ಕಾರವಾರ: ಅಲಗೇರಿ ವಿಮಾನ ನಿಲ್ದಾಣದ 76 ಜನ ನಿರಾಶ್ರಿತರಿಗೆ ಪರಿಹಾರ ವಿತರಣೆಯಲ್ಲಿ ಇರುವ ಅಸಮಾಧಾನವನ್ನು ಹೊಗಲಾಡಿಸಿ, ಅವರಿಗೆ ಮನೆಗಳನ್ನು ಕಟ್ಟಿಕೊಳ್ಳಲು ಚೀಟಿ ಎತ್ತುವ ಮೂಲಕ 60*90 ಜಾಗವನ್ನು ನೀಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಏಜೇನ್ಸಿ ಲಿಮಿಟೆಡ್ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಕೆ. ಸೈಲ್ ಹೇಳಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ, ಅಲಗೇರಿ ನಿರಾಶ್ರಿತರಿಗೆ ನಿವೇಶನ ಹಂಚುವ ಕುರಿತ ಸಭೆಯಲ್ಲಿ ಮಾತನಾಡಿದರು.
ಜಾಗವನ್ನು ಆಳತೆ ಮಾಡುವಾಗ ರಿಜಿಸ್ಟ್ರೇಷನ್ ಕಚೇರಿಯಿಂದ ಮೂರು ವರ್ಷದ ದಾಖಲೆಗಳನ್ನು ತೆಗೆದುಕೊಂಡು ಪರಿಗಣಿಸಿ ಮಾಡಿರುವುದರಿಂದ ನಾಲ್ಕು ರೀತಿಯಲ್ಲಿ ಬೆಲೆ ಬಂದಿದ್ದು ಅದರಿಂದ ನಿರಾಶ್ರಿತರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮೊದಲು ನೀಡಿದ್ದ 5 ಗುಂಟೆ ಜಾಗದಲ್ಲಿ 3040 ರಂತೆ ನಿರಾಶ್ರಿತರಿಗೆ ಜಾಗವನ್ನು ನೀಡಲಾಗಿತ್ತು. ಈ ಜಾಗದಿಂದ ಸುವ್ಯವಸ್ಥಿತವಾದ ಮನೆಗಳನ್ನು ನಿರ್ಮಿಸಲು ಸಾಧ್ಯವಾಗದೆ ಇರುವ ಕಾರಣ ಅವರಿಗೆ 6090 ಜಾಗವನ್ನು ಹಸ್ತಾಂತರಿಸಲು ಸೂಚಿಸಲಾಗಿದೆ ಹಾಗೂ ಎಕ್ಸ್ಗ್ರೇಶಿಯಾ 11 ಕೋಟಿ ಅನುದಾನವನ್ನು ಸಹ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಈ ಅನುದಾನ ಬಿಡುಗಡೆಯಾದ ತಕ್ಷಣ ನಿರಾಶ್ರೀತರಿಗೆ ಯಾರಿಗೂ ಅನ್ಯಾಯವಾಗದಂತೆ ಸುಸಜ್ಜಿತವಾದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು.
ವಿಮಾನ ನಿಲ್ದಾಣಕ್ಕೆ ಇನ್ನೂ ಅಗತ್ಯವಿರುವ 6 ಎಕರೆ ಜಾಗವನ್ನು ಪರಿಶೀಲಿಸಿ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದರು. ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹಾಗೂ ಅಲಗೇರಿ ವಿಮಾನ ನಿಲ್ದಾಣದ ನಿರಾಶ್ರಿತರು ಉಪಸ್ಥಿತರಿದ್ದರು.