ಜೋಯಿಡಾ:ತಾಲೂಕಿನ ಹಾಗೂ ರಾಜ್ಯದ ಪ್ರಸಿದ್ಧ ಪುಣ್ಯ ಕ್ಷೇತ್ರ ಹಾಗೂ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಶ್ರೀಕ್ಷೇತ್ರ ಉಳವಿ ಚೆನ್ನಬಸವೇಶ್ವರ ಜಾತ್ರೆಯ ಪೂರ್ವಭಾವಿ ಸಭೆಯು ಚೆನ್ನ ಬಸವಣ್ಣನ ಸಭಾಭವನದಲ್ಲಿ ಜೋಯಿಡಾ ತಹಶೀಲ್ದಾರ್ ಮಂಜುನಾಥ ಮುನ್ನೋಳ್ಳಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ತಹಶೀಲ್ದಾರ್ ಮಂಜುನಾಥ ಮುನ್ನೋಳ್ಳಿ ಉಳವಿ ಜಾತ್ರೆಯು ಫೆಬ್ರುವರಿ 4 ರ ರಥ ಸಪ್ತಮಿಯ ದಿನದಿಂದ ಪ್ರಾರಂಭವಾಗಲಿದ್ದು ಫೆಬ್ರುವರಿ 15 ರವರೆಗೆ ನಡೆಯಲಿದೆ.ಫೆಬ್ರುವರಿ 13 ರಂದು ಸಂಜೆ 4 ಗಂಟೆಗೆ ಮಹಾರಥೋತ್ಸವ ನಡೆಯಲಿದ್ದು ಎಲ್ಲರೂ ಸಹಕರಿಸಬೇಕು,ಈ ಬಾರಿ ಎತ್ತಿನಗಾಡಿಗಳಿಗೆ ಅಷ್ಟೇ ಅವಕಾಶ ಬೇರೆ ಪ್ರಾಣಿಗಳಿಗೆ ಚಕ್ಕಡಿ ಗಾಡಿ ಕಟ್ಟಿಕೊಂಡು ಬರಬಾರದು,ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ಕಸದ ನಿಯಂತ್ರಣ ಮಾಡಿ,ಮಾದಕ ವಸ್ತುಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವುದಾಗಿ, ಬೆಲೆಬಾಳುವ ಬಂಗಾರದಂತಹ ವಸ್ತು,ಇನ್ನಿತರ ವಸ್ತುಗಳನ್ನು ತರಬೇಡಿ,ನೀರಿನಲ್ಲಿ ಈಜಾಡಬೇಡಿ,ಕುಡಿಯುವ ನೀರನ್ನು ಸರಿಯಾಗಿ ಬಳಸಿ,ಪೋಲು ಮಾಡಬೇಡಿ. ಎಲ್ಲರೂ ಜಾತ್ರೆಯ ಕಾರ್ಯಕ್ರಮಕ್ಕೆ ಸಹಕರಿಸಿ ಎಂದು ಹೇಳಿದರು. ಜಾತ್ರೆಗೆ ಬರುವ ಭಕ್ತರು ಸಭೆಯಲ್ಲಿ ಮಾತನಾಡಿ ಕಳೆದ ವರ್ಷ ಜಾತ್ರೆಯಲ್ಲಿ ಜನ,ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದ್ದು,ಈ ಬಾರಿ ಜನ, ಜಾನುವಾರುಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಕುಡಿಯುವ ನೀರು ಸರಬರಾಜು ಇಲಾಖೆಗೆ ತಿಳಿಸಿದರು. ಪೊಟೋಳಿ – ಗುಂದ – ಉಳವಿ ರಸ್ತೆ ಕೂಡಲೇ ಸರಿಪಡಿಸಿ, ಕುಂಬಾರವಾಡಾ – ಉಳವಿ – ಶಿವಪುರ ರಸ್ತೆ ಪಡಿಸುವಂತೆ ಹಾಗೂ ಕಿಂದ್ರಿ ತಿರುವು ಹಾಗೂ ವಡಕಲ್ ತಿರುವು ಸೇರಿದಂತೆ ಇನ್ನಿತರ ಹಲವು ತಿರುವುಗಳನ್ನು ಅಗಲೀಕರಣ ಮಾಡಬೇಕು ಇಲ್ಲವಾದಲ್ಲಿ ಅಪಘಾತವಾಗುವ ಸಂಭವವಿದೆ ಎಂದು ಲೋಕೋಪಯೋಗಿ ಇಲಾಖೆಯವರಿಗೆ ಸಭೆಯಲ್ಲಿ ಸೂಚಿಸಲಾಯಿತು.
