ಶಿರಸಿ: ರಾಜ್ಯದ 224 ಜನ ಶಾಸಕರಲ್ಲಿ ‘ಹೆಚ್ಚು ಸುಳ್ಳು ಹೇಳುವ ಶಾಸಕ ಪ್ರಶಸ್ತಿ’ ಇದ್ದರೆ ಅದನ್ನ ಶಿರಸಿಯ ಶಾಸಕರಾದ ಭೀಮಣ್ಣ ನಾಯ್ಕರವರಿಗೆ ಕೊಡಬೇಕು. ಇದನ್ನ ನಾನು ಹೇಳುತ್ತಿಲ್ಲ, ದಾಖಲೆಗಳೇ ಹೇಳುತ್ತಿವೆ ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಹೇಳಿದರು.
ಅವರು ಮಂಗಳವಾರ ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ಶಿರಸಿಯ ಪಂಡಿತ್ ಸಾರ್ವಜನಿಕ ಅಸ್ಪತ್ರೆ ವಿಷಯಕ್ಕೆ ಸಂಬಂಧಿಸಿ ಎಲ್ಲ ದಾಖಲಾತಿಗಳನ್ನು RTI ಮೂಲಕ ತೆಗೆದುಕೊಳ್ಳಲಾಗಿದೆ. MRI ಮತ್ತು CT ಸ್ಕ್ಯಾನ್ ಮಷಿನ್, ಟ್ರಾಮಾ ಸೆಂಟರ್, ಹಾರ್ಟ್ ಅಪರೇಷನ್ ಮಾಡುವ ಸಾಮಗ್ರಿಗಳನ್ನು ಒಳಗೊಂಡು, ವೈದ್ಯಕೀಯ ಉಪಕರಣಗಳನ್ನು ಯಾವ ರೀತಿ ಈ ಕಾಂಗ್ರೆಸ್ ಸರಕಾರ ಮತ್ತು ಶಾಸಕರು ಮಾಯ ಮಾಡಿದ್ದಾರೆ ಎನ್ನುವ ರೋಚಕ ಸತ್ಯ ನಿಮ್ಮ ಮುಂದೆ ಇಡುತ್ತಿದ್ದೇನೆ ಎಂದು ಅವರು ಹೇಳಿದರು.
ಪಂಡಿತ್ ಸಾರ್ವಜನಿಕ ಆಸ್ಪತ್ರೆಯನ್ನು ತಾಲೂಕು ಆಸ್ಪತ್ರೆ ಎಂದು ತೀರ್ಮಾನ ಮಾಡಿ 6 ಕೋಟಿ ಹಣಕ್ಕಿಂತ ಜಾಸ್ತಿ ಅನುದಾನ ಸಾಧ್ಯವಿಲ್ಲ ಎಂದು ಸರಕಾರ ಸಾರಾಸಗಟಾಗಿ ತಿರಸ್ಕಾರ ಮಾಡಿದ ಮೇಲೆ ಆಸ್ಪತ್ರೆಯ ರೂಪವನ್ನೇ ಕೆಡಿಸಲು ಪ್ರಯತ್ನಿಸಿದ್ದಾರೆ. ಅಸಲಿ ವಿಷ್ಯ ಏನೆಂದರೆ, ಹಿಂದಿನ ಎಲ್ಲ ಸೂಪರ್ ಸ್ಪೆಷಾಲಿಟಿ ಸಾಮಗ್ರಿ ತೆಗೆದು ಹಾಕಿ, ಕೇವಲ 6 ಕೋಟಿ ಒಳಗಡೆ ಪ್ರಸ್ತಾವನೆ ಕೊಡಿ ಎಂದು ಹಿಂದಿನ ವೈದ್ಯಾಧಿಕಾರಿಗಳ ಮೇಲೆ ನಿರಂತರ ಒತ್ತಡ ಹಾಕಿದ್ದರು. ಅವರು ಒಪ್ಪದೇ ಇರುವ ಕಾರಣ ಅವರು ಇಲ್ಲಿಂದ ತೊಲಗಲಿ ಎಂದು ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಶಾಸಕರ ಸೂಚನೆ ಮೇರೆಗೆ ಸಹಾಯಕಯವರಿಗೆ ಮನವಿ ಕೊಡುತ್ತಾರೆ. ಕೆಡಿಪಿ ಸಭೆಯಲ್ಲಿಯೂ ಸಹ ಅವರು ಹೊಸಪೇಟೆಗೆ ಹೋಗಲಿ ಎಂದು ಶಾಸಕರು ಆಗ್ರಹ ಮಾಡಿರುತ್ತಾರೆ. ಆಡಳಿತಾಧಿಕಾರಿ ಬದಲಾವಣೆ ಮಾಡುವುದು ಮಾತ್ರ ಇವರ ಪೂರ್ವನಿಯೋಜಿತ ಸಂಚಾಗಿರುತ್ತದೆ. ಯಾವಾಗ ಆಡಳಿತಾಧಿಕಾರಿ ಬದಲಾದರೋ, ಅವಾಗಿಂದ ಇವರ ವೈದ್ಯರ ಮೇಲಿನ ಆರೋಪ ಸಂಪೂರ್ಣ ನಿಂತಿರುತ್ತದೆ. ಆ ಮೂಲಕ ಆಸ್ಪತ್ರೆಯ ವೈದ್ಯಾಧಿಕಾರಿ ಬದಲಾವಣೆ ಇವರ ವಿಚಾರವಾಗಿತ್ತೇ ವಿನಃ ವೈದ್ಯರನ್ನಲ್ಲ ಎಂಬುದು ಸ್ಪಷ್ಟ. ಹಾಗಾದರೇ ವೈದ್ಯಾಧಿಕಾರಿ ಯಾಕೇ ಬದಲಾಗಬೇಕಿತ್ತು ಎಂಬುದನ್ನು ಕ್ಷೇತ್ರದ ಜನರಿಗೆ ಶಾಸಕರ ಈಗಿನ ನಡೆ ತೋರಿಸಿಕೊಟ್ಟಿದೆ. ಆಡಳಿತಾಧಿಕಾರಿ ಬದಲಾವಣೆ ನಂತರ 20.11.2024 ರಂದು ಡಾ. ನೇತ್ರಾವತಿ ಸಿರ್ಸಿಕರ್ ರವರು ಅಧಿಕಾರ ಸ್ವೀಕಾರ ಮಾಡುತ್ತಾರೆ. ಬಳಿಕ ದಿನಾಂಕ 26.11.2024 ರಂದು ರೂಪಾಯಿ 5 ಕೋಟಿ 20 ಲಕ್ಷದ ವೈದ್ಯಕೀಯ ಉಪಕರಣಗಳ ಪ್ರಸ್ತಾವನೆ ಕಳಿಸುತ್ತಿರಿ. ಇದೇನಾ ನಿಮ್ಮ ಆಡಳಿತ ವೈಖರಿ ? ಈ ರೀತಿ ವೈದ್ಯಕೀಯ ಉಪಕರಣಗಳ ಹಣ ಕಡಿತ ಮಾಡುವ ಸಲುವಾಗಿಯೇ ಹಳೆಯ ವೈದ್ಯಾಧಿಕಾರಿಯ ಮೇಲೆ ಸಂಚು ಮಾಡಿದ್ದಾರಾ ಎಂಬ ಅನುಮಾನ ಕ್ಷೇತ್ರದಲ್ಲಿ ಮೂಡಿದೆ ಎಂದು ಅವರು ಆರೋಪಿಸಿದರು.
