದ್ದರು. ಗಣಪತಿ ನಾಯ್ಕ ಅವರಿಗೆ ಧರ್ಮ ಪತ್ನಿ ಚಾರ್ಟೆಡ್ ಅಕೌಂಟೆಂಟ್ ಉದ್ಯೋಗಿಯಾಗಿರುವ ವಿಮಲಾ ನಾಯ್ಕ ಕೂಡ ತಮ್ಮ ಪತಿಗೆ ಸಾಥ್ ನೀಡಿದ್ದರು
ಅದರಂತೆ ಇಂದು ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಳ್ಳುತ್ತಿದ್ದು. ಅವರು ತಮ್ಮ ಮದುವೆ ದಿನ ನೀಡಿದ ಮಾತಿನಂತೆ ಪುಸ್ತಕದ ಮಾರಾಟದ 25 ಸಾವಿರ ಹಣವನ್ನು ಭಟ್ಕಳ ತಾಲೂಕಿನ ಇಬ್ಬರು ಬಡ ಕ್ಯಾನ್ಸರ್ ರೋಗಿಗಳಿಗೆ ನೀಡುವ ಮೂಲಕ ಈ ದಂಪತಿಗಳು ಸಮಾಜಕ್ಕೊಂದು ಉತ್ತಮ ಸಂದೇಶ ಸಾರಿದ್ದಾರೆ.
ಇಂದು ವಿಶ್ವ ಕ್ಯಾನ್ಸರ್ ದಿನವೂ ಕೂಡ ಆಗಿರುವುದರಿಂದ ದಂಪತಿಗಳು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಕ್ಯಾನ್ಸರ್ ರೋಗಿಗಳಾದ 6 ವರ್ಷದ ಬಾಲಕನಿಗೆ ಹಾಗೂ ಓರ್ವ ಮಹಿಳೆಗೆ ಹಣವನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಇದ್ದರು.