ಸಿಪಿಐ ಚಂದ್ರಶೇಖರ ಹರಿಹರ ಮಾತನಾಡಿ ಜಾತ್ರೆಗೆ ಬರುವ ಭಕ್ತರು ವಾಹನ ಚಾಲನೆ ಮಾಡುವಾಗ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ,ನಿಗದಿತ ಜಾಗದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಪಾಲಿಸಿ,ಶಿವಪುರ ತೂಗು ಸೇತುವೆಯ ಮೇಲೆ ಬರುವಾಗ ಸಂಬಂಧಿಸಿದ ನಿಯಮಗಳನ್ನು ಪಾಲಿಸುವಂತೆ,ಕುಡಿಯುವ ನೀರಿನಲ್ಲಿ ಎತ್ತುಗಳನ್ನು ತೋಳಯದೇ, ನೀರನ್ನು ಪೋಲು ಮಾಡಬಾರದು. ಜಾತ್ರೆಯಲ್ಲಿ ಸರಾಯಿ ಮಾರಾಟ,ಕುಡಿದು ಗಲಾಟೆ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಇನ್ನುಳಿದಂತೆ ಭಕ್ತರಿಗೆ, ಜಾನುವಾರುಗಳಿಗೆ 24×7 ಔಷಧ ಹಾಗೂ ಸಹಾಯವಾಣಿ ಸಿಗುವಂತೆ ವ್ಯವಸ್ಥೆ ಆಗಬೇಕು, ಪೊಟೋಳಿ, ಕಾನೇರಿ, ಕುಂಬಾರವಾಡಾ ಸೇರಿದಂತೆ ಇನ್ನಿತರ ಕಡೆ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು ಎಂದು ಸಭೆಯಲ್ಲಿ ಚರ್ಚೆಯಾಯಿತು. ಸಭೆಯಲ್ಲಿ ಉಳವಿ ಗ್ರಾಮ ಪಂಚಾಯತ ಅಧ್ಯಕ್ಷ ಮಂಜುನಾಥ ಮೊಕಾಶಿ, ಉಳವಿ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಸಂಜಯ ಕಿತ್ತೂರ, ಉಪಾದ್ಯಕ್ಷ ಪ್ರಕಾಶ ಕಿತ್ತೂರ,ಮಾಜಿ ಅಧ್ಯಕ್ಷ ಗಂಗಾಧರ ಕಿತ್ತೂರ, ಲೋಕೋಪಯೋಗಿ ಇಲಾಖೆಯ ಅಧಿಕಾರಿ ಶಿವಪ್ರಕಾಶ,ಗುಂದ ವಲಯ ಅರಣ್ಯಾಧಿಕಾರಿ ನೀಲಕಂಠ ದೇಸಾಯಿ, ಕುಂಬಾರವಾಡಾ ವಲಯ ಅರಣ್ಯಾಧಿಕಾರಿ ಎ.ಎಸ್.ಬೈಲಾ,ಹೆಸ್ಕಾಂ ಇಲಾಖೆಯ ಅಧಿಕಾರಿ ದೀಪಕ ನಾಯ್ಕ,ಪಿಎಸ್ಐ ಮಹೇಶ ಮಾಳಿ,ಪ್ರದಾನ ಅರ್ಚಕರಾದ ಶಂಕರಯ್ಯ ಕಲ್ಮಠ ಶಾಸ್ತ್ರೀ, ಪಂಚಾಯತ ಅಭಿವೃದ್ಧಿ ಅಧಿಕಾರಿ ಮಹಮ್ಮದ್ ಹನೀಫ್ ಸಯ್ಯದ್ ಇನ್ನಿತರ ಅಧಿಕಾರಿ ವರ್ಗ,ಭಕ್ತರು ಸಭೆಯಲ್ಲಿ ಭಾಗವಹಿಸಿದ್ದರು.