ಹೊನ್ನಾವರ : ಬೈಕ್ ಸವಾರರು ಹೆಲ್ಮೇಟ್ ಕಡ್ಡಾಯವಾಗಿ ಧರಿಸಿ, ಹೆಲ್ಮೇಟ್ ಇರುವುದು ತಲೆಯ ರಕ್ಷಣೆಗೆ ಹೊರತು ಹೇರ್ ಸ್ಟೈಲ್ ಗೆ ಅಲ್ಲ. ರಸ್ತೆ ನಿಯಮ ಕಟ್ಟಾಗಿ ಪಾಲಿಸಿ ಎಂದು ಹಿರಿಯ ಸಿವಿಲ್ ಜಡ್ಜ್ ನ್ಯಾಯಾಧೀಶ ಬಿ.ಸಿ. ಚಂದ್ರಶೇಖರ ಹೆಳಿದರು.
ಅವರು ಪಟ್ಟಣದ ತಗ್ಗುಪಾಳ್ಯದ ಜೀವನಜ್ಯೋತಿ ಐಟಿಐ ಕಾಲೇಜಿನ ಸಭಾಭವನದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ವತಿಯಿಂದ ಗುರುವಾರ ನಡೆದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಪಘಾತದ ಕಾರಣಗಳ ಬಗ್ಗೆ ಯೋಚಿಸುವ ಮೊದಲು ಅವಲಂಬಿತರ ಬಗ್ಗೆ ಯೋಚನೆ ಮಾಡಬೇಕು. ರಸ್ತೆ ನಿಯಮ ಕಡ್ಡಾಯವಾಗಿ ಪಾಲಿಸಿ ಎಚ್ಚರಿಕೆಯಿಂದ ವಾಹನ ಚಲಾಯಿಸಿ ವಾಹನ ಅಪಘಾತ ತಪ್ಪಿಸಿ ಎಂದರು.
ಇದೇ ಜನವರಿಯಲ್ಲಿ ಹೊನ್ನಾವರದ ಶರಾವತಿ ಸೇತುವೆ ಮೇಲೆ ಮೂವರು ಮೃತಪಟ್ಟರು. ನಂತರ ಇನ್ನೊಬ್ಬ ಯುವತಿ ಮೃತಪಟ್ಟಳು, ಅರೆಬೈಲ್ ಘಟ್ಟದಲ್ಲಿ ಹತ್ತು ಜನರು ಮೃತಪಟ್ಟರು. ಎಷ್ಟೆಲ್ಲ ಕುಟುಂಬಗಳು ಅನಾಥವಾದವು. ಅಪಘಾತದಿಂದ ಸತ್ತರೆ ಇಡೀ ಕುಟುಂಬ ಬೀದಿಗೆ ಬರುತ್ತದೆ. ಅವಲಂಬಿತರು ಅನಾಥವಾಗುತ್ತಾರೆ ಎಂದರು.
ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಧೀಶ ಈರಣ್ಣ ಹುಣಸಿಕಟ್ಟಿ ಮಾತನಾಡಿ, ಪ್ರತಿದಿನ ಅಪಘಾತಗಳು ಒಂದಿಲ್ಲೊಂದು ಭಾಗಗಳಲ್ಲಿ ನಡೆಯುತ್ತಿವೆ. ರಸ್ತೆ ನಿಯಮ ಪಾಲಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತ ತಪ್ಪಿಸಬಹುದು. ಬಹುತೇಕ ಅಪಘಾತಗಳು ನಮ್ಮ ನಿಷ್ಕಾಳಜಿಯಿಂದಲೆ ಸಂಭವಿಸುತ್ತವೆ ಎಂದರು.
ತಹಸೀಲ್ದಾರ ಪ್ರವೀಣ ಕರಾಂಡೆ ರಸ್ತೆ ಸುರಕ್ಷತಾ ನಿಯಮಗಳ ಕರಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ ಲೈಸೆನ್ಸ್ ಇಲ್ಲದೇ ವಾಹನ ಚಲಾಯಿಸಬಾರದು. ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು. ಅಪ್ರಾಪ್ತರಿಗೆ ವಾಹನ ಚಲಾವಣೆಗೆ ಅವಕಾಶ ಕೊಡಬೇಡಿ, ಅವಕಾಶ ಕೊಟ್ಟರೆ ದಂಡ ಬೀಳುವುದು ಪಾಲಕರಿಗೆ ಎಂದರು.
ಪಿ.ಎಸ್.ಐ. ಮಮತಾ ನಾಯ್ಕ ಮಾತನಾಡಿ ಎಲ್ಲರೂ ರಸ್ತೆ ನಿಯಮಗಳನನ್ನು ಪಾಲನೆ ಮಾಡಬೇಕು ಎಂದರು. ಎ.ಆರ್.ಟಿ.ಒ. ಸುಬ್ರಾಯ ಹೆಗಡೆ ಮಾತನಾಡಿ ವರದಿಯ ಪ್ರಕಾರ ದೇಶದಲ್ಲಿ ರಸ್ತೆ ಅಪಘಾತದಲ್ಲಿ ಪ್ರತಿವರ್ಷ ೧.೬೯ ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಅಂದರೆ ಪ್ರತಿದಿನ ೪೬೦, ಪ್ರತಿತಾಸಿಗೆ ೧೯ ಜನರು ಸಾಯುತ್ತಿದ್ದಾರೆ. ಅತೀವೇಗದ ವಾಹನ ಚಾಲನೆ, ಅಪಾಯಕರ ರೀತಿಯಲ್ಲಿ ವಾಹನ ಚಾಲನೆ ಮಾಡಬಾರದು ಎಂದರು.
ಬಿ.ಆರ್.ಸಿ. ವಿನಾಯಕ ಅವಧಾನಿ, ಜೀವನ ಜ್ಯೋತಿ ಕಾಲೇಜಿನ ನಿರ್ದೇಶಕ ಅಂತೋನಿ ರಾಜು ಮಾತನಾಡಿದರು. ವೇದಿಕೆಯಲ್ಲಿ ಸರಕಾರಿ ಅಭಿಯೋಕರಾದ ಸಂಪದಾ ಗುನಗ, ಪೂರ್ಣಿಮಾ ನಾಯ್ಕ, ವಕೀಲರ ಸಂಘದ ಅಧ್ಯಕ್ಷ ವಿ. ಎಂ. ಭಂಡಾರಿ, ಕಾರ್ಯದರ್ಶಿ ಉದಯ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ಮೋಟಾರು ವಾಹನ ನಿರೀಕ್ಷಕ ಶ್ರೇಯಸ್ ಸ್ವಾಗತಿಸಿದರು. ಮೋಟಾರು ವಾಹನ ರವೀಂದ್ರ ಕೆ.ಎಸ್. ವಂದಿಸಿದರು. ಶಿಕ್ಷಕ ಸಂದೀಪ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಮಾರಥೋಮಾ ಶಾಲೆಯ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಜೀವನಜ್ಯೋತಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.