Slide
Slide
Slide
previous arrow
next arrow

ಫೆ.1ಕ್ಕೆ ಮಾಗೋಡ ಆಲೆಮನೆ ಹಬ್ಬ: ಭರದಿ ಸಾಗಿದ ಸಿದ್ಧತಾ ಕಾರ್ಯ

300x250 AD
  • ಶ್ರೀಧರ ಅಣಲಗಾರ

ಯಲ್ಲಾಪುರ: ತಾಲೂಕಿನ ಮಾಗೋಡ ಕಾಲೋನಿಯಲ್ಲಿ 8 ನೇ ವರ್ಷದ ಆಲೆಮನೆ ಹಬ್ಬ ಫೆ.1 ರ ಸಂಜೆ ನಡೆಯಲಿದ್ದು, ಅದಕ್ಕಾಗಿ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಆಲೆಮನೆ ಹಬ್ಬ ಸಮಿತಿಯ ನೇತೃತ್ವದಲ್ಲಿ ಕಾರ್ಯಕರ್ತರು ಸಿದ್ಧತೆಯಲ್ಲಿ ತೊಡಗಿದ್ದಾರೆ. 

 ಫೆ.1ರಂದು ಸಂಜೆ 4 ರಿಂದ ರಾತ್ರಿ 10ರವರೆಗೆ ಆಲೆಮನೆ ಹಬ್ಬ  ನಡೆಯಲಿದೆ. ಸಮೀಪದ ಮಾರುತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಭವ್ಯ ಮೆರವಣಿಗೆ ನಡೆಯಲಿದ್ದು, ನಂತರ ಗೋಪೂಜೆ, ಸಭಾ ಪೂಜೆ, ಭಗವದ್ಗೀತಾ ಪಠಣ, ರಾಷ್ಟ್ರಗೀತೆಯೊಂದಿಗೆ ಆಲೆಮನೆ ಹಬ್ಬಕ್ಕೆ ಚಾಲನೆ ದೊರೆಯಲಿದೆ.

  ಈ ಬಾರಿ 10 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. 2 ಗಾಣಗಳ ಮೂಲಕ ಕಬ್ಬಿನಹಾಲು ಸಿದ್ಧಪಡಿಸಿ, 4 ಕೌಂಟರ್‌ಗಳಲ್ಲಿ ವಿತರಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಜತೆಗೆ ಹಳ್ಳಿಯ ಬಗೆ ಬಗೆಯ ತಿಂಡಿ-ತಿನಿಸುಗಳನ್ನೂ ಸಹ ನೀಡಲಾಗುತ್ತದೆ. ಕೌಂಟರ್ ಗಳಲ್ಲಿ ಕಬ್ಬಿನಹಾಲು, ತಿಂಡಿಗಳನ್ನು ಉಚಿತವಾಗಿ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. 

  ಕಬ್ಬಿನಹಾಲು ಸಿದ್ಧಪಡಿಸುವುದು, ಕೌಂಟರ್‌ಗಳ ಮೂಲಕ ವಿತರಿಸುವುದು, ತಿಂಡಿಗಳನ್ನು ತಯಾರಿಸುವುದು, ಪಾರ್ಕಿಂಗ್ ವ್ಯವಸ್ಥೆ ಹೀಗೆ ವಿವಿಧ ಕಾರ್ಯಗಳನ್ನು ಸಮರ್ಪಕವಾಗಿ ನಿಭಾಯಿಸುವುದಕ್ಕೆ  ಆಲೆಮನೆ  ಹಬ್ಬ  ಸಮಿತಿಯ ನೂರಾರು ಕಾರ್ಯಕರ್ತರು ಶ್ರಮಿಸಲಿದ್ದಾರೆ. ಕಬ್ಬಿನಹಾಲಿನಿಂದ ಸಿದ್ಧಪಡಿಸಿದ ಬೆಲ್ಲ, ತೊಡದೇವು ಮುಂತಾದ ಖಾದ್ಯಗಳ ಮಾರಾಟಕ್ಕೂ ವ್ಯವಸ್ಥೆ ಮಾಡಲಾಗುತ್ತಿದೆ. 