ಶಾಸಕರ ದಿವ್ಯ ಮೌನಕ್ಕೆ ಆಕ್ರೋಶ : ಟೆಂಡರ್ ಕರೆಯಲು ಮೀನಾಮೇಷ :
ಆಸ್ಪತ್ರೆ ವಿಚಾರಕ್ಕೆ ಸಂಬಂಧಿಸಿ, ನಾವು ಎರಡು ಬಾರಿ ಪತ್ರಿಕಾಗೋಷ್ಠಿ ಮಾಡಿದ್ದೇವೆ, ಉತ್ತರ ಇಲ್ಲ, ನೀವು ಪತ್ರಿಕೆಗೆ ಹೇಳಿದ್ದಿರಿ ರೂ.18.5 ಕೋಟಿ ಉಪಕರಣಕ್ಕೆ ಬಂದಿದೆ ಎಂದಿದ್ದೀರಿ. ಎಲ್ಲಿ ಬಂದಿದೆ ಬರಿ ಸುಳ್ಳು. ಇನ್ನೂ ಸಾಮಗ್ರಿಗಾಗಿ ಟೆಂಡರ್ ಕರೆಯಲಿಲ್ಲ ಎನ್ನುವುದೂ ಕೂಡ ಮಾಹಿತಿ ಹಕ್ಕು ಇಲಾಖೆಯಡಿ ದಾಖಲೆ ಸಿಕ್ಕಿದೆ. 80% ಕೆಲಸ ಮುಗಿದು ಐದು ತಿಂಗಳಾದರೂ ಸಹ ಇದುವರೆಗೆ ಟೆಂಡರ್ ಕರೆಯದಿರುವುದಕ್ಕೆ ಕಾರಣ ತಿಳಿಸಬೇಕು. ಯಾವುದೇ ವೈದ್ಯರ ನೇಮಕಾತಿ ಆಗಿಲ್ಲ. ಈ ಹಿಂದೆ ಉತ್ತರ ಕನ್ನಡಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಧ್ವನಿ ಎತ್ತುತ್ತಿದ್ದ ಕಾಂಗ್ರೆಸ್ ಸರಕಾರ, ಈಗ ಸರಕಾರದಲ್ಲಿ ಮಂಜೂರಾದ ಬಡವರ ಆಸ್ಪತ್ರೆಯನ್ನು ಕೆಡಿಸಲು ಪ್ರಯತ್ನಿಸುತ್ತಿರುವುದು ಕ್ಷೇತ್ರದ ಜನತೆಗೆ ಮಾಡುವ ಬಹುದೊಡ್ಡ ಅಪರಾಧ. ಬಡವರಿಗಾಗಿ ಉಚಿತವಾಗಿ ಸಿಗಬಹುದಾಗಿದ್ದ ಹಾರ್ಟ್ ಆಪರೇಷನ್, ಎಂಆರ್‌ಐ, ಸಿಟಿ ಸ್ಕ್ಯಾನಿಂಗ್ ಮತ್ತಿತರ ವೈದ್ಯಕೀಯ ಉಪಕರಣವನ್ನು ತಿಂದು ಹಾಕಿರುವುದು ಅಕ್ಷಮ್ಯ ಅಪರಾಧವಾಗಿದೆ. ನಾವು ಹದಿನೈದು ದಿವಸದ ಹಿಂದೆಯೇ ಉಪವಾಸ ಘೋಷಣೆ ಮಾಡಿದ್ದರೂ ಸಹ, ನಮಗೆ ಒಂದು ಮಾತನ್ನೂ ತಿಳಿಸದೇ ಬಹುದಿನಗಳ ವರೆಗೆ ವಿದೇಶ ಪ್ರಯಾಣ ಬೆಳೆಸಿದ್ದು, ಪ್ರಜಾಪ್ರಭುತ್ವದ ಅಣಕವಾಗಿದೆ. ಕನಿಷ್ಠ ಸೌಜನ್ಯಕ್ಕಾದರೂ ತಿಳಿಸಬಹುದಿತ್ತು. ಅಥವಾ ಸಂದೇಶವನ್ನಾದರೂ ನೀಡಬಹುದಿತ್ತು. ಇದಾವುದೂ ಮಾಡದೇ, ತಮಗೆ ಸಂಬಂಧವೇ ಇಲ್ಲದಂತೆ ವರ್ತಿಸಿದ್ದು ಪ್ರಜಾಪ್ರಭುತ್ವ ಮತ್ತು ಕ್ಷೇತ್ರದ ಬಡಜನತೆಗೆ ಮಾಡಿರುವ ದ್ರೋಹವಾಗಿದೆ. ನಮ್ಮ ಉಪವಾಸದ ಹೋರಾಟಕ್ಕೆ ಸಾವಿರಾರು