ಶಿರಸಿ: ತಾಲೂಕಿನ ಸುಧಾಪುರ ಕ್ಷೇತ್ರದಲ್ಲಿಯ ಶಾಲ್ಮಲಾ ನದೀ ತಟದಲ್ಲಿರುವ ಐತಿಹಾಸಿಕ ಸೋಂದಾ ಕೋಟೆಯಲ್ಲಿ ೭೬ನೇ ಗಣರಾಜ್ಯೋತ್ಸವನ್ನು ಉತ್ಸಾಹ ಭಕ್ತಿ ಶ್ರದ್ಧೆಯಿಂದ ಆಚರಿಸಲಾಯಿತು. ಹುಲೇಕಲ್ ಹೋಬಳಿಯ ನಾಡ ಕಛೇರಿಗೆ ಇತ್ತೀಚೆಗೆ ಕಂದಾಯ ನಿರೀಕ್ಷಕರಾಗಿ ಅಧಿಕಾರ ವಹಿಸಿಕೊಂಡ ಚಂದ್ರಕಾಂತ ಗೌಡ ಇಲಾಖೆಯ ಪರವಾಗಿ ಧ್ವಜಾರೋಹಣ ಮಾಡಿ ಆಗಮಿಸಿದ ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯ ಕೋರಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಅಧ್ಯಕ್ಷ ವಿಘ್ನೇಶ್ವರ ಹೆಗಡೆ ಬೊಮ್ಮನಳ್ಳಿ ಪ್ರಜಾರಾಜ್ಯೋತ್ಸವದ ಸಂತಸದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದು ಭಾವಿಸುತ್ತೇನೆ. ಸೋದೆ ಅರಸರ ಕಾಲ ಘಟ್ಟದಲ್ಲಿ ವೈಭವದಿಂದ ಲಕ್ಷಕ್ಕೂ ಮೀರಿದ ಜನಸಂಖ್ಯೆ ಇದ್ದು ಈ ಪ್ರದೇಶ ಹೈದರಾಲಿ ಮತ್ತು ಟಿಪ್ಪುವಿನ ಆಕ್ರಮಣದಿಂದಾಗಿ ನಾಶ ಹೊಂದಿದ್ದು ಇತಿಹಾಸ ಇಂತಹ ಪವಿತ್ರ ಭೂಮಿಯ ರಕ್ಷಣೆ ಸಂರಕ್ಷಣೆಯಲ್ಲಿ ಸೋಂದಾ ಜಾಗೃತ ವೇದಿಕೆ, ಪರಮ ಪೂಜ್ಯ ಶ್ರೀ ಸ್ವರ್ಣವಲ್ಲೀ ಶ್ರೀಗಳ ಮಾರ್ಗದರ್ಶನದಲ್ಲಿ ಕಟಿಬದ್ದವಾಗಿರುವದು ಶ್ಲಾಘನೀಯ. ಇಲ್ಲಿ ಪ್ರತಿವರ್ಷ ನಡೆಯುವ ಧ್ವಜವಂದನಾ ಕಾರ್ಯಕ್ರಮಕ್ಕೆ ಕಂದಾಯ ಇಲಾಖೆಯವರೊಂದಿಗೆ ಕೈಜೋಡಿಸುತ್ತ ಬಂದಿದ್ದು, ಮುಂದಿನ ದಿನಗಳಲ್ಲಿ ತಾಲೂಕಿನ ಇತರೇ ಇಲಾಖೆಗಳೂ ಸಹಿತ ಇದರಲ್ಲಿ ಪಾಲ್ಗೊಳ್ಳುವಂತಾಗಲೀ ಈ ನಿಟ್ಟಿನಲ್ಲಿ ಜಾಗೃತ ವೇದಿಕೆಯ ಸದಸ್ಯರೂ ಇನ್ನೂ ಪ್ರಯತ್ನಶೀಲರಾಗಿ ಎಂದು ಕರೆ ಇತ್ತರು. ಇಲ್ಲಿಯ ಸರ್ವತೋಮುಖ ಅಭಿವೃದ್ಧಿಗೆ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನ ನಿಮ್ಮೊಂದಿಗೆ ಸದಾ ಇರುತ್ತದೆ ಎಂದರು.
ಕರ್ನಾಟಕ ರಾಜ್ಯ ಜೀವ ವೈವಿಧ್ಯತಾ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಈ ವೇಳೆ ಉಪಸ್ಥಿತರಿದ್ದು ಭಾರತದ ಸಂವಿಧಾನ ನಮಗೆ ಅನೇಕ ಹಕ್ಕು ಸ್ವಾಮ್ಯತೆಗಳನ್ನು ನೀಡಿದ್ದು ನಾವು ಅದರ ಸದ್ಭಳಕೆಯೊಂದಿಗೆ ಬಾಳುವದು ಮತ್ತು ಸುತ್ತಲಿನ ಪರಿಸರ ಹಾಗೂ ವನ್ಯ ಜೀವಿಗಳನ್ನು ಬದುಕಲು ಬಿಡುವುದು ಆದ್ಯ ಕರ್ತವ್ಯವಾಗಿದೆ. ಐತಿಹಾಸಿಕ ಸೋಂದಾ ಕೋಟೆಯ ರಕ್ಷಣೆ ನಮ್ಮೆಲ್ಲರ ಹೊಣೆ ಎನ್ನುವುದರೊಂದಿಗೆ ಇಲ್ಲಿಯ ಪ್ರಾಚ್ಯ ವಸ್ತುಗಳನ್ನು ಶಿಲಾ ಮೂರ್ತಿಗಳ ಬೃಹತ್ ದೋಣಿಗಳ -ರಕ್ಷಣೆ ಮಾಡುವದರೊಂದಿಗೆ, ಇಲ್ಲಿಯ ಜೀವ ವೈವಿಧ್ಯದ ಹಾಗೂ ವೃಕ್ಷ ಸಂಕುಲಗಳನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ಅಷ್ಟೇ ಮುಖ್ಯ. ೨೪ ಎಕರೆ ಪ್ರದೇಶದಲ್ಲಿ ವ್ಯಾಪಿಸಿದ ಅರಮನೆ ಸ್ಥಳವನ್ನು ಸಮಗ್ರವಾಗಿ ಅಧ್ಯಯನಕ್ಕೊಳಪಡಿಸಿದಾಗ ಮಾತ್ರ ಸಂಪೂರ್ಣ ಮಾಹಿತಿ ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಭೈರುಂಬೆ ಗ್ರಾಮ ಪಂಚಾಯತ ಜವಾಬ್ದಾರಿ ಅಷ್ಟೇ ಮುಖ್ಯವಾಗಿದೆ. ಇಲ್ಲಿಯ ಕೆರೆ – ಕೋಟೆಗಳ – ವನ್ಯ ಜೀವಿ ತಾಣಗಳ ರಕ್ಷಣೆ ಸಂರಕ್ಷಣೆಯಲ್ಲಿ ಸೋಂದಾ ಜಾಗೃತ ವೇದಿಕೆ ರಾಜ್ಯದಲ್ಲಿಯೇ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಐತಿಹಾಸಿಕ ಸೋದೆ ಅರಸರ ರಾಜಧಾನಿ ಸ್ಥಳದಲ್ಲಿ ನಡೆಯುವ ಧ್ವಜವಂದನಾ ಕಾರ್ಯಕ್ಕೆ ತಾಲೂಕಿನ ಎಲ್ಲ ಸರಕಾರಿ ಇಲಾಖೆಗಳಿಂದ ಒಬ್ಬ ಪ್ರತಿನಿಧಿಯಾದರೂ ಭಾಗವಹಿಸುವಂತೆ ಮನವಿ ಮಾಡಲಾಗಿತ್ತು. ಅದಕ್ಕೆ ಈ ವರ್ಷ ಸ್ಪಂದಿಸಿ ಕರ್ನಾಟಕ ರಾಜ್ಯ ಜೀವವೈವಿಧ್ಯತಾ ಮಂಡಳಿಯಿಂದ ಮತ್ತು ಹುಲೇಕಲ್ ವಲಯ ಅರಣ್ಯ ಇಲಾಖೆಯಿಂದ ಪ್ರತಿನಿಧಿಗಳು, ಪ್ರಪ್ರಥಮವಾಗಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಜಾಗೃತ ವೇದಿಕೆಯ ಪದಾಧಿಕಾರಿಗಳು, ಊರನಾಗರೀಕರು, ಅರಣ್ಯ ಇಲಾಖೆ ಸೋಂದಾ ಬೀಟ್ ಫಾರೆಸ್ಟರ್ ಪ್ರಮೋದ ನಾಯ್ಕ, ಗ್ರಾಮ ಆಡಳಿತಾಧಿಕಾರಿಗಳಾದ ಕಾವೇರಿ ಮುಂಗರವಳ್ಳಿ ಸೋಂದಾ, ಪಲ್ಲವಿ ನಾಯ್ಕ, ಶಿರಸಿ ಗೌರಮ್ಮ ನಾಗಣ್ಣನವರ್ ಭೈರುಂಬೆ ಕಿರಣ ನಾಯ್ಕ ಹುಲೇಕಲ್ ಗ್ರಾಮ ಸಹಾಯಕರುಗಳಾದ ಅಲ್ಲೀಖಾನ್ ಸೋದೆ ಪೇಟೆ ಇನಾಮುಲ್ಲಾ ಖಾನ್ ಸೋದೇಪೇಟೆ, ಚರಣ ಕಮಾಟಗೇರಿ ಇದ್ದರು.
ಪ್ರಾರಂಭದಲ್ಲಿ ಧ್ವಜವಂದನೆಗೆ ಭಾಸ್ಕರ ಹೆಗಡೆ ಸಹಕರಿಸಿದರು. ಸದಸ್ಯ ರಾಮಚಂದ್ರ ಹೆಗಡೆ ಉಳ್ಳೀಕೊಪ್ಪ ಸ್ವಾಗತಿಸಿದರೆ ವೇದಿಕೆಯ ಕಾರ್ಯಾಧ್ಯಕ್ಷ ರತ್ನಾಕರ ಹೆಗಡೆ ಬಾಡಲಕೊಪ್ಪ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಗಂಗಾಧರ ಪರಾಂಜಪೆ ಅಭಾರಿ ಮನ್ನಿಸಿದರು. ಕಾರ್ಯದರ್ಶಿ ಶ್ರೀಧರ ಹೆಗಡೆ ಗುಡ್ಡೇಮನೆ, ಸದಸ್ಯ ಮಹಾಬಲೇಶ್ವರ ಹೆಗಡೆ ಬಂದೀಸರ ಸಹಕರಿಸಿದರು.