   ನರಸಿಂಹ ಭಟ್ಟ ಕುಂಕಿಮನೆ ನೇತೃತ್ವದಲ್ಲಿ ಕ್ಕೂ ಹೆಚ್ಚು ಕಾರ್ಯಕರ್ತರು ಕಳೆದ 3-4 ದಿವಸಗಳಿಂದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ.   ನಶಿಸುತ್ತಿರುವ ಆಲೆಮನೆ ಸಂಪ್ರದಾಯವನ್ನು ಉಳಿಸುವ ಪ್ರಯತ್ನವಾಗಿ, ಹಲವು ವಿಶೇಷತೆಗಳೊಂದಿಗೆ 8 ವರ್ಷಗಳ ಹಿಂದೆ ಆರಂಭವಾದದ್ದು ಮಾಗೋಡ ಆಲೆಮನೆ ಹಬ್ಬ. ವರ್ಷದಿಂದ ವರ್ಷಕ್ಕೆ ಮಾಗೋಡ  ಆಲೆಮನೆ  ಹಬ್ಬ ಜಿಲ್ಲಾದ್ಯಂತ ಜನಪ್ರಿಯತೆ ಪಡೆಯುತ್ತಿದೆ. ಅಚ್ಚುಕಟ್ಟಾದ ವ್ಯವಸ್ಥೆ, ಸಂಘಟನೆಯ ಶಿಸ್ತು ಪ್ರತಿ ವರ್ಷ ಆಲೆಮನೆ ಹಬ್ಬದ ಯಶಸ್ಸಿಗೆ ಕಾರಣವಾಗುತ್ತಿದೆ.

     ಮಾಗೋಡಿನ ಆಲೆಮನೆ ಹಬ್ಬದಿಂದ ಪ್ರೇರಿತರಾಗಿ ತಾಲೂಕಿನ ಬೇರೆ ಬೇರೆ ಗ್ರಾಮೀಣ ಭಾಗಗಳಲ್ಲಿಯೂ ಕಳೆದ 4-5 ವರ್ಷಗಳಿಂದ  ಆಲೆಮನೆ  ಹಬ್ಬ  ನಡೆಯುತ್ತಿದೆ.‌ 

300x250 AD

ಸಾಂಸ್ಕೃತಿಕ ವೈಭವ:

     ಇಲ್ಲಿನ ಗೋವರ್ಧನ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ವೈಭವ ಅನಾವರಣಗೊಳ್ಳಲಿದೆ. ವಿವಿಧ ಜಾನಪದ ಕಲೆಗಳ ಪ್ರದರ್ಶನ ಈ ಬಾರಿಯ ವಿಶೇಷತೆಯಾಗಿದೆ. ಸ್ಥಳೀಯ ಕಲಾವಿದರಿಂದ ಕೋಲಾಟ, ಜಾನಪದ ನೃತ್ಯ, ಯಕ್ಷಗಾನ ಸಂಗೀತ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿವೆ.


* ಆಲೆಮನೆ ಸಂಸ್ಕೃತಿಯನ್ನು ಜೀವಂತವಾಗಿರಿಸುವುದು ನಮ್ಮ ಕಾರ್ಯಕ್ರಮದ ಮೂಲ ಉದ್ದೇಶ. ಮಾಗೋಡ ಆಲೆಮನೆ ಹಬ್ಬಕ್ಕೆ ವರ್ಷದಿಂದ ವರ್ಷಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಸ್ಥಳೀಯ ಕಾರ್ಯಕರ್ತರ ಶ್ರಮ, ಅಚ್ಚುಕಟ್ಟಾದ ಸಂಘಟನೆಯ ಮೂಲಕ ಜಿಲ್ಲೆಯಲ್ಲೇ ಉತ್ತಮ ಆಲೆಮನೆ ಹಬ್ಬ ಎಂಬ ಹೆಸರು ಪಡೆದಿದೆ.

    | ನರಸಿಂಹ ಭಟ್ಟ ಕುಂಕಿಮನೆ
ಮಾಗೋಡ ಆಲೆಮನೆ ಹಬ್ಬ ಸಮಿತಿ ಅಧ್ಯಕ್ಷ 

Share This
300x250 AD
300x250 AD
300x250 AD
Back to top