ಜನ ಬೆಂಬಲ ನೀಡಿ, ನೂರಾರು ಜನ ನಮ್ಮ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಜನ ಎಲ್ಲದನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈ ರೀತಿ ದುರಾವರ್ತನೆ ಯಾವ ಶಾಸಕ, ಜನಪ್ರತಿನಿಧಿಗಳಿಗೆ ಶೋಭೆಯಲ್ಲ ಎಂದು ಅವರು ಹೇಳಿದರು.
ಈಗಲಾದರೂ ಮುಖ್ಯಮಂತ್ರಿ ಮತ್ತು ಆರೋಗ್ಯ ಮಂತ್ರಿ ಬಳಿಗೆ ಹೋಗಿ ದಾಖಲೆಗಳನ್ನು ನೀಡಿ, ಹಿಂದಿನ ಸರಕಾರದಲ್ಲಿ ಯಾವ ರೀತಿಯಲ್ಲಿ ಆಸ್ಪತ್ರೆ ಮಾಡಬೇಕಾಗಿತ್ತೋ ಅದೇ ರೀತಿ ಮಾಡುವ, ಎಲ್ಲ ಸಾಮಗ್ರಿ ತರುವ ಖಾತ್ರಿ ಪಡಿಸಿ ಆ ಮೂಲಕ ಕ್ಷೇತ್ರದ ಜನರ ವಿಶ್ವಾಸ ಶಾಸಕರು ಉಳಿಸಿಕೊಳ್ಳಲಿ. ಅವರ ಮೇಲಿನ ಗೌರವ ಮತ್ತು ವಿಶ್ವಾಸದ ಕಾರಣಕ್ಕೆ ಫೆ.20ರ ವರೆಗೆ ನಾವೆಲ್ಲರೂ ಕಾಯುತ್ತೇವೆ. ಆಗಲೂ ಸಹ ಅವರು ಇದೇ ಈ ರೀತಿಯ ಮೌನ ವಹಿಸಿದರೆ, ನಾವು ಜನರ ಬಳಿಗೆ ಹೋಗಿ, ಶಾಸಕರ ನಡೆಯನ್ನು, ಅವರ ಮೌನ ಅಭಿವೃದ್ಧಿ ವಿಚಾರವನ್ನು ತಿಳಿಸುವುದು ಅನಿವಾರ್ಯವಾಗಿರುತ್ತದೆ. ಈ ವಿಚಾರವಾಗಿ ದೊಡ್ಡ ಮಟ್ಟದ ಯಾವುದೇ ಹೋರಾಟಕ್ಕೂ ನಾವು ಸಿದ್ಧರಿರುತ್ತೇವೆ ಮತ್ತು ಫೆ.20 ರ ನಂತರ ನಮ್ಮ ಮುಂದಿನ ಹೋರಾಟದ ಕುರಿತು ತೀರ್ಮಾನವನ್ನು ತಿಳಿಸುತ್ತೇವೆ. ಬೀದಿ ಬೀದಿಯಲ್ಲಿ ಆಸ್ಪತ್ರೆ ಉಳಿಸಿ ಅಭಿಯಾನ ಪ್ರಾರಂಭಿಸುವುದು ಅನಿವಾರ್ಯವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಜಿಪಂ ಸದಸ್ಯ ಹಾಲಪ್ಪ ಜಕ್ಕಣ್ಣನವರ್ ಮಾತನಾಡಿ, ಆಸ್ಪತ್ರೆ ವಿಚಾರದಲ್ಲಿ ಅನಂತಮೂರ್ತಿ ಹೆಗಡೆ ಅವರು ಎಲ್ಲ ದಾಖಲೆ, ಪ್ರಸ್ತುತ ಪರಿಸ್ಥಿತಿಯನ್ನು ಜನರೆದುರು ಇಟ್ಟಿದ್ದಾರೆ. ಇನ್ನು ಮೇಲಾದರೂ ಆಸ್ಪತ್ರೆಯ ಮೂಲ ರೂಪುರೇಷೆಗಳು ಸರಿಯಾಗುವಂತೆ ಶಾಸಕ ಭೀಮಣ್ಣ ನಾಯ್ಕ ಕಾಳಜಿ ವಹಿಸುವಂತಾಗಲಿ ಎಂದರು.
ನಾಗರಾಜ ನಾಯ್ಕ ಮಾತನಾಡಿ, ಕ್ಷೇತ್ರದ ಜನತೆಯ ಆರೋಗ್ಯದ ದೃಷ್ಟಿಯಿಂದ ಕಾಗೇರಿಯವರು ಆಸ್ಪತ್ರೆಯನ್ನು ಮಂಜೂರಿ ಮಾಡಿಸಿದ್ದರು. ಮಧ್ಯಮವರ್ಗ ಮತ್ತು ಬಡವರಿಗೆ ಆರೋಗ್ಯ ಸೇವೆ ನೀಡುವ ಕಾಳಜಿ ಅವರದ್ದಾಗಿತ್ತು. ಭೀಮಣ್ಣನವರೂ ಈ ನಿಟ್ಟಿನಲ್ಲಿ ಕೆಲಸ ಮಾಡಲಿ. ಕೇವಲ ಅವರ ಹಿಂಬಾಲಕರ ಸೋಷಿಯಲ್ ಮಿಡಿಯಾ ಹವಾದಲ್ಲಿ ಇರಬಾರದು. ಶಾಸಕರ ಮಾದರಿ ಶಾಲೆಯ ಕಂಪೌಂಡ್ ಬಿದ್ದು ಆರು ತಿಂಗಳಕ್ಕೂ ಹೆಚ್ಚಾಗಿದೆ. ಸೋಷಿಯಲ್ ಮೀಡಿಯಾ ವೀರರ ಹಿಂದೆ ಹೋಗುವ ಬದಲು ಕೆಲಸದ ಹಿಂದೆ ಹೋಗುವುದು ಸೂಕ್ತ ಎಂದರು.
ಸುದ್ದಿಗೋಷ್ಟಿಯಲ್ಲಿ ಪ್ರಮುಖರಾದ ಶಿವಾನಂದ ದೇಶಳ್ಳಿ, ಪ್ರೇಮಕುಮಾರ್ ನಾಯ್ಕ, ರಂಗಪ್ಪ ದಾಸನಕೊಪ್ಪ ಇನ್ನಿತರರು ಇದ್ದರು.
ಶಾಸಕ ಎಂದರೆ ದೇವರಲ್ಲ. ಜನತೆ ಅವರನ್ನು ಜನನಾಯಕನಾಗಿ ಆಯ್ಕೆ ಮಾಡಿದೆ. ಜನರ ಕೆಲಸ ದೇವರ ಕೆಲಸವೆಂದು ಭಾವಿಸಿ, ನಮ್ಮ ಶಾಸಕರು ಕೆಲಸ ಮಾಡಬೇಕು. ಆಸ್ಪತ್ರೆ ಅಭಿವೃದ್ಧಿ ವಿಚಾರದಲ್ಲಿ ಶಾಸಕರ ಮೌನ ವಹಿಸಿದ್ದು ತಪ್ಪು. ಬಡವರ ಆಸ್ಪತ್ರೆಗೆ ಯಾರೂ ತೊಂದರೆ ಮಾಡಬಾರದು – ಅನಂತಮೂರ್ತಿ ಹೆಗಡೆ, ಸಾಮಾಜಿಕ ಹೋರಾಟಗಾರ
ಆಸ್ಪತ್ರೆ ಕುರಿತಾಗಿ ಶಾಸಕರು ಸಾರ್ವಜನಿಕರ ಸಭೆ ಕರೆಯಲಿ : ಆರೋಗ್ಯ ಇಲಾಖೆಯ ಇಂಜಿನಿಯರಿಂಗ್ ವಿಭಾಗದ ಮಾಹಿತಿಯಂತೆ ಜೂ.30, 2025 ಕ್ಕೆ ಆಸ್ಪತ್ರೆ ಕಾಮಗಾರಿ ಸಂಪೂರ್ಣವಾಗಿ ಮುಗಿಯಲಿದೆ. ಆ ನಿಟ್ಟಿನಲ್ಲಿ ಶಾಸಕರು ಆಸ್ಪತ್ರೆ ಬಗ್ಗೆ ಕಳಕಳಿಯಿದ್ದರೆ ಈ ಕೂಡಲೇ ಸಾರ್ವಜನಿಕ ಸಭೆ ಕರೆಯಲಿ. ಈ ವಿಚಾರದಲ್ಲಿ ತಮ್ಮೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧವಿದ್ದೇವೆ, ಬಡವರ ಆಸ್ಪತ್ರೆ ಹೋರಾಟಕ್ಕೆ ನಾವು ಯಾವತ್ತೂ ನಿಮ್ಮೊಂದಿಗೆ ಇರುತ್ತೇವೆ. ನೀವು ಕೈಜೋಡಿಸಬೇಕಷ್ಟೇ.
ಬಸ್ಟ್ಯಾಂಡ್, ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡಲಿ :
ಕಳೆದ ಆಗಸ್ಟ್‌ನಲ್ಲಿಯೇ ಶಿರಸಿ ಬಸ್ಟ್ಯಾಂಡ್ ಉದ್ಘಾಟನೆ ನಡೆಸಲಾಗುತ್ತದೆ ಎಂದಿದ್ದರು. ಇದರಿಂದಾಗುತ್ತಿರುವ ಜನರಿಗೆ ಸಮಸ್ಯೆಗಳ ಅರಿವು ಶಾಸಕರಿಗೆ ಇದೆಯೇ? ಅದರ ಬಗ್ಗೆ ಚಕಾರವಿಲ್ಲ. ಬಡವರ ಇಂದಿರಾ ಕ್ಯಾಂಟೀನ್ ಸಾರಾಯಿ ಕುಡುಕರ ಅಡ್ಡವಾಗಿದೆ. ಅದರ ಬಗ್ಗೆಯಂತೂ ಕಿಂಚಿತ್ತೂ ಕಾಳಜಿಯಿಲ್ಲ. ಹಿಂದಿನ ಬಿಜೆಪಿ ಸರಕಾರ ತಂದ ಯೋಜನೆಗಳನ್ನು ಉದ್ಘಾಟನೆ ಮಾಡುತ್ತಾ, ತಾನೇ ತಂದಿದ್ದು ಎಂದು ಹೇಳುವುದರ ಹೊರತಾಗಿ, ಶಾಸಕರಿಂದ ಯಾವುದೇ ಅಭಿವೃದ್ಧಿಯ ಕೆಲಸಗಳಾಗುತ್ತಿಲ್ಲ ಎಂಬುದು ಕಣ್ಣಿಗೆ ಕಾಣುವ ಸತ್ಯವಾಗಿದೆ.